ಬ್ರಹ್ಮಾವರ (ಆ.20): ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್‌ನ ಅಟ್ಟಹಾಸ ಆರಂಭವಾಗುತ್ತದೆಂದು ನಮಗೆ 2 ವರ್ಷಗಳ ಹಿಂದೆಯೇ ತಿಳಿದಿತ್ತು. ಈಗ ಅಲ್ಲಿ ಏನು ನಡೀತಿದೆ ಅದು ನಿರೀಕ್ಷಿತ ಎಂದು 11 ವರ್ಷಗಳ ಕಾಲ ಕಾಬೂಲ್‌ನಲ್ಲಿ ಕೆಲಸ ಮಾಡಿದ್ದ ಇಲ್ಲಿನ ನೀಲಾವರದ ಮಂಜುನಾಥ್ ಹೇಳಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ಅಲ್ಲಿನ ತಮ್ಮ ಅನುಭವಗಳನ್ನು ಬಿಚ್ಚಿಟ್ಟರು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆ ಇದ್ದಾಗ ಯಾವುದೇ ಹೆದರಿಕೆ ಇರಲಿಲ್ಲ, ರಾತ್ರಿ- ಹಗಲು ನಾವು ನಿರಾತಂಕವಾಗಿ ಕಾಬೂಲ್‌ನಲ್ಲಿ ತಿರುಗಾಡುತಿದ್ದೆವು. ಎಲ್ಲ ಕಡೆ ಅಮೆರಿಕದ ಸೈನಿಕರ ಭದ್ರ ಕಾವಲು ಇತ್ತು. ಆದರೆ ಈಗ ಅಲ್ಲಿ ತಾಲಿಬಾನ್ ಸೈನಿಕರ ಕಾವಲು ಇದೆಯಂತೆ, ಹೊರಗೆ ಯಾರೂ ತಿರುಗಾಡುವಂತಿಲ್ಲ ಎಂದು ಅವರು ಹೇಳಿದರು.
ತಾಲಿಬಾನಿಗಳಿಗೆ ಸಾಲು ಸಾಲು ಸವಾಲು : ಹಣವಿಲ್ಲ, ಅಹಾರ ದುಬಾರಿ
ನಾವು ಆಗ ಅಮೆರಿಕನ್ ಆರ್ಮಿ ಬೇಸ್‌ನಲ್ಲಿ ಅತ್ಯಂತ ಸುರಕ್ಷಿತವಾಗಿದ್ದೆವು. ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಕಾಬೂಲ್ ಬಿಟ್ಟು ಹೊರಗೆ ಗಲಾಟೆ ಆಗುತಿತ್ತು, ನಾವು ಮಾತ್ರ ಸುರಕ್ಷಿತವಾಗಿದ್ದೆವು. ಅಮೆರಿಕ ಸೈನಿಕರ ಕ್ಯಾಂಪ್‌ಗಳಲ್ಲಿ ತುಂಬಾ ಜನ ಭಾರತೀಯರು ಉದ್ಯೋಗದಲ್ಲಿದ್ದರು. ಅಮೆರಿಕ ಸೈನ್ಯ ಹಿಂದಕ್ಕೆ ಹೋಗುವಾಗ ಅವರಲ್ಲಿ ತುಂಬಾ ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿದ್ದಾರೆ. ಆದ್ದರಿಂದ ತುಂಬಾ ಜನ ಭಾರತೀಯರು ಅಪಾಯದಿಂದ ಬಚಾವಾಗಿದ್ದಾರೆ. ಈಗ ಕಾಬೂಲ್‌ನಲ್ಲಿ ಕೆಲವು ಜನರು ಇದ್ದಾರೆ ಅಂತ ಹೇಳುತಿದ್ದಾರೆ ಎಂದರು.
ಮಂಜುನಾಥ್ ಅವರು ಕಾಬೂಲ್‌ನಲ್ಲಿ 11 ವರ್ಷ ಅಮೆರಿಕ ಆರ್ಮಿ ಬೇಸ್ ಕ್ಯಾಂಪ್‌ನಲ್ಲಿ ವಾಹನ ನಿರ್ವಹಣೆ, ಸೀನಿಯರ್ ಮೆಕಾನಿಕ್, ವರ್ಕ್ ಶಾಪ್ ಸೂಪರ್ ವೈಸರ್ ಆಗಿದ್ದರು. ಕೊನೆಗೆ ಅಫ್ಘಾನಿಸ್ತಾನದ ಸೈನಿಕರಿಗೆ ವಾಹನ ನಿರ್ವಹಣೆಯ ತರಬೇತುದಾರರೂ ಆಗಿದ್ದರು. 8 ತಿಂಗಳ ಹಿಂದೆ ಅವರು ಉದ್ಯೋಗ ಬಿಟ್ಟು ಊರಿಗೆ ಬಂದಿದ್ದಾರೆ.