Uttara Kannada: ಹೋಬಳಿ ಮಟ್ಟದಲ್ಲೂ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ರಾಜ್ಯದಲ್ಲೇ ಪ್ರಥಮ ಪ್ರಯೋಗ

By Govindaraj SFirst Published Apr 27, 2022, 11:45 PM IST
Highlights

ಸಾರ್ವಜನಿಕರ ಕಂದಾಯ ಹಾಗೂ ಇತರ ಸಂಬಂಧಿತ ಕುಂದು ಕೊರತೆಗಳ‌ನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರದ ಸೂಚನೆಯಂತೆ ರಾಜ್ಯದ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯವನ್ನು ನಡೆಸಲಾಗುತ್ತಿದೆ.

ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್

ಉತ್ತರ‌ ಕನ್ನಡ: (ಏ.27): ಸಾರ್ವಜನಿಕರ ಕಂದಾಯ ಹಾಗೂ ಇತರ ಸಂಬಂಧಿತ ಕುಂದು ಕೊರತೆಗಳ‌ನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರದ ಸೂಚನೆಯಂತೆ ರಾಜ್ಯದ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯವನ್ನು (Gram Vastavya) ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅನ್ನೋ ಈ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳ‌ನ್ನು ಪರಿಹರಿಸಲಾಗುತ್ತದೆ. ಆದರೆ, ಇದೀಗ ರಾಜ್ಯದಲ್ಲೇ ವಿಶೇಷವೆಂಬಂತೆ ಉತ್ತರ‌ ಕನ್ನಡ (Uttara Kannada) ಜಿಲ್ಲಾಧಿಕಾರಿ ಮತ್ತೊಂದು ಮಹತ್ತರ ಹೆಜ್ಜೆಯಿರಿಸಿದ್ದಾರೆ. ಈ ಮೂಲಕ ಜಿಲ್ಲೆಯ ಪ್ರತೀ ಮೂಲೆ ಮೂಲೆಯ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಯೋಜನೆ ಕೈಗೊಂಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

ಹೌದು! ರಾಜ್ಯ ಕಂದಾಯ ಸಚಿವರ ಯೋಜನೆಯಂತೆ ಪ್ರತೀ ತಿಂಗಳು ಜಿಲ್ಲಾಧಿಕಾರಿ (DC) ನಡೆ ಹಳ್ಳಿಯ ಕಡೆ ಅನ್ನೋ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಮೂಲಕ ಜನರ ಕಂದಾಯ ಹಾಗೂ ಇತರ ಕುಂದು ಕೊರತೆಯನ್ನು ಪರಿಹರಿಸುವ ಕಾರ್ಯ ನಡೆಸಲಾಗುತ್ತಿದೆ.‌ ರಾಜ್ಯದ ಪ್ರತಿ ಜಿಲ್ಲೆಗಳ ಜಿಲ್ಲೆಗಳ‌ ಜಿಲ್ಲಾಧಿಕಾರಿ ಮೂರನೇ ಶನಿವಾರ ತನ್ನ ಜತೆ ಇತರ ಇಲಾಖೆಗಳ ಅಧಿಕಾರಿಗಳನ್ನು ಕೂಡಿಕೊಂಡು ಜನರ‌ ಸಂಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ವಿಭಿನ್ನ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಆದರೆ, ರಾಜ್ಯದಲ್ಲೇ ವಿಶೇಷವೆಂಬಂತೆ ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ (Mullai Muhilan) ಮಾತ್ರ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಹೋಬಳಿ ಮಟ್ಟದಲ್ಲೂ ಜನರ ಸಮಸ್ಯೆಗಳನ್ನು ಪರಿಹರಿಸಲು ಯೋಜನೆ ಕೈಗೊಂಡಿದ್ದಾರೆ. 

