* ಸಾಂಕ್ರಾಮಿಕ ರೋಗ ಭೀತಿ
* ಮಹಿಳೆಯರು, ಮಕ್ಕಳಲ್ಲಿ ಆತಂಕ
* ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ(ಜು.01): ಸ್ಮಾರ್ಟ್‌ಸಿಟಿ ಆಗುತ್ತಿರುವ ನಗರದ ಹಲವು ಬಡಾವಣೆಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಸ್ಮಾರ್ಟ್‌ಸಿಟಿಗೆ ಸವಾಲು ಒಡ್ಡಿವೆ. ಗೋಪನಕೊಪ್ಪ, ಭವಾನಿ ನಗರ, ಕೇಶ್ವಾಪುರ, ಕುಸುಗಲ್ ರಸ್ತೆ, ನೇಕಾರ ನಗರ, ಆನಂದ ನಗರ, ಕೆ.ಬಿ. ನಗರ, ವಡ್ಡರ ಓಣಿ, ಮಂಟೂರ ರಸ್ತೆ ಸೇರಿ ನಗರದ ಹಲವು ಪ್ರದೇಶಗಳಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದ್ದು ಖಾಲಿ ನಿವೇಶನಗಳನ್ನು ಆಕ್ರಮಿಸಿಕೊಂಡಿವೆ. ಮಂಟೂರ ರಸ್ತೆಯ ಗುಂಜಾಲ್ ಪ್ಲಾಟ್ ಸೇರಿ ಹಲವು ಬಡಾವಣೆಗಳಲ್ಲಿ ಹಂದಿ, ಬೀದಿನಾಯಿಗಳದ್ದೆ ದರ್ಬಾರ್. ಇದರಿಂದ ಮನೆ ಮುಂಭಾಗ ಮಕ್ಕಳು ನಿರ್ಭೀತಿಯಿಂದ ಆಟವಾಡುವುದು ಕಷ್ಟವಾಗಿದೆ.
ಗುಂಜಾಲ್ ಪ್ಲಾಟ್‌ನಲ್ಲಿ ಮೊದಲೇ ಸ್ವಚ್ಛತೆ ಕೊರತೆ ಇದೆ. ಇದೀಗ ಹಂದಿಗಳ ಉಪಟಳದಿಂದ ಮತ್ತಷ್ಟುಅಸ್ವಚ್ಛತೆ ಕಾಡುತ್ತಿದೆ. ರಸ್ತೆಯಲ್ಲಿ ಕಾಲಿಡಲು ಸಹ ಅಂಜುವಂತೆ ಮಾಡಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು ಮಕ್ಕಳನ್ನು ಮನೆಯಿಂದ ಆಚೆ ಕಳಿಸಲು ಯೋಚಿಸುವಂತೆ ಆಗಿದೆ ಎನ್ನುತ್ತಾರೆ ಭಾಗ್ಯವತಿ ನಡುವಿನಮನಿ.
DHARWAD NEW SP ಪತ್ರಿಕಾಗೋಷ್ಠಿ, ಮಧ್ಯ ಮಾರಾಟಕ್ಕೆ ಇನ್ಮುಂದೆ ಬ್ರೇಕ್
ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛಗೊಳಿಸದ ಪರಿಣಾಮ ಗಿಡ-ಗಂಟಿಗಳು ಹೇರಳವಾಗಿ ಬೆಳೆದಿವೆ. ಇದರಿಂದ ವಿಷಜಂತುಗಳ ಭಯಕಾಡುತ್ತಿದೆ. ಮನೆ ಮುಂಭಾಗ ಪಾತ್ರೆ ತೊಳೆಯಲು ಬಂದರೆ ಹಂದಿಗಳ ಹಿಂಡು ಬಂದು ದಾಳಿ ಮಾಡುತ್ತಿದೆ. ಹಂದಿಗಳ ನಿಯಂತ್ರಣಕ್ಕೆ ಸಾಕಷ್ಟುಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರುಕ್ಸಾನಾ ಖೈರಾತಿ ಅಳಲು ತೋಡಿಕೊಂಡರು.
ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:
ಈ ಹಿಂದೇ ನಗರದಲ್ಲಿ ಬಿಟ್ಟಿರುವ ಹಂದಿಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವಂತೆ ಹಲವು ಬಾರಿ ಮಹಾನಗರ ಪಾಲಿಕೆ ಮಾಲೀಕರಿಗೆ ಸೂಚಿಸಿತ್ತು. ಸ್ಥಳಾಂತರಿಸದ ಪರಿಣಾಮ ಪಾಲಿಕೆಯೇ ಟೆಂಡರ್ ಕರೆದು ಹಂದಿಗಳನ್ನು ಸೆರೆ ಹಿಡಿದು ಸ್ಥಳಾಂತರಿಸಿತ್ತು. ಇದೀಗ ಮತ್ತೆ ನಗರದಲ್ಲಿ ಹಂದಿಗಳ ಸಂಖ್ಯೆ ಹೆಚ್ಚಾಗಿದೆ. ಜನಸಂದಣಿ ಪ್ರದೇಶದಲ್ಲಿ ಯಾರು ಹಂದಿ ಬಿಟ್ಟು ಹೋಗುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಈ ಕುರಿತು ಪಾಲಿಕೆ ನಿಗಾವಹಿಸಿ ಹಂದಿ ಬಿಟ್ಟು ಹೋಗುವರರ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ ಈಗಿರುವ ಹಂದಿಗಳನ್ನು ಸೆರೆಹಿಡಿದು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಹಂದಿಗಳು ಹಿಂಡು ಹಿಂಡಾಗಿ ಬಂದು ಗಲೀಜು ಮಾಡುತ್ತಿದ್ದು ನಗರದ ಸೌಂದರ್ಯರೀಕರಣಕ್ಕೆ ಧಕ್ಕೆ ತಂದಿವೆ. ಇವುಗಳ ಅಧ್ವಾನದಿಂದ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ ಅಂತ ಸ್ಥಳೀಯ ನಿವಾಸಿ ಲಕ್ಷ್ಕೀ ಅಂಬಿಗೇರ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಭೆಗೂ ಮುನ್ನವೇ ಪ್ರತ್ಯೇಕ ಪಾಲಿಕೆ ಹೋರಾಟ!
ಬೀದಿನಾಯಿ, ಹಂದಿಗಳ ಉಪಟಳ ಕಂಡುಬಂದಲ್ಲಿ ಸಾರ್ವಜನಿಕರು ಪಾಲಿಕೆ ಕಂಟ್ರೋಲ್ ರೂಮ್‌ಗೆ ದೂರು ನೀಡಬೇಕು. ಪರಿಶೀಲಿಸಿ ಕೂಡಲೇ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗುವುದು. ಮಾಲೀಕರನ್ನು ಗುರುತಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳನ್ನು ಬಿಡದಂತೆ ಸೂಚಿಸಲಾಗುವುದು ಅಂತ ವಲಯ 8ರ ಸಹಾಯಕ ಆಯುಕ್ತ ಬಸವರಾಜ ಲಮಾಣಿ ಹೇಳಿದ್ದಾರೆ.
ರಾತ್ರಿ ವೇಳೆ ಕೆಲವರು ಹಂದಿ ಬಿಟ್ಟು ಹೋಗುತ್ತಾರೆ. ಈ ಕುರಿತು ಪಾಲಿಕೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಹಂದಿ, ಬೀದಿನಾಯಿಗಳ ಶಾಶ್ವತ ನಿಯಂತ್ರಣಕ್ಕೆ ಪಾಲಿಕೆ ಕ್ರಮಕೈಗೊಳ್ಳಬೇಕು ಅಂತ ಪಾಲಿಕೆ ಸದಸ್ಯೆ ಸರತಾಜ ಅದವಾನಿ ಹೇಳಿದ್ದಾರೆ.