ಸಂಸದ ಡಿ.ಕೆ. ಸುರೇಶ್ ರಾಮನಗರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ದಿಶಾ ಸಭೆಗೆ ಆಗಮಿಸುವಂತೆ ಸೂಚನೆ ನೀಡಿದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ ಗೈರಾದ ಘಟನೆ ನಡೆಯಿತು.
ರಾಮನಗರ [ಜ.19]: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲು ಸಂಸದ ಡಿ.ಕೆ. ಸುರೇಶ್ ದಿಶಾ ಸಭೆಗೆ ಆಗಮಿಸುವಂತೆ ಸೂಚನೆ ನೀಡಿದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿಗೈರಾದ ಪ್ರಸಂಗ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಡಿ.ಕೆ. ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಕುರಿತ ರಾಮನಗರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿಗೈರಾಗಿದ್ದರು.
ಸಭೆಯಲ್ಲಿ ಚರ್ಚೆ ವೇಳೆ ಸಂಸದರು, ಪೊಲೀಸ್ ಇಲಾಖೆ ವರದಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿನ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ರಾತ್ರಿ 11ಗಂಟೆಯೊಳಗೆ ಮುಚ್ಚಲು ಆದೇಶ ಹೊರಡಿಸಿದ್ದೀರಿ. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಎಷ್ಟುಕಡಿಮೆಯಾಗಿವೆ, ಅವುಗಳನ್ನು ತಡೆಯಲು ಏನೆಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಮಾಹಿತಿ ಬೇಕಿದೆ. ಜಿಲ್ಲಾ ಎಸ್ಪಿ ಅವರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ತಿಳಿಸುವಂತೆ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಸೂಚನೆ ನೀಡಿದರು.
ಆಗ ಜಿಲ್ಲಾಧಿಕಾರಿಗಳು, ಮಧ್ಯಾಹ್ನ 1 ಗಂಟೆಯಾಗಿದೆ. ಈಗ ಬರಲು ಹೇಳಬೇಕೇ ಎಂದು ಕೇಳಿದರು. ಇದಕ್ಕೆ ಸಂಸದರು, ಮಧ್ಯಾಹ್ನ 3 ಗಂಟೆಯಾದರೂ ಪರವಾಗಿಲ್ಲ ಬರಲು ಹೇಳುವಂತೆ ತಿಳಿಸಿದರು. ಅದರಂತೆ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಎಸ್ಪಿ ಅವರನ್ನು ಸಂಪರ್ಕಿಸಿ ಸಭೆಗೆ ಆಗಮಿಸುವಂತೆ ಹೇಳಿದರು.
ರಾಮನಗರದಲ್ಲಿ ಡಿಕೆಸು ಎದುರೆ ಶಾಸಕ-ಜಿಲ್ಲಾಧಿಕಾರಿ ಜಟಾಪಟಿ.
ಟ್ರಕ್ ಚಾಲಕರು, ಕೂಲಿ ಕಾರ್ಮಿಕರಂತಹ ಬಡವರು ರಾತ್ರಿ ವೇಳೆ ವಾಹನಗಳಲ್ಲಿ ಸಂಚರಿಸುತ್ತಾರೆ. ರಾತ್ರಿ 11 ಗಂಟೆಯೊಳಗೆ ಹೋಟೆಲ್‌ಗಳನ್ನು ಮುಚ್ಚಿಸಿದರೆ ಅವರೆಲ್ಲರೂ ಏನು ಮಾಡಬೇಕು. ಬಡವರ ಹೊಟ್ಟೆಮೇಲೆ ಹೊಡೆಯುವುದು ಸರಿಯಲ್ಲ. ಯಾವುದಾದರು ಹೋಟೆಲ್ , ಅಂಗಡಿಗಳ ಬಳಿ ಅಪರಾಧ ಪ್ರಕರಣಗಳು ನಡೆದಿದ್ದರೆ ಅದರ ಮಾಲೀಕರಿಗೆ ಎಚ್ಚರಿಕೆ ನೀಡಬೇಕು ಎಂದು ಶಾಸಕ ಎ.ಮಂಜುನಾಥ್ ಸಲಹೆ ನೀಡಿದರು.