ಸಾವು ಗೆದ್ದು ಬಂದ ಶಿರಸಿಯ ಉರಗ ರಕ್ಷಕ ಸೈಯ್ಯದ್ ಇದೀಗ ಮತ್ತೆ ಹಾವು ರಕ್ಷಣೆಗೆ ಅಣಿ

ಪ್ರಾಥಮಿಕ ಹಂತವಾಗಿ ನಾಲ್ಕು ವಾರಗಳ ಕಾಲ ಪ್ರತೀ ಶುಕ್ರವಾರ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಫಲಿತಾಂಶವನ್ನು ಕಂಡು ಬಳಿಕ ಈ ಕಾರ್ಯಕ್ರಮ ಮುಂದುವರಿಸಲಾಗುತ್ತದೆ. ಕಾರ್ಯಕ್ರಮದ ಆರಂಭದ ಭಾಗವಾಗಿ ಅಂಕೋಲಾದ ಕೊಡ್ಕಣಿಯಲ್ಲಿ ಇದೇ 29ರಂದು ಜಿಲ್ಲಾಧಿಕಾರಿ ಹೋಬಳಿ ಮಟ್ಟದ ಕಾರ್ಯಕ್ರ‌ಮ ನಡೆಸಲಿದ್ದಾರೆ. ಉತ್ತರಕನ್ನಡ ಜಿಲ್ಲೆ ಶೇ.75ರಷ್ಟು ಕಾಡು ಭಾಗದಿಂದಲೇ ಆವೃತವಾಗಿರುವುದರಿಂದ ಜನರಿಗೆ ರಸ್ತೆ, ವಿದ್ಯುತ್, ನೆರೆ ಹಾಗೂ ವಿವಿಧ ಸೌಲಭ್ಯಗಳು ದೊರೆಯದ ಸಾಕಷ್ಟು ಸಮಸ್ಯೆಗಳಿವೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಒಂದು ಹಂತದ ಸಮಸ್ಯೆಗಳಿಗೆ ಪರಿಹಾರ ದೊರಕಿದರೂ ಎಲ್ಲಾ ವಿಚಾರಗಳನ್ನು ತಲುಪೋದು ಅಸಾಧ್ಯ. ಈ ಕಾರಣದಿಂದ ಹೋಬಳಿ ಮಟ್ಟದಲ್ಲೂ ಕಾರ್ಯಕ್ರಮ ನಡೆಸಲು ಜಿಲ್ಲಾಧಿಕಾರಿ ಮುಲೈ ಮುಹಿಲನ್ ನಿರ್ಧರಿಸಿದ್ದಾರೆ. 

ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಮುಂಬರುವ ಮಳೆಗಾಲಕ್ಕೆ ಬೇಕಾದ ಸಿದ್ಧತೆ ಹಾಗೂ ಜನರಿಗೆ ಸಮಸ್ಯೆ ಎದುರಾಗದಂತೆ ವ್ಯವಸ್ಥೆ, ಪೆನ್ಶನ್, ಜಿಲ್ಲೆಯಲ್ಲಿ ಸ್ಥಳೀಯವಾಗಿ ಹೆಚ್ಚಿರುವ ಗನ್ ಲೈಸೆನ್ಸ್ ಕುರಿತ ವಿಚಾರ, ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತಹ ವ್ಯವಸ್ಥೆ ಕೂಡಾ ಹೋಬಳಿ ಮಟ್ಟದ ಈ ಕಾರ್ಯಕ್ರಮದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಹಾಗೂ ಪ್ರತೀ ತಾಲೂಕುಗಳ ವಿವಿಧ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು, ಶಿರಸ್ತೇದಾರರು ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.  ಈ ಹಿಂದೆಯೇ ಉತ್ತರಕನ್ನಡ‌ ಜಿಲ್ಲಾಡಳಿತ ಈ ಕುರಿತಂತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

1.5 ಕೋಟಿ ರೂ. ಗುಳುಂ ಮಾಡಿ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ ನಾಪತ್ತೆ: ಕಂಗಾಲಾದ ಗ್ರಾಹಕರು..!

ಮಳೆಗಾಲ ಪ್ರಾರಂಭಕ್ಕಿಂತ ಮುಂಚೆಯೇ ಇದನ್ನು ಅನುಷ್ಠಾನಗೊಳಿಸುವುದರಿಂದ ಮಳೆಗಾಲದಲ್ಲಿ ಜನರು ಎದುರಿಸುವ ಹಲವು ಸಮಸ್ಯೆ ಹಾಗೂ ಆಯಾಯ ಪ್ರದೇಶಗಳ ಸ್ಥಿತಿಗತಿಗಳನ್ನು ಕೂಡಾ ಈ ಮೂಲಕ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಜಿಲ್ಲಾಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜನರ ಸಮಸ್ಯೆಗಳಿಗೆ ಪೂರ್ಣ ರೀತಿಯಲ್ಲಿ ಪರಿಹಾರ ದೊರೆಯಲು ಇದರಿಂದ ಸಾಧ್ಯವಾಗುತ್ತದೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ  ಉತ್ತರ‌ಕನ್ನಡ ಜಿಲ್ಲಾಧಿಕಾರಿ ಹೋಬಳಿ ಮಟ್ಟದಲ್ಲೂ ಕಾರ್ಯಕ್ರಮ‌ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಿರೋದು ಶ್ಲಾಘನೀಯ. ತನ್ನ ಒತ್ತಡದ ಕಾರ್ಯದ ನಡುವೆಯೂ ಜಿಲ್ಲೆಯ ಮೂಲೆ ಮೂಲೆಗೆ ತೆರಳಿ ಖುದ್ದಾಗಿ ಜನರನ್ನು ಭೇಟಿಯಾಗಿ ಅಲ್ಲಿನ ಸ್ಥಿತಿಗತಿಗಳನ್ನು ಅರಿಯೋದು ಉತ್ತಮ ಕಾರ್ಯವೇ ಸರಿ. 

click me!