
ಕನ್ನಡಪ್ರಭ ವಾರ್ತೆ ಉಡುಪಿ
ಎಂಟು ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ 5 ಲಕ್ಷ ರು. ಬಾಕಿ ಹಣ ನೀಡುವಂತೆ ಕುಟುಂಬಸ್ಥರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ ಇಬ್ಬರನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿಯ ಕುಕ್ಕುಂಜೆಯ ಸಾಜಿದ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಪನಳ್ಳಿ ನಿವಾಸಿ ಸೈಯದ್ ಸೈಫ್ ಅಹಮ್ಮದ್ ಎಂದು ಗುರುತಿಸಲಾಗಿದೆ.
ಜು.2ರಂದು ಅಶೋಕ್ ಪಡಿಯಾರ್ ಎಂಬವರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿದ ಆರೋಪಿ ಹಿಂದಿಯಲ್ಲಿ, ‘ನಿಮ್ಮ ಮಗ ಅಜಿತ್ ಪಡಿಯಾರ್ ನಮ್ಮೊಂದಿಗೆ ವಜ್ರದ ವ್ಯವಹಾರ ನಡೆಸಿದ್ದು, 5 ಲಕ್ಷ ಹಣ ರು. ಬಾಕಿ ಉಳಿಸಿಕೊಂಡಿದ್ದಾರೆ. ಕೂಡಲೇ ಹಣ ಪಾವತಿಸಿ ಎಂದು ಬೇಡಿಕೆ ಇಟ್ಟಿದ್ದ. ಆದರೇ ಅಜಿತ್ ಅವರು ಎಂಟು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಅಂತಹ ವ್ಯವಹಾರದ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಪಡಿಯಾರ್ ಹಣ ಕೊಡಲು ನಿರಾಕರಿಸಿದ್ದರು.
ಬಳಿಕ ಆರೋಪಿಗಳು ದುಬೈಯಲ್ಲಿದ್ದ ಅಶೋಕ್ ಅವರ ಮತ್ತೊಬ್ಬ ಪುತ್ರ ಅಮೀತ್ ಅವರಿಗೂ ಕರೆ ಮಾಡಿ, 5 ಲಕ್ಷ ರು. ಕೊಡದಿದ್ದರೆ, ಊರಿನಲ್ಲಿರುವ ಅವರ ಪತ್ನಿ ರಕ್ಷಾಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಪಡಿಯಾರ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಉಡುಪಿ ನಗರ ಠಾಣೆ ಪಿಎಸ್‌ಐ ರತ್ನಾಕರ ಕೆ. ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ.