ಹುಣಸಗಿ/ಕೊಡೇಕಲ್ (ಯಾದಗಿರಿ) (ಆ.13) : ಕಳೆದ ಹದಿನೈದು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿದ್ದ ಮಳೆಯಬ್ಬರ ತಗ್ಗಿದ ಸಮಾಧಾನದ ಬೆನ್ನಲ್ಲೇ, ಯಾದಗಿರಿ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತಿ್ರ ಆಣೆಕಟ್ಟು ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರಕ್ಕೆ ಒಳಹರಿವು ಹೆಚ್ಚುತ್ತಿದೆ. ಹೀಗಾಗಿ, ಜಲಾಶಯದ ಗರಿಷ್ಠ ಮಟ್ಟಕಾಯ್ದಿಟ್ಟುಕೊಂಡು, ಬಸವ ಸಾಗರದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀಡು ಬಿಡುತ್ತಿದ್ದರಿಂದ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ನೀರು ನುಗ್ಗುವ ಆತಂಕ ಎದುರಾಗಿದೆ.
ಯಾದಗಿರಿಯಲ್ಲಿ ವರುಣನ ಆರ್ಭಟ: ಭೀಮಾ ನದಿಗೆ ಮತ್ತೆ ಪ್ರವಾಹ ಆತಂಕ
undefined
ಶುಕ್ರವಾರ ಮಧ್ಯಾಹ್ನ 3 ಗಂಟೆವರೆಗೆ ಆಲಮಟ್ಟಿ(Alamatti dam)ಯ ಮೂಲಕ ಬಸವಸಾಗರ(Basavasagar)ಕ್ಕೆ 2.20 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಬಸವ ಸಾಗರದ 25 ಗೇಟುಗಳ ಮೂಲಕ ಕೃಷ್ಣಾ ನದಿಗೆ 2.34 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಜಲಾಶಯದ ಗರಿಷ್ಠ ಮಟ್ಟ492.25 ಮೀ. ಇದ್ದು, ಶುಕ್ರವಾರ ಮಧ್ಯಾಹ್ನ 490.50 ಮೀ. ನೀರು ಸಂಗ್ರಹವಿತ್ತು. ಒಟ್ಟು 33.31 ಟಿಎಂಸಿ ಸಂಗ್ರಹ ಸಾಮರ್ಥ್ಯದ ಬಸವ ಸಾಗರ ಜಲಾಶಯದಲ್ಲಿ 27.28 ಟಿಎಂಸಿ (ಶೇ.83.52ರಷ್ಟು) ನೀರು ಸಂಗ್ರಹವಿತ್ತು. ಶುಕ್ರವಾರ ರಾತ್ರಿವರೆಗೆ ಮತ್ತಷ್ಟೂಹೆಚ್ಚು ನೀರನ್ನು ಕೃಷ್ಣಾ ನದಿಗೆ ಹೊರಬಿಡುವ ಸಾಧ್ಯತೆಯಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
ಆ.1 ರಿಂದ ಆ.11 ರವರೆಗೆ ಜಿಲ್ಲೆಯಾದ್ಯಂತ 90.5 ಮಿ.ಮೀ. ಮಳೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, 0.6 ರಷ್ಟುಮಳೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆ (110.8ಮಿ.ಮೀ.) ಮಳೆಗಿಂತಲೂ ದುಪ್ಪಟ್ಟು ಮಳೆ (220.1ಮಿ.ಮೀ) ಸುರಿದಿದೆ.
ಛಾಯಾ ಭಗವತೀ ದೇಗುಲದ ಮೆಟ್ಟಲುಗಳ ಮೇಲೆ ಪೂಜೆ : ಪೌರಾಣಿಕ ಪ್ರಸಿದ್ಧ, ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಶ್ರೀ ಛಾಯಾ ಭವಗತಿ ದೇವಸ್ಥಾನಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ. 2.34 ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟಹಿನ್ನೆಲೆಯಲ್ಲಿ ಈಗಾಗಲೇ ನೀರು ದೇವಸ್ಥಾನದ ಪ್ರವೇಶ ಮಾಡಿದೆ. ಹೀಗಾಗಿ, ದೇವಸ್ಥಾನದೊಳಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ದೇವಸ್ಥಾನದ ಅರ್ಚಕರಾದ ಚಿದಂಬರಭಟ್ಟಜೋಶಿ ಮುಂಜಾಗ್ರತವಾಗಿ ದೇವಸ್ಥಾನದ ಮೇಲ್ಭಾಗದ ಮೆಟ್ಟಿಲುಗಳ ಬಳಿ ಛಾಯಾ ಭಗವತಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತರು ನದಿಗೆ ಇಳಿಯದಂತೆ ಪ್ರವಾಸಿ ಮಿತ್ರರಾದ ರಾಮಲಿಂಗಪ್ಪ ಹೆಬ್ಬಾಳ ಮತ್ತು ವೆಂಕಟೇಶ ಕುಲಕರ್ಣಿ ಇವರು ಎಚ್ಚರಿಕೆ ನೀಡುವ ಮೂಲಕ ಕೆಳಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಮತ್ತೆ ಕೃಷ್ಣೆ ಪ್ರವಾಹ ಭೀತಿ: ಹೊರಹರಿವು ಏರಿಳಿತ..!
* ವಿಪತ್ತು ನಿರ್ವಹಣಾ ಸಹಾಯವಾಣಿ : ಪ್ರವಾಹ ಸಂಭಾವ್ಯದಿಂದ 24 ಗಂಟೆಗಳ ಕಾಲ ನಿರ್ವಹಿಸುವ ಸಹಾಯವಾಣಿ (08473-253800) ಸ್ಥಾಪಿಸಿರುವ ಜಿಲ್ಲಾಡಳಿತ ನದಿ ತೀರದ ಜನರ ಅಹವಾಲುಗಳಿಗೆ ಸ್ಪಂದಿಸಲು ಸನ್ನದ್ಧವಾಗಿದೆ. ಸುರಪುರ ಮತ್ತು ವಡಗೇರಾ ತಾಲೂಕುಗಳಲ್ಲಿ ಎಸ್‌ಡಿಆರ್‌ಎಫ್ ತಂಡ ನಿಯೋಜಿಸಲಾಗಿದೆ. ಪ್ರವಾಹಕ್ಕೆ ಒಳಗಾಗುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ವಾಹನಗಳ ಸಿದ್ಧತೆ ಅವಶ್ಯಕವಾಗಿಟ್ಟುಕೊಂಡು, ಪ್ರವಾಹ ಪೀಡಿತ ಸಂತ್ರಸ್ತರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಜಾನುವಾರುಗಳಿಗಾಗಿ ಗೋಶಾಲೆಗಳ ತೆರೆಯಲು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೇತುವೆಗಳಲ್ಲಿ ಪೊಲೀಸರ ನಿಯೋಜಿಸಲಾಗಿದೆ. ತಿಂಥಣಿ ಹಾಗೂ ವಡಗೇರಾದಲ್ಲಿ ಸುಸಜ್ಜಿತ ಬೋಟ್ ವ್ಯವಸ್ಥೆ ಇರಿಸಲು ಜೊತೆಗೆ ನುರಿತ ಈಜುಗಾರರ ಸಿದ್ಧವಾಗಿಟ್ಟುಕೊಳ್ಳಲು ಅಗ್ನಿಶಾಮಕ ದಳಕ್ಕೆ ಸೂಚಿಸಲಾಗಿದೆ.
ಕೊಳ್ಳೂರು (ಎಂ) ಸೇತುವೆ ಮೇಲೆ ನೀರು ಸಾಧ್ಯತೆ : ಕಲಬುರಗಿ-ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಸಂಪರ್ಕಿಸುವ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಸೇತುವೆ ಮೇಲೆ ನೀರು ನುಗ್ಗುವ ಆತಂಕ ಎದುರಾಗಿದೆ. 3 ಲಕ್ಷ ಕ್ಯೂಸೆಕ್ ಸಮೀಪಿಸಿದರೆ ಮೇಲೆ ನೀರು ಹರಿಯುತ್ತದೆ. ಈಗಾಗಲೇ, ಸೇತುವೆ ಮುಟ್ಟಲು ನಾಲ್ಕೈದು ಅಡಿಗಳಷ್ಟುನೀರು ಬಂದಿದೆ.
ಜಲಾಶಯ ವಿಕ್ಷೀಸಲು ಪ್ರವಾಸಿಗರ ದಂಡು : ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಬಿಡುತ್ತಿರುವ ಸುಂದರ ದೃಶ್ಯಸೊಬಗನ್ನು ವಿಕ್ಷೀಸಲು ರಜಾದಿನವಾದ ಭಾನುವಾರದಂದು ಜಲಾಶಯಕ್ಕೆ ಸುತ್ತಮುತ್ತಲಿನ ಗ್ರಾಮದ ಜನತೆ ಕುಟುಂಬದೊಡನೆ ಹಾಗೂ ಯುವಸಮೂಹವು ತಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಆಗಮಿಸಿದ್ದರು. ಭೋರ್ಗರೆಯುತ್ತ ಹರಿಯುವ ಕೃಷ್ಣೆಯ ರಮಣೀಯ ದೃಶ್ಯವನ್ನು ನೋಡಲು ಆಗಮಿಸುತ್ತಿದ್ದಾರೆ. ಇನ್ನೆರೆಡು ದಿನಗಳಲ್ಲಿ ಜಲಾಶಯದತ್ತ ಪ್ರವಾಸಿಗರ ದಂಡು ಬರುವ ಸಾಧ್ಯತೆಯಿದೆ.
17 ಹಳ್ಳಿಗಳಿಗೆ ಪ್ರವಾಹ ಭೀತಿ : ಜಿಲ್ಲೆಯ 17 ಹಳ್ಳಿಗಳಲ್ಲಿ ಕೃಷ್ಣಾ ನದಿಯ ಪ್ರವಾಹ ಸಂಭಾವ್ಯಇದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಹೀಗಾಗಿ, ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಲು ಜಿಲ್ಲಾಧಿಕಾರಿ ಆರ್. ಸ್ನೇಹಲ್ ವಿವಿಧ ಇಲಾಖೆಗಳ ಸಭೆ ನಡೆಸಿ, ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಧ್ವನಿವರ್ಧಕಗಳ ಮೂಲಕ ಡಂಗೂರ ಸಾರಿ ಜನ-ಜಾನುವಾರುಗಳು ನದಿಗಿಳಿಯದಂತೆ ಸೂಚನೆ ನೀಡಲಾಗಿದೆ. ಎಸ್ಪಿ ಡಾ. ವೇದಮೂರ್ತಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿವಿಧ ಗ್ರಾಮಗಳಿಗೆ ತೆರಳಿ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಕೃಷ್ಣಾ ತೀರದ ಬಂಡೋಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠ ರಾಯನಗಡ್ಡಿ ಸೇರಿ ಇತರೆ ಗ್ರಾಮಗಳ ಜನತೆಯಲ್ಲಿ ಶುಕ್ರವಾರ ಜಲಾಶಯದಿಂದ 2.50 ಲಕ್ಷ ಕ್ಯುಸೆಕ್‌ವರೆಗೆ ನೀರು ಹರಿಬರುವ ಸಾಧ್ಯತೆವಿರುವುದರಿಂದ ಆತಂಕ ಉಂಟಾಗಿದೆ.