ತಾಲೂಕಿನ ಬೊಬ್ರುವಾಡದಲ್ಲಿ ಸುಮಾರು 15 ದಿನಗಳಿಂದ ಮಂಗವೊಂದು ಹಲವಾರು ಜನರನ್ನು ಗಾಯಗೊಳಿಸಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಏ.27): ಅಂಕೋಲಾ (Ankola) ತಾಲೂಕಿನ ಬೊಬ್ರುವಾಡದಲ್ಲಿ (Bobruwada) ಸುಮಾರು 15 ದಿನಗಳಿಂದ ಮಂಗವೊಂದು (Monkey) ಹಲವಾರು ಜನರನ್ನು ಗಾಯಗೊಳಿಸಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈಗಾಗಲೇ ಚಿಕ್ಕ ಮಕ್ಕಳು, ವೃದ್ಧರು ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಜನರಿಗೆ ಮಂಗ ಕಚ್ಚಿ ಗಂಭೀರ ಗಾಯಗೊಳಿಸಿದ್ದು, ಜನರು ಪ್ರಾಣ ಭೀತಿಯಿಂದಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಮಂಗನನ್ನು ಹಿಡಿಯಲು ಶತಪ್ರಯತ್ನ ನಡೆಸುತ್ತಿದ್ದಾರೆ. ಮಂಗಳವಾರ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಏಕಾಏಕಿ ವೃದ್ದೆಯೊಬ್ಬಳ ಮೇಲೆ ದಾಳಿ ನಡೆಸಿದ ಮಂಗ ಆಕೆಯ ಕಾಲಿಗೆ ಕಚ್ಚಿ ಮತ್ತೆ ಮರವೇರಿ ಕುಳಿತಿತ್ತು. ವೃದ್ಧೆಯ ಕಾಲಿನಿಂದ ತೀವ್ರ ರಕ್ತ ಸ್ರಾವವಾಗಿದ್ದರಿಂದ ಅಂಕೋಲಾ ತಾಲೂಕಾಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಲಾಗಿತ್ತು.
Monkey Fever: ಮಂಗನ ಕಾಯಿಲೆಗೆ ಸಿದ್ದಾಪುರ ಮೂಲದ ವೃದ್ಧೆ ಬಲಿ: 7 ಸೋಕಿಂತರು ಪತ್ತೆ
ಇನ್ನು ಕಾರ್ಯಾಚರಣೆ ನಡೆಸುತ್ತಿದ್ದ ಡೇರಿಂಗ್ ಟೀಮ್ ಮುಖ್ಯಸ್ಥ ಅಶೋಕ್ ನಾಯ್ಕ ಕೋತಿಯನ್ನು ಹಿಡಿಯಲು ಮುಂದಾದಾಗ ಅವರ ಕೈ-ಕಾಲಿಗೂ ಕಚ್ಚಿ ಎಸ್ಕೇಪ್ ಆಗಿದೆ. ಆದರೂ, ಇಂದು ಮತ್ತೆ ಉರಗ ತಜ್ಞ ಮಹೇಶ್ ನಾಯ್ಕ,ಅರಣ್ಯ ಇಲಾಖೆ ಸಿಬ್ಬಂದಿ ಸಿ. ಆರ್. ನಾಯ್ಕ ಹಾಗೂ ಬಸವನಗೌಡ ಬಗಲಿ ಅವರ ಜತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಕೆಲವು ಬಾರಿ ಅರವಳಿಕೆ ಮದ್ದನ್ನು ಮಂಗನೆಡೆಗೆ ಶೂಟ್ ಮಾಡಿದ್ದು, ಪ್ರತಿ ಬಾರಿ ಮಂಗ ಇದರಿಂದ ತಪ್ಪಿಸಿಕೊಂಡಿದೆ. ಇದರಿಂದಾಗಿ ಅರವಳಿಕೆ ಮದ್ದು ನೀಡುವ ತಜ್ಞರಿಲ್ಲದೇ ಮಂಗನನ್ನು ಹಿಡಿಯುವ ಕಾರ್ಯಾಚರಣೆ ಫಲಕಾರಿಯಾಗದೆ ಹಾಗೆಯೇ ಉಳಿದುಕೊಂಡಿದೆ.
ವಿಜಯಪುರ: ವ್ಯಾಪಾರಿಗಳಿಗೆ ಶುಭ ಶಕುನವಾಗಿದ್ದ ಮಂಗ ಇನ್ನಿಲ್ಲ..!
ನಾಳೆ ಮತ್ತೆ ಮಂಗನನ್ನು ಹಿಡಿಯಲು ಅಧಿಕಾರಿಗಳು ತಮ್ಮ ಪ್ರಯತ್ನ ಮುಂದುವರಿಸಲಿದ್ದಾರೆ. ಮಂಗನನ್ನು ಹಿಡಿಯಲು ತಜ್ಞರನ್ನು ಕರೆಯಿಸಿ ಅಥವಾ ಬೇರೆಡೆಯಿಂದ ಸಲಕರಣೆಗಳನ್ನು ತಂದು ಕಾರ್ಯಾಚರಣೆ ನಡೆಸುವಷ್ಟರಲ್ಲಿ ಮತ್ತಷ್ಟು ಜನರ ಪ್ರಾಣಕ್ಕೆ ಸಂಚಕಾರ ಕಾದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡ ಅನಾಹುತವಾಗುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮಂಗನನ್ನು ಸೆರೆಹಿಡಿದು ಜನರ ಜೀವವನ್ನು ರಕ್ಷಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.