
ಬೆಂಗಳೂರು (ಆ.28): ಸೈಬರ್ ಅಪರಾಧ ಪ್ರಕರಣವೊಂದರ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಮೂಲದ ಪೊಲೀಸ್ ಇನ್ಸ್‌ಪೆಕ್ಟರ್ ಬಸ್ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟ ದುಃಖದ ಘಟನೆ ಸಂಭವಿಸಿದೆ. ಬೆಂಗಳೂರು ಆಗ್ನೇಯ ವಿಭಾಗದ ಸೆನ್ (CEN) ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಬಿ. ರವಿ (2007 ಬ್ಯಾಚ್ ಅಧಿಕಾರಿ) ಅವರೇ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರು. ಸೈಬರ್ ಎಪಿಕೆ (APK) ಫೈಲ್ ಫ್ರಾಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಒಟ್ಟು ಒಂಬತ್ತು ಜನರಿದ್ದ ಪೊಲೀಸರ ತಂಡ ಮಧ್ಯಪ್ರದೇಶಕ್ಕೆ ತೆರಳಿತ್ತು.
ಈ ಪೈಕಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ನಂತರ ಆರು ಸಿಬ್ಬಂದಿ ಬೆಂಗಳೂರಿಗೆ ವಾಪಸಾಗಿದ್ದರು. ಆದರೆ, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಇನ್ಸ್‌ಪೆಕ್ಟರ್ ರವಿ ಸೇರಿದಂತೆ ಮೂವರು ಸಿಬ್ಬಂದಿ ಮಧ್ಯಪ್ರದೇಶದಲ್ಲೇ ಉಳಿದುಕೊಂಡಿದ್ದರು.
ಭೋಪಾಲ್‌ನಿಂದ ಇಂದೋರ್‌ಗೆ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಈ ಭೀಕರ ಅಪಘಾತ ಸಂಭವಿಸಿದೆ. ಇನ್ಸ್‌ಪೆಕ್ಟರ್ ರವಿ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಅವರ ಜೊತೆಗಿದ್ದ ಪಿಎಸ್‌ಐ ರಮೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನಿಬ್ಬರು ಸಿಬ್ಬಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಕೆ.ಬಿ. ರವಿ ಅವರು 2005 ಬ್ಯಾಚ್‌ನಲ್ಲಿ ಕಾನ್‌ಸ್ಟೇಬಲ್ ಆಗಿ ಸೇವೆಗೆ ಸೇರಿ, ಬಳಿಕ 2007ರಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು. ಈ ಹಿಂದೆ ಬೆಂಗಳೂರಿನ ಅಶೋಕನಗರ, ಇಂದಿರಾನಗರ ಹಾಗೂ ಕೋರಮಂಗಲ ಠಾಣೆಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು. ಘಟನೆಯ ಕುರಿತು ಬೆಂಗಳೂರು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.