
ಧಾರವಾಡ; ಅಕ್ರಮ ಮರಳು ಸಾಗಾಟದ ಲಾರಿ ಬಿಡಲು ಕಮಿಷನ್ ದಂದೆಗೆಿಳಿದು ಲಕ್ಷಾಂತರ ರೂಪಾಯಿ ಲಂಚದ ಆಸೆಗೆ ಬಿದ್ದಿದ್ದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದು, ದಾಳಿಯ ಸುಳಿವು ಸಿಗುತ್ತಿದ್ದಂತೆ ಮತ್ತಿಬ್ಬರು ಕಾನ್‌ಸ್ಟೇಬಲ್‌ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯಿಂದ ಧಾರವಾಡದ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದರು. ಮರಳು ಸಾಗಾಟಕ್ಕೆ ಅನುಮತಿ ನೀಡಲು ಹಾಗೂ ಲಾರಿಯನ್ನು ಮುಂದಕ್ಕೆ ಬಿಡಲು ಇಬ್ಬರು ಪೊಲೀಸರು ಕಮಿಷನ್ ರೂಪದಲ್ಲಿ ಹಣದ ಬೇಡಿಕೆ ಇಟ್ಟಿದ್ದರು. ಮರಳು ಲಾರಿಯ ಮಾಲೀಕರಾದ ಕೊಪ್ಪಳ ಮೂಲದ ಹಣಮಂತ ಎಂಬುವವರಿಂದ ಲಾರಿ ಬಿಡಲು ಬರೋಬ್ಬರಿ 30,000 ರೂಪಾಯಿ ಲಂಚಕ್ಕೆ ಬೇಡಿಕೆಯಿಡಲಾಗಿತ್ತು. ನಗದು ರೂಪದಲ್ಲಿ ಹಣ ನೀಡಲು ಸಾಧ್ಯವಾಗದಿದ್ದಾಗ, ಡಿಜಿಟಲ್ ಪಾವತಿ ವ್ಯವಸ್ಥೆಯಾದ ‘ಫೋನ್ ಪೇ’ (PhonePe) ಮೂಲಕವೇ ಲಂಚದ ಹಣವನ್ನು ವರ್ಗಾಯಿಸಿಕೊಳ್ಳಲಾಗಿತ್ತು.
ಪೋಲಿಸರ ಈ ಅಕ್ರಮ ಮತ್ತು ಸುಲಿಗೆಯ ವಿರುದ್ಧ ಬೇಸತ್ತ ಲಾರಿ ಮಾಲೀಕ ಹಣಮಂತ ಅವರು ತಕ್ಷಣವೇ ಧಾರವಾಡ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಲೋಕಾಯುಕ್ತ ಎಸ್‌ಪಿ (SP) ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಅಧಿಕಾರಿಗಳ ಸಜ್ಜಿತ ತಂಡವು ಕಾರ್ಯಾಚರಣೆಗೆ ಯೋಜನೆ ರೂಪಿಸಿತ್ತು.
ದಾಳಿಯ ಸಮಯದಲ್ಲಿ, ಡಿಜಿಟಲ್ ರೂಪದಲ್ಲಿ ಹಣ ಪಡೆದು ಅಕ್ರಮ ಎಸಗಿದ್ದ ಹೆಡ್ ಕಾನ್‌ಸ್ಟೇಬಲ್ ಹಸನ್ ಸಾಬ್ ನದಾಪ್ ಹಾಗೂ ಕಾನ್‌ಸ್ಟೇಬಲ್ ಇಕ್ಬಾಲ್ ನದಾಪ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಲು ಸ್ಥಳಕ್ಕೆ ಬರುತ್ತಿದ್ದ ಸುಳಿವು ಸಿಗುತ್ತಿದ್ದಂತೆಯೇ, ಸ್ಥಳದಲ್ಲಿದ್ದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಮತ್ತಿಬ್ಬರು ಸಿಬ್ಬಂದಿಗಳಾದ ಗಿರೀಶ್ ಮನಸೂರ್ ಹಾಗೂ ಅಬ್ದುಲ್ ಎಂಬ ಕಾನ್‌ಸ್ಟೇಬಲ್‌ಗಳು ಅಧಿಕಾರಿಗಳ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಪೊಲೀಸ್ ಸಿಬ್ಬಂದಿಗಳ ಮೇಲೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಾನೂನುಬದ್ಧ ಪ್ರಕರಣ (FIR) ದಾಖಲಾಗಿದೆ. ಬಂಧಿತರಾಗಿರುವ ಹಸನ್ ಸಾಬ್ ನದಾಪ್ ಮತ್ತು ಇಕ್ಬಾಲ್ ನದಾಪ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದೆಡೆ, ದಾಳಿಯ ವೇಳೆ ಸ್ಥಳದಿಂದ ಕಾಲ್ಕಿತ್ತಿರುವ ಗಿರೀಶ್ ಮನಸೂರ್ ಹಾಗೂ ಅಬ್ದುಲ್ ಅವರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ ಲಂಚದ ದಂದೆಗೆ ಇಳಿದು ಲೋಕಾ ಬಲೆಗೆ ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.