ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಇದು ಡಿಕೆಶಿ ಮನೋಭಾವ| ಬಿಜೆಪಿ ಬಂದವರು ಮರಳಿ ಕಾಂಗ್ರೆಸ್ ಸೇರುವ ಪ್ರಮೇಯವೇ ಇಲ್ಲ| ಸುಳ್ಳು ಹೇಳಿಕೆ ನೀಡಿದ್ದರಿಂದಲೇ ಶಿರಾ, ಆರ್.ಆರ್.ನಗರದಲ್ಲಿ ಡಿ.ಕೆ.ಶಿವಕುಮಾರ್ ಅಡ್ರೆಸ್ ಇಲ್ಲದಂತಾಗಿದ್ದಾರೆ:ಬಿಸಿಪಾ|
ಹಾವೇರಿ(ನ.25): ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ಡಿಕೆಶಿ ಇದೇ ರೀತಿ ಸುಳ್ಳು ಹೇಳಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ನೆಲಕಚ್ಚಿದ್ದಾರೆ ಎಂದು ಟಾಂಗ್ ಕೊಟ್ಟರು.
ಹಿರೇಕೆರೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಹೇಳಿಕೆ ನೀಡಿದ್ದರಿಂದಲೇ ಶಿರಾ, ಆರ್.ಆರ್.ನಗರದಲ್ಲಿ ಡಿ.ಕೆ.ಶಿವಕುಮಾರ್ ಅಡ್ರೆಸ್ ಇಲ್ಲದಂತಾಗಿದ್ದಾರೆ. ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮನೋಭಾವನೆ ಅವರದ್ದು, ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ. ಬಿಜೆಪಿಗೆ ಬಂದವರು ಮರಳಿ ಕಾಂಗ್ರೆಸ್‌ಗೆ ವಾಪಸಾಗುವ ಪ್ರಮೇಯವೇ ಇಲ್ಲ. ಈ ಕುರಿತು ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದರು.
ರೈತರ ಅಭಿವೃದ್ಧಿಗೆ ನಿರಂತರ ಶ್ರಮಿಸುವೆ: ಕೃಷಿ ಸಚಿವ ಬಿ.ಸಿ. ಪಾಟೀಲ
ಕೋಡಿಶ್ರೀ ಮಾತು ನಂಬಬೇಡಿ:
ಕೇಂದ್ರ ಮತ್ತು ರಾಜ್ಯ ರಾಜಕೀಯದಲ್ಲಿ ವಿಫಲವಾಗಲಿದೆ ಎಂಬ ಕೋಡಿಹಳ್ಳಿ ಶ್ರೀಗಳ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ಪಾಟೀಲ್, ಕೋಡಿಹಳ್ಳಿ ಶ್ರೀಗಳು ನನಗೆ ರಾಜಕೀಯಕ್ಕೆ ಬರಬೇಡ ಎಂದಿದ್ದರು. ನಾನು ನಾಲ್ಕು ಬಾರಿ ಶಾಸಕನಾಗಿ, ಈಗ ಸಚಿವನಾಗಿದ್ದೇನೆ. ಅವರು ಹೇಳುವುದು ಶುದ್ಧ ಸುಳ್ಳು ಎಂದು ಹೇಳಿದರು.
ಬಿಜೆಪಿಯು ಸಿಬಿಐ ಮೂಲಕ ಕಾಂಗ್ರೆಸ್ ನಾಯಕರನ್ನು ಹಣಿಯಲು ಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮಾಡಿದ್ದುಣ್ಣೋ ಮಾರಾಯ ಎಂಬಂತೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ. ತನಿಖೆ ನಡೆಸಿ ತಪ್ಪಿದ್ದವರಿಗೆ ಶಿಕ್ಷೆಯಾಗುತ್ತದೆ. ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತೊಂದು ಪಕ್ಷದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.