ಸಂಸದ ಡಿ.ಕೆ.ಸುರೇಶ್ , ಹೆದ್ದಾರಿ ಬದಿಯಲ್ಲಿ ಹೋಟೆಲ್‌ಗಳನ್ನು ಮುಚ್ಚಿಸಿದಾಕ್ಷಣಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಈಗಾಗಲೇ ಸಾಕಷ್ಟನ್ನು ನಿಯಂತ್ರಣ ಮಾಡಲಾಗಿದೆ ಎಂದು ತಿಳಿದಿದ್ದೇನೆ. ಅದರ ಸಮಗ್ರ ಮಾಹಿತಿಯನ್ನು ಎಸ್ಪಿ ಅವರೇ ಬಂದು ಹೇಳಲಿ ಎಂದರು. ಆದರೆ, ಸಭೆ ಮುಗಿದರೂ ಎಸ್ಪಿ ಅನೂಪ್ ಶೆಟ್ಟಿಮಾತ್ರ ಬರಲೇ ಇಲ್ಲ.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಂಸದ ಡಿ.ಕೆ.ಸುರೇಶ್..
ಕಳೆದ ದಿಶಾ ಸಭೆಯಲ್ಲಿಯೂ ಸಂಸದ ಡಿ.ಕೆ. ಸುರೇಶ್ ಅವರು ಎಸ್ಪಿ ಅನೂಪ್ ಶೆಟ್ಟಿವಿರುದ್ಧ ಕಿಡಿ ಕಾರಿದ್ದರು. ಇಂದಿನ ಸಭೆಯಲ್ಲಿಯೂ ಎಸ್ಪಿರವರು ಗೈರಾಗಿದ್ದಕ್ಕೆ ಸಂಸದರು ಕಿಡಿ ಕಾರಿದರು.
ಮೊಬೈಲ್‌ನಲ್ಲಿ ಕಾಲಹರಣ: ದಿಶಾ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಅಭಿವೃದ್ಧಿ ವಿಚಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚೆ ನಡೆಸುತ್ತಿದ್ದರೆ ಮತ್ತೊಂದೆಡೆ ಕೆಲ ಅಧಿಕಾರಿಗಳು ಮೊಬೈಲ್‌ನಲ್ಲಿ ತಲ್ಲೀನರಾಗಿ ಕಾಲಹರಣದಲ್ಲಿ ತೊಡಗಿದ್ದರು.
ಕೆಲ ಇಲಾಖೆಗಳ ಅಧಿಕಾರಿಗಳು ಅಮೆಜಾನ್ನಲ್ಲಿ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದರೆ, ಇನ್ನು ಕೆಲವರು ವಾಟ್ಸ್ ಆಪ್ ನಲ್ಲಿ ಚಾಟಿಂಗ್‌ನಲ್ಲಿ ತೊಡಗಿದ್ದರು. ಈ ವಿಚಾರವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಸಂಸದರ ಗಮನಕ್ಕೆ ತಂದರು.
ಆಗ ಸಂಸದ ಡಿ.ಕೆ. ಸುರೇಶ್ ಅವರು ಮುಂದಿನ ದಿಶಾ ಸಭೆಗೆ ಬರುವಾಗ ಅಧಿಕಾರಿಗಳು ತಮ್ಮ ಮೊಬೈಲ್‌ಗಳನ್ನು ಕಚೇರಿಯಲ್ಲಿ ಇಟ್ಟು ಬರಬೇಕು. ಇಲ್ಲವೇ ಜಿಲ್ಲಾಧಿಕಾರಿಗಳು ಅವರೆಲ್ಲರ ಮೊಬೈಲ್‌ಗಳನ್ನು ಒಂದೆಡೆ ಸಂಗ್ರಹಿಸಲು ಸೂಚನೆ ನೀಡಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು.