
ಉಡುಪಿ: ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಕೋಟೆ ಬಸದಿಯಲ್ಲಿ ಐದು ಅಪರೂಪದ ಜಿನ ಶಾಸನಗಳು ಪತ್ತೆಯಾಗಿದೆ. ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ರಾಜಗುರು ಪೀಠದ ಪರಂಪರೆಗೆ ಒಳಪಟ್ಟಿರುವ ಕೋಟೆ ಬಸದಿಯಲ್ಲಿ ಆದಿನಾಥ ತೀರ್ಥಂಕರ, ನೇಮಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಹಾಗೂ ಪದ್ಮಾವತಿ ದೇವಿಯ ಸನ್ನಿಧಾನಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ಐದು ಪ್ರಾಚೀನ ಶಾಸನಗಳು ಗಮನಕ್ಕೆ ಬಂದಿವೆ.
ಆಯುರ್ವೇದ ವೈದ್ಯ ಡಾ. ಪಿ. ಸತ್ಯನಾರಾಯಣ ಭಟ್ ಅವರ ಮಾಹಿತಿಯ ಮೇರೆಗೆ ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಅವರ ನೇತೃತ್ವದ ತಂಡ ಜಿನ ಪ್ರತಿಮೆಗಳು ಹಾಗೂ ಶ್ರುತಸ್ಕಂದದ ಪೀಠಭಾಗದಲ್ಲಿದ್ದ ಶಾಸನಗಳನ್ನು ಗುರುತಿಸಿತು. ಪುರಾತತ್ತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಶಾಸನಗಳ ಸಮಗ್ರ ಅಧ್ಯಯನ ನಡೆಸಿದ್ದಾರೆ.
ಕಂಚಿನ ಗಣಧರ ಪಾದದ ಪೀಠದಲ್ಲಿರುವ ಮೂರು ಸಾಲಿನ ಶಾಸನವು ಮಾಳದ ಕೋಟೆ ಬಸದಿಗೆ ಹೆಗಡೆಯ ಮಗ ‘ವಿಞ’ ಎಂಬುವವರು ಗಣಧರ ಪಾದವನ್ನು ಮಾಡಿಸಿಕೊಟ್ಟಿರುವುದನ್ನು ದಾಖಲಿಸಿದೆ. ಈ ಶಾಸನ 18–19ನೇ ಶತಮಾನಕ್ಕೆ ಸೇರಿದೆ ಎಂದು ಅಂದಾಜಿಸಲಾಗಿದೆ.
ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯನ್ನು ‘ಪಾಯಂಣ’ ಎಂಬ ವ್ಯಕ್ತಿ ಮಾಡಿಸಿದ್ದು 14ನೇ ಶತಮಾನಕ್ಕೆ ಸೇರಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದು ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯ ಶಾಸನದಲ್ಲಿ ‘ವಿರೋಧಿಕೃತು ಸಂವತ್ಸರ’ದ ವೈಶಾಖ ಶುದ್ಧ ತ್ರಯೋದಶಿಯಂದು ಐತಪ್ಪ ಬಳಿಯ ಸಿರುಳಾಲ (ಶಿರ್ಲಾಲು) ಕೋಟಿಲದೇವನು ಪ್ರತಿಷ್ಠಾಪಿಸಿದ ಚವಿಸತೀರ್ಥ ಪಾರ್ಶ್ವನಾಥ ಪ್ರತಿಮೆಯ ಅಮೃತಪಡಿಗೆ ಮೂರುವರೆ ಮುಡಿ ಅಕ್ಕಿಯನ್ನು ಸಮರ್ಪಿಸಿರುವ ಮಾಹಿತಿ ದಾಖಲಾಗಿದೆ. ಇದು 1611, ಏಪ್ರಿಲ್ 15, ಸೋಮವಾರಕ್ಕೆ ಹೊಂದಿಕೆಯಾಗುತ್ತದೆ.
ಅಮೃತಶಿಲೆಯ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆಯ ಪೀಠದಲ್ಲಿ ದೇವನಾಗರಿ ಲಿಪಿಯ ಶಾಸನವಿದೆ. ಸಾಮಾನ್ಯ ಶಕೆ 17ನೇ ಶತಮಾನದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಿರುವುದನ್ನು ಈ ಶಾಸನ ದಾಖಲಿಸುತ್ತದೆ.
ಲಭ್ಯವಿರುವ ಐತಿಹಾಸಿಕ ಸಾಕ್ಷ್ಯಗಳ ಆಧಾರದ ಮೇಲೆ ಕೋಟೆ ಬಸದಿ 14–15ನೇ ಶತಮಾನಕ್ಕೆ ಸೇರಿದ ಪ್ರಾಚೀನ ಜೈನ ಆರಾಧನಾ ಕೇಂದ್ರವಾಗಿರಬಹುದು ಎಂಬ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.
ಈ ಕ್ಷೇತ್ರಕಾರ್ಯದಲ್ಲಿ ಕೋಟೆ ಬಸದಿಯ ಶ್ರೀ ಚಂದ್ರನಾಥ ಇಂದ್ರರು, ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸಾಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್. ಅವರು ಸಹಕರಿಸಿದ್ದಾರೆ.