* ತೆರವು ಆದೇಶದ ವಿರುದ್ದ ಕಾನೂನಾತ್ಮಕ ಹೋರಾಟಕ್ಕೆ ನಿರ್ಧಾರ
* ನಾಲ್ಕು ದಿನಗಳಿಂದಿದ್ದ ನಾಮಫಲಕ ವಿವಾದಕ್ಕೆ ಕೊನೆಗೂ ತೆರೆ
* ಪುರಸಭೆಯ ತುರ್ತು ಸಭೆಯಲ್ಲೂ ಪರ, ವಿರೋಧ ಚರ್ಚೆ
ಭಟ್ಕಳ(ಜು.01): ಭಾರೀ ವಿವಾದಕ್ಕೆ ಕಾರಣವಾಗಿದ್ದ ಭಟ್ಕಳ ಪುರಸಭೆಯ ನಾಮಫಲಕದ ಉರ್ದು ಅಕ್ಷರವನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಗುರುವಾರ ಮಧ್ಯಾಹ್ನ ಪುರಸಭೆಯಿಂದ ತೆರವುಗೊಳಿಸಲಾಯಿತು.
ಹೀಗಾಗಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ನಾಮಫಲಕದ ಉರ್ದು ಅಕ್ಷರ ಬರೆಯಿಸಿದ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ಗುರುವಾರ ಬೆಳಗ್ಗೆಯೇ ಭಟ್ಕಳಕ್ಕಾಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ ಅವರು ಎಸಿ ಕಚೇರಿಯಲ್ಲಿ ಪುರಸಭೆಯ ಅಧ್ಯಕ್ಷರು,ಸದಸ್ಯರು ಹಾಗೂ ತಂಝೀಂ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸರ್ಕಾರದ ನಿಯಮದಂತೆ ಸರ್ಕಾರಿ ಕಚೇರಿಗಳಲ್ಲಿ ಕನ್ನಡ,ಇಂಗ್ಲಿಷ್ ಭಾಷೆಯ ಅಕ್ಷರಗಳನ್ನು ಬಿಟ್ಟು ಬೇರೆ ಯಾವುದೇ ಭಾಷೆಯ ಅಕ್ಷರಗಳನ್ನು ಬರೆಯಿಸಲು ಅವಕಾಶವಿಲ್ಲ ಎಂದು ಮನದಟ್ಟು ಮಾಡಿದ್ದಲ್ಲದೇ ಪುರಸಭೆಯ ನಾಮಫಲಕದಲ್ಲಿ ಬರೆಯಿಸಲಾದ ಉರ್ದು ಅಕ್ಷರವನ್ನು ತೆರವುಗೊಳಿಸಲೇಬೇಕೆಂದು ಹೇಳಿದರು.
KONKANI SIGN BOARD CONTROVERSY; ಕೊಂಕಣಿ ಬೋರ್ಡ್ ವಿವಾದ ಹುಟ್ಟು ಹಾಕಿದ ಕಾರವಾರ ನಗರಸಭೆ!
ಅದಲ್ಲದೇ ಸಭೆಯ ಬಳಿಕ ಕಲಬುರ್ಗಿ ಮಹಾನಗರ ಪಾಲಿಕೆಯ ನಾಮಫಲಕದ ತೆರವು ಆದೇಶದ ಸರ್ಕಾರದ ಆದೇಶವನ್ನು ಪ್ರಸ್ತಾಪಿಸಿ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಅವರಿಗೆ ಪುರಸಭೆಯಲ್ಲಿನ ನಾಮಫಲಕದ ಉರ್ದು ಅಕ್ಷರವನ್ನು ತೆರವುಗೊಳಿಸಲು ಆದೇಶಿಸಿದರು. ಜಿಲ್ಲಾಧಿಕಾರಿಯವರ ಆದೇಶದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ ಅವರು ಅಗ್ನಿಶಾಮಕ ಸಿಬ್ಬಂದಿಗಳ ಸಹಾಯ ಪಡೆದು ನಾಮಫಲಕದಲ್ಲಿದ್ದ ಉರ್ದು ಅಕ್ಷರ ತೆರವುಗೊಳಿಸಿದರು. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್‌್ತ ಏರ್ಪಡಿಸಲಾಗಿದ್ದು,ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ನಗರ ಠಾಣೆಯ ಇನ್ಸಪೆಕ್ಟರ್ ದಿವಾಕರ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಪೊಲೀಸ್ ಅಧಿಕಾರಿಗಳು,ಸಿಬ್ಬಂದಿಗಳು ತೀವ್ರ ನಿಗಾ ಇಟ್ಟಿದ್ದಾರೆ.
ಬೇರೆ ಭಾಷೆಯ ನಾಮಫಲಕಕ್ಕೆ ಅವಕಾಶವಿಲ್ಲ: ಡಿಸಿ
ಸರ್ಕಾರಿ ಕಚೇರಿಯ ನಾಮಫಲಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಹೊರತು ಪಡಿಸಿ ಬೇರೆ ಭಾಷೆಯ ಅಕ್ಷರಗಳನ್ನು ಬರೆಯಿಸಲು ಸರ್ಕಾರದ ಸ್ಪಷ್ಟೀಕರಣದಂತೆ ಕಾನೂನಾತ್ಮಕವಾಗಿ ಅವಕಾಶವಿಲ್ಲದ್ದರಿಂದ ಭಟ್ಕಳ ಪುರಸಭೆಯ ನಾಮಫಲಕದಲ್ಲಿದ್ದ ಉರ್ದು ಅಕ್ಷರವನ್ನು ತೆರವುಗೊಳಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಗುರುವಾರ ಮಧ್ಯಾಹ್ನ ಕನ್ನಡಪರ ಸಂಘಟನೆ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಭಟ್ಕಳದ ಪುರಸಭೆಯಲ್ಲಿ ಹೊಸದಾಗಿ ಹಾಕಲಾದ ನಾಮಫಲಕದಲ್ಲಿ ಕನ್ನಡ, ಇಂಗ್ಲಿಷ್ ಅಕ್ಷರದ ಜೊತೆಗೆ ಉರ್ದು ಭಾಷೆಯ ಅಕ್ಷರಗಳನ್ನೂ ಬರೆಯಿಸಲಾಗಿತ್ತು.ಈ ಕುರಿತು ವಿರೋಧ ವ್ಯಕ್ತವಾಗಿದ್ದರಿಂದ ಇದನ್ನು ಶಾಂತಿಯುತವಾಗಿ ಬಗೆಹರಿಸುವ ಉದ್ದೇಶದಿಂದ ನಾನು ಮತ್ತು ಎಸ್ಪಿಯವರು ಭಟ್ಕಳಕ್ಕಾಗಮಿಸಿ ಪುರಸಭೆ ಆಡಳಿತ,ಸಮಾಜದ ಮುಖಂಡರ ಜತೆ ಚರ್ಚೆ ನಡೆಸಿದ್ದೇವೆ. ನಾಮಫಲಕದ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆಯ ಠರಾವು ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಸರ್ಕಾರಿ ಕಚೇರಿಯ ನಾಮಫಲಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಹೊರತು ಪಡಿಸಿ ಬೇರೆ ಯಾವುದೇ ಭಾಷೆಯನ್ನು ಬಳಸದಂತೆ ಸರ್ಕಾರದ ಆದೇಶದ ಸ್ಪಷ್ಟೀಕರಣ ಪಡೆದು ಪುರಸಭೆ ಮುಖ್ಯಾಧಿಕಾರಿ ಅವರಿಗೆ ನಾಮಫಲಕದ ಉರ್ದು ಅಕ್ಷರವನ್ನು ಕೂಡಲೇ ತೆರವುಗೊಳಿಸಲು ಆದೇಶಿಸಿದ್ದೇನೆ.ಭಟ್ಕಳ ಮತ್ತು ಜಿಲ್ಲೆಯಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವುದು ಅಗತ್ಯವಾಗಿದ್ದು,ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಭಟ್ಕಳ ಪುರಸಭೆ ನಾಮಫಲಕದಲ್ಲಿ ಉರ್ದು ಅಕ್ಷರ: ಕನ್ನಡಿಗರ ಆಕ್ರೋಶ
ಪುರಸಭಾಧ್ಯಕ್ಷ ಪರ್ವೇಜ್ ಕಾಶೀಮಜಿ ತೀವ್ರ ಖಂಡನೆ
ಪುರಸಭೆಯ ನಾಮಫಲಕದಲ್ಲಿ ಬರೆಯಿಸಲಾದ ಉರ್ದು ಅಕ್ಷರವನ್ನು ಜಿಲ್ಲಾಧಿಕಾರಿಗಳು ಆದೇಶ ಮಾಡಿ ತೆರವುಗೊಳಿಸಿರುವುದನ್ನು ಪುರಸಭೆಯ ಅಧ್ಯಕ್ಷ ಪರ್ವೇಜ ಕಾಶೀಮಜಿ ಹಾಗೂ ಉರ್ದುಭಾಷಿಕ ಪುರಸಭೆ ಸದಸ್ಯರು ತೀವ್ರವಾಗಿ ಖಂಡಿಸಿದ್ದು,ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ಗುರುವಾರ ಸಂಜೆ ಪುರಸಭೆಯಲ್ಲಿ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ನಾಮಫಲಕದಲ್ಲಿದ್ದ ಉರ್ದು ಅಕ್ಷರವನ್ನು ತೆರವುಗೊಳಿಸಿದ್ದಕ್ಕೆ ಖಂಡನಾ ನಿರ್ಣಯ ಮಂಡಿಸಿದ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಧ್ಯಕ್ಷರು,ನಮ್ಮ ಪ್ರಕಾರ ನಾವು ನಾಮಫಲಕದಲ್ಲಿ ಕಾನೂನಿನಂತೆ ಕನ್ನಡ,ಇಂಗ್ಲಿಷ್ ಅಕ್ಷರದ ನಂತರದಲ್ಲಿ ಉರ್ದು ಅಕ್ಷರವನ್ನು ಬರೆಯಿಸಿರುವುದು ಸರಿ ಇದೆ. ಕರ್ನಾಟಕ ಲೋಕಲ್ ಅಥೋರಿಟಿ ಆಫಿಶಿಯಲ್ ಆಕ್ಟ್ 1981ರ ಕಾಯ್ದೆ ಪ್ರಕಾರ ಒಂದು ಪ್ರದೇಶದಲ್ಲಿ ಶೇ.15ಕ್ಕಿಂತಲೂ ಹೆಚ್ಚು ಅಲ್ಪಸಂಖ್ಯಾತರ ಭಾಷೆಗಳನ್ನಾಡುವವರು ಇದ್ದಲ್ಲಿ ಆ ಭಾಷೆಯನ್ನು ಪರಿಗಣಿಸಬೇಕೆಂಬ ನಿಯಮವಿದ್ದು, ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ಶೇ.76 ಜನರು ಉರ್ದು ಮಾತನಾಡುವರಿದ್ದೇವೆ.ಈ ಪ್ರಕಾರ ಜನರಿಗೆ ಅನುಕೂಲವಾಗಲು ಫಲಕದಲ್ಲಿ ಮತ್ತು ಕಚೇರಿಯಲ್ಲಿ ಉರ್ದು ಅಕ್ಷರವನ್ನು ಬರೆಯಿಸಲಾಗಿದೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಆಡಳಿತ ಭಾಷೆ ಕನ್ನಡವನ್ನು ಕಡೆಗಣಿಸಿಲ್ಲ. ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇವೆ. ಭಾಷೆಯ ವಿಷಯದಲ್ಲಿ ಸಂಘರ್ಷ ಉಂಟಾಗುವುದು ಸರಿಯಲ್ಲ. ಆದರೆ ಪುರಸಭೆಯ ಆಡಳಿತದ ಮೇಲೆ ತೀವ್ರ ಒತ್ತಡ ತಂದು ನಾಮಫಲಕದಲ್ಲಿದ್ದ ಉರ್ದು ಅಕ್ಷರವನ್ನು ತೆರವುಗೊಳಿಸಲಾಗಿದ್ದು, ಇದಕ್ಕೆ ನಮ್ಮ ಖಂಡನೆ ಇದೆ. ಆದರೆ ನಾವು ಪ್ರತಿಭಟನೆ ನಡೆಸುವುದಿಲ್ಲ. ತೆರವು ಆದೇಶದ ವಿರುದ್ಧ ನಾವು ಕಾನೂನಿನಲ್ಲಿ ಏನು ಅವಕಾಶ ಇದೆಯೇ ಆ ರೀತಿ ಹೋರಾಟ ಮಾಡುತ್ತೇವೆ.ಅಲ್ಪಸಂಖ್ಯಾತ ಭಾಷೆಯನ್ನು ಉಳಿಸುವಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದ ಅವರು, ಪುರಸಭೆಯಲ್ಲಿ ಕಾನೂನಿನಂತೆ ಆಡಳಿತ ನಡೆಸಲಾಗುತ್ತಿದ್ದು, ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ.ಭಟ್ಕಳ ಜನತೆ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೇ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೊಹ್ಮದ್ ಖೈಸರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಇಮಶಾದ್, ಸದಸ್ಯರಾದ ಅಲ್ತಾಪ್ ಖರೂರಿ,ಅಬ್ದುಲ್ ರವೂಪ್,ಅಜೀಂ ಮುಂತಾದವರಿದ್ದರು.
