* ಕರ್ನಾಟಕದಲ್ಲಿ ಮಾತ್ರ ಕಾನೂನು ನಿರ್ಬಂಧ
* ಕರಾವಳಿಯಲ್ಲಿ ಮತ್ತೆ ಹಡಿಲು ಭೂಮಿ ಕೃಷಿ ಅಗತ್ಯ
* ಬ್ರಹ್ಮಾವರ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆ
ಉಡುಪಿ(ಆ.20): ದೇಶದಲ್ಲಿ ಕೃಷಿ ಅರಣ್ಯೀಕರಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶ ಇರುವುದರಿಂದ, ರೈತರು ತಮ್ಮ ಭೂಮಿಯಲ್ಲಿ ಬೆಳೆದ ಮರಗಳನ್ನು ತಾವೇ ಕಡಿಯುವುದಕ್ಕೆ, ಸಾಗಾಟ ಹಾಗೂ ಮಾರಾಟ ಮಾಡುವುದಕ್ಕೆ ಸಾಧ್ಯವಾಗುವಂತೆ ರಾಜ್ಯದಲ್ಲಿ ಅರಣ್ಯ ಇಲಾಖೆಯ ಕಾನೂನು ಸಡಿಲಿಸಲು, ಅರಣ್ಯ ಸಚಿವ ಉಮೇಶ್ ಕತ್ತಿ ಅವರಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಹೇಳಿದ್ದಾರೆ.
ಅವರು ಗುರುವಾರ ಬಿಜೆಪಿಯಿಂದ ನಡೆದ ಜನಾಶೀರ್ವಾದ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದರು. ರೈತರು ತಮ್ಮ ಭೂಮಿಯಲ್ಲಿ ಬೆಳೆದ ಮರಗಳನ್ನು ಕಡಿದು ಮಾರುವುದಕ್ಕೆ ಕರ್ನಾಟಕ ಹೊರತುಪಡಿಸಿ ದೇಶದ ಉಳಿದೆಲ್ಲ ರಾಜ್ಯಗಳಲ್ಲಿ ಅನುಮತಿ ಇದೆ ಎಂದರು.
ಕೃಷಿ ಅರಣ್ಯೀಕರಣ, ಕೋಳಿ, ಜೇನು ಸಾಕಣೆ ಮಾಡಿದ ರೈತರ ಕುಟುಂಬದಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ವರದಿ ಹೇಳುತ್ತಿದೆ. ಆದ್ದರಿಂದ ಇವುಗಳನ್ನು ಪ್ರೋತ್ಸಾಹ ನೀಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಒಂದು ಜಿಲ್ಲೆ ಒಂದು ಬೆಳೆ ಎಂದು ಗುರುತಿಸಲಾಗಿದೆ. ಆದರೆ ಪ್ರತಿ ಜಿಲ್ಲೆಯ ