ಅಕ್ರಮ ಸಾಗಣೆ: ಉಸಿರುಗಟ್ಟಿ 18 ಕರುಗಳ ದಾರುಣ ಸಾವು

Kannadaprabha News   | Asianet News
Published : Aug 20, 2021, 09:26 AM ISTUpdated : Aug 20, 2021, 09:30 AM IST
ಅಕ್ರಮ ಸಾಗಣೆ: ಉಸಿರುಗಟ್ಟಿ 18 ಕರುಗಳ ದಾರುಣ ಸಾವು

ಸಾರಾಂಶ

*  ಒಂದೇ ಜೀಪಲ್ಲಿ 44 ಕಾರುಗಳ ಕಾಲು, ಬಾಯಿ ಕಟ್ಟಿ ಸಾಗಣೆ *  ಹಳೇಬೀಡಿನ ಬಳಿ ನಡೆದ ದುರ್ಘಟನೆ *  ಮಗುಚಿಬಿದ್ದ ಜೀಪಿನಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕರುಗಳು   

ಬೇಲೂರು/ಹಳೇಬೀಡು(ಆ.20):  ಕೆಲವೇ ದಿನಗಳ ಹಿಂದೆ ತಾಲೂಕಿನಲ್ಲಿ ನಡೆದ ಮಂಗಗಳ ಮಾರಣಹೋಮ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ. ಅಕ್ರಮವಾಗಿ 44 ಕರುಗಳನ್ನು ಕಾಲು ಬಾಯಿ ಕಟ್ಟಿ ಸಾಗಿಸುವ ವೇಳೆ ಸಂಭವಿಸಿದ ಅಪಘಾತದಲ್ಲಿ 18 ಕರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ತಾಲೂಕಿನ ಹಳೇಬೀಡು ಸಮೀಪದ ದ್ಯಾವಪ್ಪನಹಳ್ಳಿ ಬಳಿ ಬುಧವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಮಹೀಂದ್ರ ಪಿಕಪ್‌ ಜೀಪೊಂದು ರಸ್ತೆಬದಿಯ ಕಂಬಕ್ಕೆ ಡಿಕ್ಕಿ ಹೊಡೆದು ಮಗು ಚಿಬಿದ್ದಿತ್ತು. ಅಪಘಾತದ ಸದ್ದು ಕೇಳಿದ ಸ್ಥಳೀಯರು ಬರುವಷ್ಟರಲ್ಲಿ ಜೀಪಿನ ಚಾಲಕ ಅಲ್ಲಿಂದ ಪರಾರಿಯಾಗಿದ್ದ. ಆದರೆ, ಮಗುಚಿಬಿದ್ದ ಜೀಪಿನಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕರುಗಳನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಅದಾಗಲೇ 18 ಕರುಗಳು ಸಾವನ್ನಪ್ಪಿದ್ದವು. ಉಳಿದ ಕರುಗಳು ನಿತ್ರಾಣಗೊಂಡಿದ್ದವು. 

ಗೋಹತ್ಯೆ ನಿಷೇಧ ಕಾಯ್ದೆ ಬಳಿಕ ಕರುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗ್ತಿದ್ದಾರೆ ರೈತರು..!

ಕರುಗಳನ್ನು ಸಾಗಿಸುವಾಗ ಅವು ಸದ್ದು ಮಾಡದಂತೆ ಅವುಗಳ ಕಾಲು ಮತ್ತು ಬಾಯನ್ನು ಹಗ್ಗದಿಂದ ಬಿಗಿಯಲಾಗಿತ್ತು. ಇದನ್ನು ಕಂಡ ಗ್ರಾಮಸ್ಥರು ಮಮ್ಮಲ ಮರುಗಿದರು. ನಿಶಕ್ತಗೊಂಡಿದ್ದ ಕರುಗಳ ಹಗ್ಗ ಬಿಚ್ಚಿ ಅವುಗಳಿಗೆ ನೀರು ಕುಡಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿರುವ ಜಿಲ್ಲಾಧಿಕಾರಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ವೇಳೆಗೆ ಅದೇ ಮಾರ್ಗವಾಗಿ ಮನೆಗೆ ಹೋಗುತ್ತಿದ್ದ ಶಾಸಕರಾದ ಲಿಂಗೇಶ್‌ ಆಗಮಿಸಿ ಪರಿಸ್ಥಿತಿಯನ್ನು ನೀಡಿ ಮರುಗಿದರು. ಕರುಗಳ ಕಾಲು ಮತ್ತು ಬಾಯಿಗೆ ಹಗ್ಗ ಕಟ್ಟಿದ್ದನ್ನು ತೀವ್ರವಾಗಿ ಖಂಡಿಸಿದರು. ಒಂದೇ ಜೀಪಿನಲ್ಲಿ 44 ಕರುಗಳನ್ನು ಕೈಕಾಲು ಕಟ್ಟಿಒಂದರ ಮೇಲೊಂದನ್ನು ಹಾಕಿದ್ದರಿಂದಲೂ ಕೆಲವು ಅಪಘಾತಕ್ಕೂ ಮುನ್ನವೇ ಸಾವನ್ನಪ್ಪಿರುವ ಸಾಧ್ಯತೆಗಳಿದೆ. ಇದು ಅಮಾನವೀಯತೆಯ ಪರಾಕಾಷ್ಟೆ ಎಂದು ಘಟನೆಯನ್ನು ಖಂಡಿಸಿದರು. ಮೃತಪಟ್ಟಿದ್ದ ಕರುಗಳ ಪರಣೋತ್ತರ ಪರೀಕ್ಷೆಯ ನಂತರ ಗುರುವಾರ ಹಳೇಬೀಡಿನ ಕೆರೆ ಅಂಗಳದಲ್ಲಿ ಎಲ್ಲವನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಉಳಿದಿರುವ ಕರುಗಳನ್ನು ಗೋಶಾಲೆಗೆ ಕಳುಹಿಸಲಾಯಿತು. 
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು