ಬಳ್ಳಾರಿ ಬಂದ್ ಯಶಸ್ವಿಗೊಳಿಸಿ; ಹೋರಾಟಕ್ಕೆ ಸಜ್ಜಾಗಿ| ಹೋರಾಟ ಸಮಿತಿ ಸಭೆಯಲ್ಲಿ ಕರೆ| ಜಿಲ್ಲೆ ತುಂಡಾಗಲು ಬಿಡಬಾರದು| ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು| ಆನಂದ ಸಿಂಗ್ ಅವರಿಗೆ ವಿಜಯನಗರದ ಮೇಲೆ ಆ ಪರಿ ಪ್ರೀತಿ ಇದ್ದರೆ ಬಳ್ಳಾರಿ ಜಿಲ್ಲೆಯನ್ನೇ ವಿಜಯನಗರ ಎಂದು ಹೆಸರಿಡಲಿ: ಉಗ್ರಪ್ಪ|
ಬಳ್ಳಾರಿ(ನ.25): ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಕರೆ ನೀಡಿರುವ ನ. 26ರ ‘ಬಳ್ಳಾರಿ ಬಂದ್’ ಯಶಸ್ವಿಗೊಳಿಸಲು ‘ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ’ ವಿವಿಧ ಸಂಘಟನೆಗಳು, ಸಾರ್ವಜನಿರಲ್ಲಿ ಮನವಿ ಮಾಡಿತು. ನಗರದ ಗಾಂಧಿಭವನದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಜನಪರ ಹೋರಾಟಗಾರರ ಪೂರ್ವಭಾವಿ ಸಭೆಯಲ್ಲಿ ಈ ಮನವಿ ಮಾಡಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಮಿತಿಯ ಮುಖಂಡರು ಹಾಗೂ ಹೋರಾಟಗಾರರು, ಸಚಿವ ಆನಂದ ಸಿಂಗ್ ಅವರ ರಾಜಕೀಯ ಸ್ವಾರ್ಥಕ್ಕಾಗಿ ಬಳ್ಳಾರಿಯನ್ನು ಇಬ್ಭಾಗ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಅಕ್ಷಮ್ಯ ಅಪರಾಧ. ಬಳ್ಳಾರಿ ಜಿಲ್ಲೆ ರಚನೆಯ ಚಾರಿತ್ರಿಕ ಹಿನ್ನೆಲೆ ತಿಳಿಯದೆ ಸರ್ಕಾರ ಈ ಧೋರಣೆ ಕೈಗೊಂಡಿದೆ ಎಂದು ಟೀಕಿಸಿದರಲ್ಲದೆ, ‘ಬಳ್ಳಾರಿ ಬಂದ್’ ಯಶಸ್ವಿಗೊಳಿಸಬೇಕು. ಬಳಿಕ ಸರ್ಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯುವ ವರೆಗೆ ಹೋರಾಟ ಕೈಗೆತ್ತಿಕೊಳ್ಳುವ ಕುರಿತು ಸಭೆಯಲ್ಲಿ ನಿರ್ಣಯಿಸಿದರು. ಜಿಲ್ಲೆಯನ್ನು ವಿಭಜಿಸುವ ಸರ್ಕಾರದ ಕ್ರಮವನ್ನು ಖಂಡಿಸಿ ನಡೆಯುತ್ತಿರುವ ಹೋರಾಟದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ನ. 26ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ‘ಬಳ್ಳಾರಿ ಬಂದ್’ ಮಾಡಲಾಗುವುದು. ಈ ಸಂಬಂಧ ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೋರಾಟ ಸಮಿತಿಯ ಮುಖಂಡರು ಸಭೆಯಲ್ಲಿ ತಿಳಿಸಿದರು.
ಯಾರು ಏನೇ ಹೇಳಿದರೂ ಕರ್ನಾಟಕ ಬಂದ್ ಹಿಂಪಡೆಯುವುದಿಲ್ಲ : ವಾಟಾಳ್ ನಾಗರಾಜ್
ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರು ಬಳ್ಳಾರಿ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ತುಂಡಾಗಿಸಲು ಬಿಡಬಾರದು. ಪಕ್ಷಾತೀತವಾಗಿ ಹೋರಾಟ ಕೈಗೆತ್ತಿಕೊಳ್ಳಬೇಕಾಗಿದೆ. ಜನಪರ ಹೋರಾಟಗಾರರು, ಎಲ್ಲ ಸಂಘ, ಸಂಸ್ಥೆಗಳು, ಕನ್ನಡಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಳವಳಿ ರೂಪಿಸಬೇಕಾಗಿದೆ ಎಂದರು.
ಹೋರಾಟ ಸಮಿತಿಯ ಸಿರಿಗೇರಿ ಪನ್ನರಾಜ್ ಮಾತನಾಡಿದರು. ಕುಡಿತಿನಿ ಶ್ರೀನಿವಾಸ್, ಪುರುಷೋತ್ತಮಗೌಡ, ಚಾನಾಳ್ ಶೇಖರ್, ವಿಜಯಕುಮಾರ್, ಬಂಡೆಪ್ಪ, ಪಂಪಾಪತಿ, ಗಂಗಾವತಿ ವೀರೇಶ್, ಟಿ.ಜಿ. ವಿಠಲ್, ಗಂಗೀರೆಡ್ಡಿ, ರವಿಕುಮಾರ್ ಹಾಗೂ ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಆನಂದ ಸಿಂಗ್ ಸ್ವಾರ್ಥಕ್ಕಾಗಿ ಬಳ್ಳಾರಿ ಜಿಲ್ಲೆ ಇಬ್ಭಾಗ ಸರಿಯೇ?
ಬಳ್ಳಾರಿ ಜಿಲ್ಲೆಯ ವಿಭಜನೆ ಮಾಡುವ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ಅವೈಜ್ಞಾನಿಕ ಹಾಗೂ ಆತುರದ ನಿಲುವು ತೆಗೆದುಕೊಂಡಿದ್ದಾರೆ. ಸರ್ಕಾರದ ಧೋರಣೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಕೂಡಲೇ ಸರ್ಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯನ್ನು ತುಂಡಾಗಿಸಲು ತುದಿಗಾಲಲ್ಲಿ ನಿಂತಿರುವ ಮುಖ್ಯಮಂತ್ರಿ, ಏಕಾಏಕಿ ಈ ನಿರ್ಧಾರಕ್ಕೆ ಕಾರಣ ಏನು ? ಎಂದು ಪ್ರಶ್ನಿಸಿದರು. ಬಳ್ಳಾರಿ ಜಿಲ್ಲೆಯ ವಿಭಜನೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆ ಕರೆದಿಲ್ಲ. ಜಿಲ್ಲೆಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಜತೆ ಚರ್ಚಿಸಿಲ್ಲ. ಪಕ್ಷಾಂತರ ಮಾಡಿ ತಮಗೆ ಅಧಿಕಾರ ನೀಡಿದ ಆನಂದಸಿಂಗ್ ಅವರ ಋುಣ ತೀರಿಸಬೇಕು ಎಂಬ ಏಕೈಕ ಕಾರಣಕ್ಕೆ ಚಾರಿತ್ರಿಕ ಹಿನ್ನೆಲೆಯ ಬಳ್ಳಾರಿಯನ್ನು ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
'ಆನಂದ ಸಿಂಗ್‌ಗಾಗಿ ಬಳ್ಳಾರಿ ಇಬ್ಭಾಗ'
ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ವಿಭಜನೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಎನ್ನುವುದಾದರೆ ಹೊಸಪೇಟೆ ಪಕ್ಕದಲ್ಲಿಯೇ ಇರುವ ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಹೂಳು ತುಂಬಿಕೊಂಡಿದೆ. ಇದರಿಂದ ಜಿಲ್ಲೆಯ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹೂಳು ತೆಗೆಯುವ ಸಂಬಂಧ ಆನಂದ ಸಿಂಗ್ ಎಷ್ಟರ ಮಟ್ಟಿಗೆ ಪ್ರಯತ್ನ ಮಾಡಿದ್ದಾರೆ? ಸಚಿವ ಸಿಂಗ್‌ಗೆ ಬಹಿರಂಗ ಸವಾಲು ಹಾಕುತ್ತೇನೆ. ತಾವು ಈ ಸರ್ಕಾರದ ಮಂತ್ರಿಗಳಾಗಿ ಜಲಾಶಯದ ಹೂಳೆತ್ತಲು ಏನೇನು ಕ್ರಮ ಕೈಗೊಂಡಿದ್ದೀರಿ? ಎಂದು ಉಗ್ರಪ್ಪ ಕೇಳಿದರು.
ಹೊಸಪೇಟೆ ಕೂಗಳತೆ ದೂರದಲ್ಲಿಯೇ ಇರುವ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಪ್ರವಾಸಿಗರು ಸ್ನಾನ ಮಾಡಲು ಸ್ನಾನಗೃಹಗಳಿಲ್ಲ. ಕುಡಿಯುವ ನೀರಿನ ಸೌಕರ್ಯವಿಲ್ಲ. ರಾತ್ರಿವೇಳೆ ವಿದ್ಯುತ್ ದೀಪಗಳಿಲ್ಲ. ಹಂಪಿ ವೀಕ್ಷಣೆಗೆ ಬರುವವರಿಗೆ ಕನಿಷ್ಠ ಸೌಕರ್ಯಗಳನ್ನು ಸಹ ಕಲ್ಪಿಸಲು ಆನಂದಸಿಂಗ್ ಅವರಿಂದಾಗಿಲ್ಲ. ಹೀಗಿರುವಾಗ ಯಾವ ಅಭಿವೃದ್ಧಿಯ ಕನಸು ಹೊತ್ತು ಹೊಸ ಜಿಲ್ಲೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಆನಂದ ಸಿಂಗ್ ಅವರಿಗೆ ವಿಜಯನಗರದ ಮೇಲೆ ಆ ಪರಿ ಪ್ರೀತಿ ಇದ್ದರೆ ಬಳ್ಳಾರಿ ಜಿಲ್ಲೆಯನ್ನೇ ವಿಜಯನಗರ ಎಂದು ಹೆಸರಿಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ನಿಮ್ಮ ಸ್ವಾರ್ಥಕ್ಕಾಗಿ ಅಭಿವೃದ್ಧಿ ಹೆಸರಿನಲ್ಲಿ ಚಾರಿತ್ರಿಕ ಹಿನ್ನೆಲೆ ಇರುವ ಬಳ್ಳಾರಿಯನ್ನು ತುಂಡು ಮಾಡಬೇಡಿ ಎಂದರಲ್ಲದೆ, ಜಿಲ್ಲಾ ವಿಭಜನೆ ಹೋರಾಟಕ್ಕೆ ನಾವು ಬೆಂಬಲಿಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಮಾತನಾಡಿ, ಜಿಲ್ಲೆಯ ಒಬ್ಬೇ ಒಬ್ಬ ಶಾಸಕನ ಸ್ವಾರ್ಥಕ್ಕಾಗಿ ಬಳ್ಳಾರಿಯನ್ನು ತುಂಡು ಮಾಡಲು ನಿರ್ಧಾರ ಕೈಗೊಂಡಿರುವ ಈ ಸರ್ಕಾರ ಎಷ್ಟರ ಮಟ್ಟಿಗೆ ಜನಪರವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದರಲ್ಲದೆ, ಕಾಂಗ್ರೆಸ್ ಸರ್ಕಾರ ಬೀಳಿಸಿ, ಬಿಜೆಪಿ ಅಧಿಕಾರಕ್ಕೆ ತಂದ ಕಾಣಿಕೆಯಾಗಿ ಯಡಿಯೂರಪ್ಪ ಬಳ್ಳಾರಿ ತುಂಡು ಮಾಡಲು ಹೊರಟಿದ್ದಾರೆ. ಪ್ರತ್ಯೇಕ ಜಿಲ್ಲೆ ವಿರೋಧಿಸುವ ಬಿಜೆಪಿ ಶಾಸಕರು ಬಹಿರಂಗವಾಗಿ ಹೊರಗಡೆ ಬರಬೇಕು. ಬೆಳಗಾವಿಯ ಸ್ಥಿತಿಯ ಬಳ್ಳಾರಿಗೆ ಬರಲಿದ್ದು, ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.
ವಿಜಯೇಂದ್ರ ಲೂಟಿ ತನಿಖೆ ನಡೆಸಿ
ಕಾಂಗ್ರೆಸ್‌ನ್ನು ಟೀಕಿಸುವ ಯಾವುದೇ ನೈತಿಕತೆ ವಿಜಯೇಂದ್ರ ಅವರಿಗೆ ಇಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು. ಆಪರೇಷನ್ ಕಮಲ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜಕಾರಣದಲ್ಲಿ ತಾಳ್ಮೆ ಇಟ್ಟುಕೊಳ್ಳದೆ ನೀವು, ನಿಮ್ಮ ತಂದೆಯೇ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಲೂಟಿ ಹೊಡೆಯುತ್ತಿದ್ದೀರಿ. ನಿಮ್ಮ ತಂದೆ ಅಧಿಕಾರ ಇರುವವರೆಗೆ ಲೂಟಿ ಹೊಡೆಯಿರಿ. ಯಡಿಯೂರಪ್ಪ ಅವರ ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರುತ್ತದೆ. ತಾಕತ್ತಿದ್ದರೆ ವಿಜಯೇಂದ್ರ ಲೂಟಿ ಹಣದ ಕುರಿತು ನ್ಯಾಯಾಂಗ ತನಿಖೆ ಮಾಡಿಸಿ ಎಂದು ಯಡಿಯೂರಪ್ಪ ಅವರಿಗೆ ಉಗ್ರಪ್ಪ ಸವಾಲು ಹಾಕಿದರು.