ಸಾರಿಗೆ ಇಲಾಖೆಯಿಂದ ಹೊಸ 600 ಬಸ್‌ಗಳ ಸಂಚಾರ ಶುರು: ಸಚಿವ ಶ್ರೀರಾಮುಲು

By Govindaraj S  |  First Published Aug 13, 2022, 12:55 AM IST

ಸಾರಿಗೆ ಸೇವೆ ಮತ್ತಷ್ಟು ಉತ್ತಮಗೊಳಿಸಲು 600 ಹೊಸ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲಾಗಿದ್ದು, ಆ.15 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು. 


ಬಳ್ಳಾರಿ (ಆ.13): ಸಾರಿಗೆ ಸೇವೆ ಮತ್ತಷ್ಟು ಉತ್ತಮಗೊಳಿಸಲು 600 ಹೊಸ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲಾಗಿದ್ದು, ಆ.15 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆಯ ಡಿಪೋ ಆವರಣದಲ್ಲಿ ಗುರುವಾರ ಬಳ್ಳಾರಿಯಿಂದ ಕಂಪ್ಲಿಗೆ ತಡೆ ರಹಿತ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಬಸ್‌ಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಸ್‌ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಸ್ಥಿತಿಯಲ್ಲಿರುವ ಹಳೆಯ ಬಸ್‌ಗಳನ್ನು ದುರಸ್ತಿಗೊಳಿಸಿ ಓಡಿಸಲು ಕ್ರಮ ವಹಿಸಲಾಗುವುದು. 

ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದಿಂದ ಹೊಸ ಬಸ್‌ಗಳ ಬೇಡಿಕೆ ಹೆಚ್ಚಾಗಿದೆ. ಸದ್ಯಕ್ಕೆ ಸುಸ್ಥಿತಿಯಲ್ಲಿರುವ ಹಳೆಯ ಬಸ್‌ಗಳನ್ನು ನಾಲ್ಕೈದು ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಿ ನೀಡಲಾಗುವುದು. ಹಂತ ಹಂತವಾಗಿ ಉತ್ತರ ಕರ್ನಾಟಕಕ್ಕೆ ಸಹ ಹೊಸ ಬಸ್‌ಗಳನ್ನು ಕೊಡಲಾಗುವುದು. ಇಲಾಖೆಯಿಂದ ಬಸ್‌ಗಳ ಖರೀದಿ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ. ಸರ್ಕಾರ ಇದೀಗ 600 ಹೊಸ ಬಸ್‌ಗಳನ್ನು ಖರೀದಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸುತ್ತಿದೆ ಎಂದು ಹೇಳಿದರು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಎಲ್ಲ 45 ಸಾವಿರ ಬಸ್‌ಗಳ ಮೇಲೆ ಕೇಂದ್ರ ಸರ್ಕಾರ ನೀಡಿರುವ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುವುದು. 

Tap to resize

Latest Videos

undefined

ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಾಯಕರು ಶೂರರು; CM ಬದಲಾವಣೆಗೆ ಶ್ರೀರಾಮುಲು ಪ್ರತಿಕ್ರಿಯೆ

ಇಡೀ ದೇಶದಲ್ಲಿ ಆ.13ರಿಂದ ಮೂರು ದಿನಗಳ ಕಾಲ ಸ್ವಾತಂತ್ರ್ಯೋತ್ಸವ ಸಂಭ್ರಮ ನಡೆಯಲಿದ್ದು, ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಾಡಲಿದೆ. ನಾಡಿನ ಪ್ರತಿಯೊಬ್ಬರೂ ಸ್ವಾತಂತ್ರ್ಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸಾರಿಗೆ ಇಲಾಖೆ ನೌಕರರಿಗೆ ಬಳ್ಳಾರಿಯಲ್ಲಿ .4 ಕೋಟಿ ವೆಚ್ಚದಲ್ಲಿ ಸಾರಿಗೆ ಭವನ ನಿರ್ಮಿಸಲಾಗುವುದು. ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳಿಗೆ ತಮ್ಮದೇ ಆದ ಭವನಗಳಿವೆ. ಮದುವೆ ಮತ್ತಿತರ ಸಮಾರಂಭಗಳಿಗೆ ಸಾರಿಗೆ ನೌಕರರು ಪರದಾಡುವ ಪರಿಸ್ಥಿತಿ ಇದೆ. ಹೀಗಾಗಿ ಬಳ್ಳಾರಿ ನಗರದಲ್ಲಿ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಆದಷ್ಟುಶೀಘ್ರ ಭೂಮಿಪೂಜೆ ನಡೆಸಲಾಗುವುದು. ಸಾರಿಗೆ ಇಲಾಖೆ ನೌಕರರ ವೇತನ ಪರಿಷ್ಕರಣೆಯ ಕುರಿತು ಚರ್ಚಿಸಲಾಗುತ್ತಿದ್ದು, ನೌಕರರ ಹಿತ ಕಾಯಲು ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು.

