ಉಡುಪಿಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಾಚರಿಸುತ್ತಿರುವ ಸಂಸ್ಥೆ ಯಕ್ಷಗಾನ ಕಲಾರಂಗ. ಯಕ್ಷಗಾನ ಕಲಾವಿದರ ಸರ್ವತೋಮುಖ ಕ್ಷೇಮಾಭಿವೃದ್ಧಿಗೆ ಈ ಸಂಸ್ಥೆ ಕೆಲಸ ಮಾಡುತ್ತಿದೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜೂನ್ 20): ಉಡುಪಿಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಾಚರಿಸುತ್ತಿರುವ ಸಂಸ್ಥೆ ಯಕ್ಷಗಾನ ಕಲಾರಂಗ. ಯಕ್ಷಗಾನ ಕಲಾವಿದರ ಸರ್ವತೋಮುಖ ಕ್ಷೇಮಾಭಿವೃದ್ಧಿಗೆ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಈ ಪುಣ್ಯ ಕಾರ್ಯದ ಜೊತೆಗೆ ಈ ಸಂಸ್ಥೆ ನಡೆಸುತ್ತಿರುವ ಮತ್ತೊಂದು ಮಹತ್ವದ ಯೋಜನೆ ವಿದ್ಯಾಪೋಷಕ್. ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ವಿದ್ಯಾಪೋಷಕ್, ಸದ್ದಿಲ್ಲದೆ ಕರಾವಳಿಯ ಶೈಕ್ಷಣಿಕ ಅಭಿವೃದ್ಧಿಗೆ ತನ್ನ ಕೊಡುಗೆ ನೀಡುತ್ತಾ ಬಂದಿದೆ.
ವಿದ್ಯಾಪೋಷಕ್ ಯೋಜನೆ ಉಡುಪಿ ಜಿಲ್ಲೆಯಲ್ಲಿ ಒಂದು ಮಹತ್ವದ ಕ್ರಾಂತಿಯನ್ನೇ ಮಾಡಿದೆ. ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಸಾರ್ಥಕ ಕೆಲಸ ಕೈಗೊಂಡಿದೆ. ಈವರೆಗೆ 30 ವಿದ್ಯಾರ್ಥಿಗಳಿಗೆ ಮನೆ ಕಟ್ಟಿಸಿ ಕೊಟ್ಟಿರುವ ಯಕ್ಷಗಾನ ಕಲಾರಂಗ ಸಂಸ್ಥೆಯ 31 ನೇ ಮನೆಯ ಹಸ್ತಾಂತರ ಇದೀಗ ನಡೆದಿದೆ.
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಹಾಕಿದ ಮಕ್ಕಳ ಮನೆಗಳಿಗೆ ಸಂಸ್ಥೆಯ ಸ್ವಯಂ ಸೇವಕರು ಭೇಟಿ ನೀಡುತ್ತಾರೆ. ಸ್ವಯಂಸೇವಕರ ವರದಿಯೇ ಈ ವಿದ್ಯಾರ್ಥಿವೇತನಕ್ಕೆ ಪ್ರಮುಖ ಮಾನದಂಡ. ವಿದ್ಯಾರ್ಥಿಗಳ ಬಡತನವನ್ನು ಅಂದಾಜಿಸಿ, ಅವರು ಗಳಿಸಿರುವ ಉತ್ತಮ ಅಂಕಗಳನ್ನು ಪರಿಗಣಿಸಿ, ಆ ಮಕ್ಕಳಿಗೆ ದಾನಿಗಳನ್ನು ಜೋಡಿಸಿ, ಒಂದು ದೊಡ್ಡ ಮೊತ್ತದ ವಿದ್ಯಾರ್ಥಿವೇತನವನ್ನು ಯಕ್ಷಗಾನ ಕಲಾರಂಗ ಸಂಸ್ಥೆ ನೀಡುತ್ತಾ ಬಂದಿದೆ. ಈ ಮನೆ ಬೇಟಿಯ ವೇಳೆಯಲ್ಲಿ, ಕಡುಬಡತನದಲ್ಲಿ ಇರುವ ಮಕ್ಕಳನ್ನು ಗುರುತಿಸಿ, ಅವರ ಮನೆಯ ಸ್ಥಿತಿಗತಿಯನ್ನು ನೋಡಿ, ಶಿಕ್ಷಣದ ಜೊತೆಗೆ ಬದುಕು ಕಟ್ಟಿಕೊಡುವ ಕೆಲಸ ಕಲಾರಂಗ ಸಂಸ್ಥೆಯ ಮೂಲಕ ಆಗುತ್ತಿದೆ.
TODDY ತೆಗೆಯಲು ಅನುಮತಿಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಉಪವಾಸ ಸತ್ಯಾಗ್ರಹ
ಇಂತಹ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಂದರ ಮನೆಗಳನ್ನು ಕಟ್ಟಿಸಿ ಕೊಡಲಾಗುತ್ತಿದೆ. ಈ ರೀತಿ ದಾನಿಗಳ ನೆರವಿನಿಂದ ಈವರೆಗೆ 30 ಮನೆಗಳನ್ನು ಹಸ್ತಾಂತರಿಸಲಾಗಿದೆ. ಯಕ್ಷಗಾನ ಕಲಾರಂಗ ಸಂಸ್ಥೆಯ ವಿಶ್ವಾಸಾರ್ಹ ಕಾರ್ಯಶೈಲಿಯನ್ನು ಮೆಚ್ಚಿ ಅನೇಕ ದಾನಿಗಳು ಬಡಮಕ್ಕಳ ನೆರವಿಗೆ ಮುಂದಾಗುತ್ತಿದ್ದಾರೆ.
