ಆಹಾರ ಪತ್ಯದ ಬಗ್ಗೆ ತಿಳಿಸಿಲ್ಲ| ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮಾತ್ರ ಲಸಿಕೆ ತೆಗೆದುಕೊಳ್ಳಬಾರದು| ಮೊದಲ ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡವರು 28 ದಿನಗಳ ನಂತರ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲವಾದರೆ ಲಸಿಕೆ ಪರಿಣಾಮಕಾರಿ ಆಗುವುದಿಲ್ಲ: ಮಂಜುನಾಥ ಪ್ರಸಾದ್|
ಬೆಂಗಳೂರು(ಫೆ.10): ಕೋವಿಡ್ ಲಸಿಕೆ ಹಾಕಿಸಿಕೊಂಡವರು ಮದ್ಯಪಾನ ಮಾಡಬಾರದೆಂದು ಲಸಿಕೆ ಮಾರ್ಗಸೂಚಿಯಲ್ಲಿ ತಿಳಿಸಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ಮಂಗಳವಾರ ಪಾಲಿಕೆಯ ಆಡಳಿತಾಧಿಕಾರಿ ಗೌರವ್ ಗುಪ್ತ ಅವರೊಂದಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ‘ಎರಡನೇ ಹಂತದ’ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಕೋವಿಡ್ ಲಸಿಕೆ ಹಾಕಿಸಿಕೊಂಡ ಮೇಲೆ ಮದ್ಯಪಾನ ಮಾಡಬಾರದು ಹಾಗೂ ಲಸಿಕೆ ಹಾಕಿಸಿಕೊಂಡ 28 ದಿನ ಆಹಾರದ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಕೋವಿಡ್ ಲಸಿಕಾ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿಲ್ಲ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮಾತ್ರ ಲಸಿಕೆ ತೆಗೆದುಕೊಳ್ಳಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಮೊದಲ ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡವರು 28 ದಿನಗಳ ನಂತರ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲವಾದರೆ ಲಸಿಕೆ ಪರಿಣಾಮಕಾರಿ ಆಗುವುದಿಲ್ಲ ಎಂದರು.
ಲಸಿಕೆ ಹಾಕಿಸಿಕೊಂಡವರಲ್ಲಿ ಯಾರಿಗೂ ಗಂಭೀರ ಸ್ವರೂಪದ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಈವರೆಗೆ ನಗರದಲ್ಲಿ 80 ಸಾವಿರ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಎರಡನೇ ಹಂತದಲ್ಲಿ ಬಿಬಿಎಂಪಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಬಿಬಿಎಂಪಿಯ 33 ಸಾವಿರ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕಂದಾಯ ಹಾಗೂ ಪೊಲೀಸ್ ಇಲಾಖೆಯ 27 ಸಾವಿರ ಜನ ಸೇರಿದಂತೆ ಒಟ್ಟು 60 ಸಾವಿರ ಮುಂಚೂಣಿ ಯೋಧರಿಗೆ ಒಂದು ವಾರದಲ್ಲಿ ಕೋವಿಡ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದ ಒಳಗಿದ್ದು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಸರ್ವೇ ಕಾರ್ಯವನ್ನು ಮುಂದಿನ ವಾರದಿಂದ ಪ್ರಾರಂಭಿಸಲಾಗುವುದು ಎಂದರು.
ಕೊರೋನಾ ಲಸಿಕೆ ಪಡೆದುಕೊಂಡ ರೋಹಿಣಿ ಸಿಂಧೂರಿ 'ಅಡ್ಡ ಪರಿಣಾಮ ಇಲ್ಲ'
80000 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
ಮೊದಲ ಹಂತದಲ್ಲಿ 1.83 ಲಕ್ಷ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಗೆ ಹೆಸರು ದಾಖಲಿಸಿದ್ದಾರೆ. ಈ ಪೈಕಿ 80 ಸಾವಿರ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳದೆ ಇರುವವರಿಗೆ ಮತ್ತೊಂದು ಸುತ್ತಿನ ಅವಕಾಶ ನೀಡಲಾಗುತ್ತಿದೆ. ಕೋವಿಡ್ ಲಸಿಕೆ ಪರಿಣಾಮಕಾರಿಯಾಗ ಬೇಕಾದರೆ, ನಗರದ ಶೇ.70 ರಷ್ಟು ಜನ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ಸಾರ್ವಜನಿಕರಲ್ಲಿ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗುತ್ತದೆ. ಇಲ್ಲವಾದರೆ ಕೋವಿಡ್ ಸೋಂಕು ಹಬ್ಬುವುದನ್ನು ತಡೆಯುವುದು ಕಷ್ಟವಾಗಲಿದೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.
ಲಸಿಕೆ ಪಡೆಯಲು ನಿರಾಸಕ್ತಿ
ಮಂಗಳವಾರ ಬಿಬಿಎಂಪಿ ಆಡಳಿತಾಧಿಕಾರಿ, ಆಯುಕ್ತರು ಹಾಗೂ ವಿಶೇಷ ಆಯುಕ್ತರು ಸೇರಿದಂತೆ ಹಲವರು ಕೋವಿಡ್ ಲಸಿಕೆ ಹಾಕಿಸಿಕೊಂಡರೂ ಸಹ ಬಿಬಿಎಂಪಿಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಾರದಿರುವುದು ಕಂಡು ಬಂದಿತು.