ನಾನು ಅಧಿಕಾರ ವಹಿಸಿಕೊಳ್ಳುವ ಮುಂಚೆ ಸಾರಿಗೆ ನೌಕರರಿಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿತ್ತು. ಅಧಿಕಾರ ವಹಿಸಿಕೊಂಡ ಬಳಿಕ ಸಮಸ್ಯೆಯಾಗಿಲ್ಲ. ಮೂರು ದಿನಗಳ ಕೆಳಗೆ ಇಲಾಖೆಗೆ .900 ಕೋಟಿ ಸರ್ಕಾರ ನೀಡಿದೆ. ಇದರಿಂದ ಡೀಸೆಲ್‌, ವೇತನ ಮತ್ತಿತರ ಸೌಕರ್ಯಗಳಿಗೆ ಬಳಕೆಯಾಗುತ್ತಿದೆ ಎಂದು ತಿಳಿಸಿದರು. ಎಲೆಕ್ಟ್ರಿಕ್‌ ಬಸ್‌ಗಳಿಗೆ ಡ್ರೈವರ್‌ಗಳ ಕೊರತೆ ಹಿನ್ನೆಲೆಯಲ್ಲಿ ಈಚೆಗೆ ನಿವೃತ್ತಿಯಾದ ಚಾಲಕರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಚಾಲಕರ ಆರೋಗ್ಯ ಸ್ಥಿರತೆಯ ಪ್ರಮಾಣಪತ್ರ ಪಡೆದು ನೇಮಕಾತಿ ನಡೆಯಲಿದೆ ಎಂದರು. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಪಕ್ಷವೇ ತೀರ್ಮಾನಿಸಬೇಕು. ಒಂದು ವೇಳೆ ಪಕ್ಷ ಜವಾಬ್ದಾರಿ ನೀಡಿದರೆ ನಿಭಾಯಿಸುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಬಸ್‌ ಖರೀದಿಸಲು 100 ಕೋಟಿ: ಸಚಿವ ಶ್ರೀರಾಮುಲು

ಸಿದ್ಧರಾಮಯ್ಯನ್ನ ಡಿಕೆಶಿಯೇ ಸೋಲಿಸ್ತಾನ: ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರವಿಲ್ಲದೆ ಮತಿಭ್ರಮಣೆಯಾಗಿರುವ ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಬದಲಾವಣೆ ಕುರಿತು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಹರಿಹಾಯ್ದರು. ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾಯಿಸುವುದು ಪಕ್ಷದ ಆತಂರಿಕ ನಿಯಮ. ಪಕ್ಷದೊಳಗಿನ ವ್ಯವಸ್ಥೆ ಅದು. ಅದಕ್ಕೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್‌ನವರು ನಮ್ಮ ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಯಾವ ನೈತಿಕತೆ ಉಳಿಸಿಕೊಂಡಿಲ್ಲ ಎಂದರಲ್ಲದೆ, ಎಂತಹದ್ದೇ ಸಂದರ್ಭದಲ್ಲೂ ಸಿಎಂ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದರು. ಸಿಎಂ ಸ್ಥಾನ ತಪ್ಪಿಸಲು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಜಿ.ಪರಮೇಶ್ವರ್‌ ಅವರನ್ನು ಸಿದ್ಧರಾಮಯ್ಯ ಸೋಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಸಿದ್ಧರಾಮಯ್ಯನನ್ನ ಡಿ.ಕೆ.ಶಿವಕುಮಾರ್‌ ಸೋಲಿಸ್ತಾನ. ಪರಮೇಶ್ವರ ಸೋಲಿಗೆ ಸಿದ್ಧರಾಮಯ್ಯ ಕಾರಣವಾದಂತೆ ಸಿದ್ಧರಾಮಯ್ಯ ಸೋಲಿಗೂ ಡಿ.ಕೆ.ಶಿವಕುಮಾರ್‌ ಕಾರಣರಾಗುತ್ತಾರೆ ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದರು.

click me!