ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ಕೋರಿ ಡಿಸಿಗೆ ಮನವಿ..!

By Kannadaprabha NewsFirst Published Jan 19, 2020, 9:02 AM IST
Highlights

ಕೊಳ್ಳೇಗಾಲದ ಗ್ರಾಮವೊಂದರ ಜನ ಆತ್ಮಹತ್ಯೆಗೆ ಅನುಮತಿ ಕೋರಿ ಡಿಸಿಗೆ ಪತ್ರ ಬರೆದಿದ್ದಾರೆ. ಗ್ರಾಮದ ಯಜಮಾನನಿಂದ ಕಿರುಕುಳ ಅನುಭವಿಸಿದ್ದು, ಜನ ಈ ರೀತಿ ನಿರ್ಧಾರ ಮಾಡಿದ್ದಾರೆ.

ಚಾಮರಾಜನಗರ(ಜ.19): ಕೊಳ್ಳೇಗಾಲ ತಾಲೂಕಿನ ಉಗನಿಯ ಗ್ರಾಮದ ನಾವುಗಳು ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಕೊಳ್ಳೇಗಾಲ ತಾಲೂಕಿನ ಉಗನಿಯ ಗ್ರಾಮದಲ್ಲಿ ಸಾಮೂಹಿಕ ಬಹಿಷ್ಕಾರಕ್ಕೊಳಗಾಗಿರುವ ಕುಟುಂಬಗಳ ಶಿವಮಾದು, ನಂಜಮ್ಮ, ಸುಂದ್ರಮ್ಮ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಯಜಮಾನರು ಒಬ್ಬ ಗಂಡು ಮಕ್ಕಳಿರುವ (ಸಣ್ಣ ಕುಟುಂಬ) ಕುಟುಂಬಗಳಿಗೆ ಕಿರುಕುಳ ನೀಡಿ ದಂಡ ಹಾಕಿ ದಂಡ ವಸೂಲಿ ಮಾಡುತ್ತಿದ್ದು, ದಂಡ ನೀಡದಿದ್ದರೆ ಬಹಿಷ್ಕಾರ ಹಾಕುತ್ತಿದ್ದಾರೆ. ಈ ಕುರಿತು ಈಗಾಗಲೇ ಸಂಬಂಧಪಟ್ಟಪೊಲೀಸ್‌ ಠಾಣೆ, ತಹಸೀಲ್ದಾರ್‌ಗಳಿಗೆ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಬಹಿಷ್ಕಾರ ತೆಗೆಸಿ ಬಹಿಷ್ಕಾರ ಹಾಕಿದ ಯಜಮಾನರಿಗೆ ಶಿಕ್ಷೆ ವಿಧಿಸಿಲ್ಲ. ಆದ್ದರಿಂದ ಸಾಮೂಹಿಕ ಆತ್ಮಹತ್ಯೆಗೆ ಜಿಲ್ಲಾಧಿಕಾರಿಗೆ ಅನುಮತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಹೆದ್ದಾರಿ ಕಾಮಗಾರಿಗಾಗಿ ಫಸಲು ತುಂಬಿದ್ದ ಜಮೀನು ತೆರವು

ತಹಸೀಲ್ದಾರ್‌ ಹಾಗೂ ಎಸ್‌ಐ ಭೇಟಿ ನೀಡಿ ಬಹಿಷ್ಕಾರ ಹಾಕಿರುವ ಯಜಮಾನರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಬಂದು ಹೋದ ಮೇಲೆ ಯಜಮಾನರು ಕೇಸ್‌ ವಾಪಸ್‌ ಪಡೆಯುವಂತೆ ಬೆದರಿಕೆ ಹಾಕುತ್ತಿದ್ದು, ಯಜಮಾನರು ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರಿ ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ನಮಗೆ ಸೂಕ್ತ ರಕ್ಷಣೆ ನೀಡಿ, ನ್ಯಾಯ ದೊರಕಿಸಿಕೊಡುವಂತೆ ತಮ್ಮ ಆಳಲು ತೊಡಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಿಂಗರಾಜಮ್ಮ, ಜಗದೀಶ್‌ ಇದ್ದರು.

ಯಾವ ವಿಚಾರಕ್ಕೆ ಬಹಿಷ್ಕಾರ

1. ಗ್ರಾಮದಲ್ಲಿ ಕಂಡಾಯೋತ್ಸವಕ್ಕಾಗಿ ಪ್ರತಿ ತಿಂಗಳು 50 ರು. ಚಂದಾ ವಸೂಲಿ ಮಾಡುತ್ತಿದ್ದ ಸಂದರ್ಭದಲ್ಲಿ ಸಂಬಂಧಿಕರ ಸಾವಿಗೆ ಹೋಗಿದ್ದ ಕಾರಣದಿಂದ ಒಂದು ತಿಂಗಳು ಚಂದಾ ಕೊಡಲು ಸಾಧ್ಯವಾಗಲಿಲ್ಲ. ಅದಕ್ಕೆ ದಂಡ ಕೊಡುವಂತೆ ಯಜಮಾನರು ಕೇಳಿದರೂ ನಾನು ದಂಡ ಕೊಡಲ್ಲ ಎಂದು ಹೇಳಿದಕ್ಕೆ ನನ್ನ ಮತ್ತು ಕುಟುಂಬವನ್ನು ಬಹಿಷ್ಕಾರ ಹಾಕಿ ಯಾವುದೇ ಶುಭ ಸಮಾರಂಭಗಳಿಗೆ, ದೇವಸ್ಥಾನದಲ್ಲಿ ನಡೆಯುವ ಪೂಜೆಗೆ ಕರೆಯುತ್ತಿಲ್ಲ. ಯಾರು ಮಾತನಾಡಿಸುತ್ತಿಲ್ಲ, ನೀರು ಕೊಡುತ್ತಿಲ್ಲ ಜಮೀನು ಕೆಲಸಗಳಿಗೆ ಆಳು ಬರುತ್ತಿಲ್ಲ ಎಂದು ಶಿವಮಾದು ತಿಳಿಸಿದ್ದಾರೆ.

2. ನನ್ನ ಮಗನಿಗೆ ಕೆಲಸ ಕೊಡಿಸುವುದಾಗಿ ಯಜಮಾನರು 60 ಸಾವಿರ ರು. ಹಣ ಪಡೆದುಕೊಂಡಿದ್ದರು. ಹಣವನ್ನು ವಾಪಸ್‌ ಕೇಳಿದ್ದಕ್ಕಾಗಿ ನಮಗೆ ಬಹಿಷ್ಕಾರ ಹಾಕಿ ತುಂಬಾ ತೊಂದರೆ ನೀಡುತ್ತಿದ್ದಾರೆ ಎಂದು ನಂಜಮ್ಮ ಆಳಲು ತೊಡಿಕೊಂಡಿದ್ದಾರೆ.

3. ಜಾಗದ ವಿಚಾರವಾಗಿ ಪಂಚಾಯಿತಿ ಸೇರಿಸಿದರೆ ನಾನು ಜಾಗವನ್ನು ಯಾರಿಗೂ ಕೊಡಲ್ಲ ಜಾಗವೆಲ್ಲ ನಮ್ಮದೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ಯಜಮಾನರ ಮಾತಿಗೆ ಬೆಲೆ ಕೊಡಲ್ವ ಎಂದು ಬಹಿಷ್ಕಾರ ಹಾಕಿದ್ದು, ಮನೆ ಮುಂದೆ ಹಾಕಿದ್ದ ಸುತ್ತುಗೋಡೆ ಕೆಡವಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಂದ್ರಮ್ಮ ಹೇಳಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

click me!