ತೆರವು ಆದೇಶ ಸ್ವಾಗತಿಸಿದ 8 ಮಂದಿ ಸದಸ್ಯರ
ಪುರಸಭೆಯ ನಾಮಫಲಕದಲ್ಲಿದ್ದ ಉರ್ದು ಅಕ್ಷರವನ್ನು ತೆರವುಗೊಳಿಸಿರುವ ಕ್ರಮವನ್ನು ಪುರಸಭೆ ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಸೇರಿದಂತೆ ಪುರಸಭೆಯ ಮತ್ತಿತರ 8 ಮಂದಿ ಸದಸ್ಯರು ಸ್ವಾಗತಿಸಿ, ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರ ಖಂಡನಾ ನಿರ್ಣಯದ ವಿರುದ್ಧ ತಾವಿದ್ದೇವೆಂದು ಪುರಸಭೆಯ ಮುಖ್ಯಾಧಿಕಾರಿ ಅವರಿಗೆ ಲಿಖಿತ ಮನವಿ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಶ್ರೀಕಾಂತ ನಾಯ್ಕ ಅವರು, ಪುರಸಭೆ ನಾಮಫಲಕದಲ್ಲಿರುವ ಉರ್ದು ಅಕ್ಷರವನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ಸ್ವಾಗಾತರ್ಹ ಕ್ರಮವಾಗಿದೆ. ತುರ್ತು ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರ ಪೈಕಿ ನಾವು ಎಂಟು ಮಂದಿ ಖಂಡನಾ ನಿರ್ಣಯದ ವಿರುದ್ಧ ಇದ್ದು, ಪುರಸಭೆಯ ಠರಾವಿನಲ್ಲಿ ನಮೂದಿಸಬೇಕೆಂದು ಮುಖ್ಯಾಧಿಕಾರಿ ಅವರಿಗೆ ಲಿಖಿತವಾಗಿ ತಿಳಿಸಿದ್ದೇವೆ ಎಂದರು.
ಪುರಸಭೆಯ ತುರ್ತು ಸಭೆಯಲ್ಲೂ ಪರ, ವಿರೋಧ ಚರ್ಚೆ
ಪುರಸಭೆಯಲ್ಲಿ ಗುರುವಾರ ಸಂಜೆ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ನಾಮಫಲಕದಲ್ಲಿ ಬರೆಯಲಾದ ಉರ್ದು ಅಕ್ಷರ ತೆರವುಗೊಳಿಸಿದ ಬಗ್ಗೆ ಪರ ವಿರೋಧದ ಬಗ್ಗೆ ಬಿಸಿಬಿಸಿ ಚರ್ಚೆ ಆಗಿ ಕೆಲ ಸದಸ್ಯರ ಮಧ್ಯೆ ಮಾತಿನ ವಾಗ್ವಾದವೂ ನಡೆಯಿತು.
ಕಾರವಾರ: ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು
ಪುರಸಭೆಯ ಅಧ್ಯಕ್ಷ ಪರ್ವೇಜ್ ಕಾಸೀಮಜಿ, ಉಪಾಧ್ಯಕ್ಷ ಖೈಸರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಇಮಶಾದ್, ಹಿರಿಯ ಸದಸ್ಯರಾದ ಅಲ್ತಾಪ ಖರೂರಿ, ರವೂಪ್,ಅಜೀಂ, ಫಯ್ಯಾಜ್ ಮುಲ್ಲಾ ಮುಂತಾದವರು ನಾಮಫಲಕದಲ್ಲಿನ ಉರ್ದು ಅಕ್ಷರ ತೆರವುಗೊಳಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರಾದ ರಾಘವೇಂದ್ರ ಶೇಟ್, ಶ್ರೀಕಾಂತ ನಾಯ್ಕ, ಶ್ರೀಪಾದ ಕಂಚುಗಾರ, ರಾಘವೇಂದ್ರ ಗವಾಳಿ ಸೇರಿದಂತೆ 8 ಜನ ಸದಸ್ಯರು ತೆರವು ಆದೇಶ ಸರಿಯಾಗಿದೆ. ಪುರಸಭೆ ನಾಮಫಲಕದಲ್ಲಿ ಕನ್ನಡ, ಇಂಗ್ಲಿಷ್ ಭಾಷೆ ಬಿಟ್ಟು ಬೇರೆ ಭಾಷೆ ಇರಬಾರದು ಎನ್ನುವ ಸರ್ಕಾರದ ಆದೇಶವಿದ್ದು, ಈ ಆದೇಶ ಮೀರಿ ಉರ್ದು ಭಾಷೆ ಬರೆಯಿಸಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಎಂ.ಕೆ.ಸುರೇಶ ಅವರು ಜಿಲ್ಲಾಧಿಕಾರಿಯವರ ಆದೇಶದಂತೆ ನಾಮಫಲಕದಲ್ಲಿದ್ದ ಉರ್ದು ಅಕ್ಷರವನ್ನು ತೆರವುಗೊಳಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.ಅಲ್ತಾಪ್ ಖರೂರಿ ಮುಂದಿನ ಸಭೆಯಲ್ಲಿ ಕೆಲವು ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸಬೇಕಾಗಿದೆ. ಆದಷ್ಟು ಬೇಗ ಮತ್ತೊಂದು ಸಭೆ ಕರೆಯಿರಿ ಎಂದು ಅಧ್ಯಕ್ಷರಲ್ಲಿ ಒತ್ತಾಯಿಸಿದರು.