ಯಕ್ಷಗಾನ ಕಲಾರಂಗ ನಿರ್ಮಿಸಿದ 31ನೇ ಮನೆಯ ಉದ್ಘಾಟನಾ ಸಮಾರಂಭ ಹಿರಿಯಡ್ಕ ಸಮೀಪದ ಕೊಂಡಾಡಿಯಲ್ಲಿ ಜರಗಿತು. ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯರಾದ ರಕ್ಷಿತಾ ಪೂಜಾರಿ ಹಾಗೂ ಧನ್ಯ ಪೂಜಾರಿ ಇವರಿಗೆ ಪೇಜಾವರ ಮಠ ಮತ್ತು ಗುರುರಾಜ ಅಮೀನ್‍ರ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಮನೆ ‘ಶ್ರೀಗುರುಕೃಪಾ’ವನ್ನು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ತಮ್ಮ ಅನುಗ್ರಹ ಸಂದೇಶದಲ್ಲಿ ಸ್ವಾಮೀಜಿ ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಾಮಾಜಿಕ ಕಾಳಜಿಯ ಕಾರ್ಯಕ್ರಮವನ್ನು ಮೆಚ್ಚಿಕೊಂಡು ಪ್ರಜಾರಾಜ್ಯದಲ್ಲಿ ರಾಮರಾಜ್ಯ ನಿರ್ಮಾಣವಾಗಲು ಆರ್ಥಿಕವಾಗಿ ಸಬಲರಾದ ಪ್ರತಿಯೊಬ್ಬರೂ ಇಲ್ಲದವರತ್ತ ಕೃಪಾದೃಷ್ಟಿ ಬೀರಬೇಕು, ಒಳ್ಳೆಯ ಕೆಲಸ ಮಾಡಿ ಅದನ್ನು ದೇವರಲ್ಲಿ ನಿವೇದಿಸಿಕೊಂಡರೆ ಅದುವೇ ದೇವರಿಗೆ ಸಮರ್ಪಿಸುವ ಕಾಣಿಕೆ ಎಂದು ನುಡಿದರು.
ಮನೆಯ ಸಹಪ್ರಾಯೋಜಕರಾದ ಶ ಗುರುರಾಜ ಅಮೀನ್ ಹಾಗೂ ಶ್ರೀಮತಿ ಜಯಲಕ್ಷ್ಮೀ ಗುರುರಾಜ ಅಮೀನ್ ದಂಪತಿಗಳನ್ನು ಶಾಲು ಹೊದಿಸಿ ಹರಸಿದರು.
Udupi; ಈ ಒಂಟಿ ವೃದ್ದೆಯನ್ನು ಮರಳಿ ಗೂಡಿಗೆ ಸೇರಿಸುವವರಾರು?
ಬಡಮಕ್ಕಳ ಕನಸು ನನಸು ಮಾಡುವ ವಿದ್ಯಾಪೋಷಕ್: ಯಕ್ಷಗಾನ ಕಲಾರಂಗ ನಡೆಸುವ ಒಂದು ಅಪರೂಪದ ಯೋಜನೆ ವಿದ್ಯಾಪೋಷಕ್. ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಕೋಟ್ಯಂತರ ರೂಪಾಯಿಯನ್ನು ಯೋಜನೆಯಡಿಯಲ್ಲಿ ಒದಗಿಸಲಾಗಿದೆ. ಕಳೆದ ಸಾಲಿನಲ್ಲಿ 1024 ವಿದ್ಯಾರ್ಥಿಗಳಿಗೆ ಅಂದಾಜು 75 ಲಕ್ಷರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರೆ ಯೋಜನೆಯ ಅಗಾಧತೆಯನ್ನು ನೀವೇ ಊಹಿಸಬಹುದು.
ಕೇವಲ ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಯ ಕೆಲಸ ಮಾಡಿಕೊಂಡು ಇರಬಹುದಾಗಿದ್ದ ಸಂಸ್ಥೆಯೊಂದು, ಸಾಮಾಜಿಕ ಜವಾಬ್ದಾರಿಯನ್ನು ಮೆರೆದು ಉಳ್ಳವರಿಂದ ಇಲ್ಲದವರಿಗೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಪ್ರಶಂಸನಾರ್ಹ ಕೆಲಸವಾಗಿದೆ. ವಿದ್ಯಾರ್ಥಿವೇತನ ಜೊತೆಜೊತೆಗೆ ಮನೆ ಕಟ್ಟಿಸಿ ಕೊಡುವ ಕೆಲಸ ದೇಶಕ್ಕೆ ಮಾದರಿಯಾಗಿದೆ. 31 ಮನೆಗಳ ಹಸ್ತಾಂತರವಾಗಿದ್ದು ಇನ್ನೂ ನಾಲ್ಕು ಮನೆಗಳು ಕೆಲವೇ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.