ಕೀ ಚೈನ್‌ ಹುಡುಕಿಕೊಂಡು ಬಂದು ಅಪರಿಚಿತ ವ್ಯಕ್ತಿಯಿಂದ ಮೋಸ

By Kannadaprabha NewsFirst Published Jan 19, 2020, 9:28 AM IST
Highlights

ಕೀ ಚೈನ್ ಹುಡುಕಿಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಯೋರ್ವ ಚಿನ್ನದ ಅಂಗಡಿ ಮಾಲಿಕನಿಗೆ ವಂಚನೆ ಮಾಡಿದ ಪ್ರಕರಣ ನಡೆದಿದೆ. ಆನ್‌ಲೈನ್ ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ವಂಚಿಸಿ ತೆರಳಿದ್ದಾನೆ.

ಮಾಗಡಿ [ಜ.19]:  ವಂಚಕನೊಬ್ಬ ಪಟ್ಟಣದ ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರಿಗೆ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಡಾ.ರಾಜಕುಮಾರ್‌ ರಸ್ತೆಯಲ್ಲಿ ನಂಜುಂಡಸ್ವಾಮಿ ಎಂಬುವರು ವಾಸವಂಬ ಜ್ಯೂಯಲ್‌ ಪ್ಯಾರಡೈಸ್‌ ಮಾಲೀಕರಾಗಿದ್ದು, ಇವರ ಅಂಗಡಿಗೆ ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಇನ್ನೊವಾ ಕಾರಿನಲ್ಲಿ ಆಗಮಿಸಿದ್ದು, ಕೈ ಚೈನ್‌ ಬೇಕೆಂದು ಕೇಳಿದ್ದಾನೆ.

ನೆಫ್ಟ್ ಮಾಡುವ ಭರವಸೆ:  ನೋಡಲು ಅಧಿಕಾರಿಯಂತಿದ್ದ ಆ ವ್ಯಕ್ತಿ ಆದಾಯ ತೆರಿಗೆ ಇಲಾಖೆಯವರು ಇರಬೇಕೆಂದು ಅಂಗಡಿ ಮಾಲೀಕರು ಅನುಮಾನಪಟ್ಟರೂ, ತಮ್ಮ ಬಳಿ ಇದ್ದ 29.280 ಗ್ರಾಂ ಸುಮಾರು 1.29 ಲಕ್ಷ ರೂ ಬೆಲೆ ಬಾಳುವ ಕೀ ಚೈನನ್ನು ತೋರಿಸಿದ್ದಾರೆ. ಅಪರಿಚಿತ ವ್ಯಕ್ತಿ ಅದನ್ನು ಖರೀದಿಸಿ ನನ್ನ ಬಳಿ ಹಣವಿಲ್ಲ, ನಿಮ್ಮ ಖಾತೆಗೆ ನೆಫ್ಟ್ ಮಾಡುತ್ತೇನೆ ಎಂದಿದ್ದಾನೆ. 

ಒನ್‌ವೇನಲ್ಲಿ ಹೋಗಬೇಡಿ ಎಂದ ಎಎಸ್‌ಐಗೆ ಥಳಿಸಿದ ಬೈಕ್‌ ಸವಾರ!...

ಮಾಲೀಕ ಮೊದಲು ಅನುಮಾನಪಟ್ಟರು ಸಹ ನೆಫ್ಟ್ ಮಾಡಲು ಒಪ್ಪಿಗೆ ನೀಡಿದ್ದಾರೆ. ಈ ಸಮಯದಲ್ಲಿ ಆ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಹಣವನ್ನು ನೆಫ್ಟ್ ಮಾಡಿರುವ ಮೆಸೆಜ್‌ ಸಂದೇಶ ತೋರಿಸಿದ್ದು, ಅದರಲ್ಲಿ ವಾಸವಂಬ ಜ್ಯೂಯಲ್‌ ಪ್ಯಾರಡೈಸ್‌ ಎಂದು ಸಂದೇಶ ಬಂದಿದ್ದನ್ನು ಗಮನಿಸಿದ ಮಾಲೀಕ ಒಡವೆಯನ್ನು ಹಸ್ತಾಂತರಿಸಿದ ತಕ್ಷಣ ಆ ವ್ಯಕ್ತಿ ಜಾಗ ಖಾಲಿ ಮಾಡಿದ್ದಾನೆ.

ಫಾಸ್ಟ್ಯಾಗ್‌ ರೀಜಾರ್ಜ್ ಹೆಸರಲ್ಲಿ 50 ಸಾವಿರ ಎಗರಿಸಿದ ಕಳ್ಳ!...

ಪಾವತಿಯಾಗದ ಹಣ:

ಒಂದೆರಡು ಗಂಟೆಗಳು ಕಳೆದರೂ ಸಹ ಹಣ ತಮ್ಮ ಖಾತೆಗೆ ಜಮೆಯಾಗದಿರುವುದನ್ನು ಗಮನಿಸಿದ ಮಾಲೀಕ ತಕ್ಷಣ ಅಪರಿಚಿತ ವ್ಯಕ್ತಿಯ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ. ಖಾತೆ ಸಂಖ್ಯೆಯಲ್ಲಿ ವ್ಯತ್ಯಾಸವಾಗಿರುವುದರಿಂದ ಹಣ ಪಾವತಿಯಾಗಿಲ್ಲ, ಮತ್ತೊಮ್ಮೆ ಖಾತೆ ಸಂಖ್ಯೆಯನ್ನು ನೀಡಿ ಎಂದು ಅಪರಿಚಿತ ತಿಳಿಸಿದ್ದಾನೆ. ಮಾಲೀಕ ಕೂಡಲೇ ವಾಟ್ಸ್‌ಆಪ್‌ ಮೂಲಕ ಖಾತೆ ಸಂಖ್ಯೆಯನ್ನು ನೀಡಿದ್ದು, ಒಂದು ದಿನ ಕಳೆದರೂ ಸಹ ಹಣ ಜಮೆಯಾಗದ್ದನ್ನು ಗಮನಿಸಿ ಪದೇ ಪದೇ ಆ ವ್ಯಕ್ತಿಯ ಮೊಬೈಲ್‌ಗೆ ಮಾಲೀಕ ಕರೆ ಮಾಡಿದರೂ ಸ್ಪಂದಿ​ಸಿಲ್ಲ. ತಾವು ಮೋಸ ಹೋಗಿರುವುದು ತಿಳಿದುಕೊಂಡು ತಕ್ಷಣ ಮಾಗಡಿ ಪೋಲಿಸ್‌ ಠಾಣೆಯಲ್ಲಿ ನಂಜುಂಡಸ್ವಾಮಿ ದೂರು ದಾಖಲಿಸಿದ್ದಾರೆ.

click me!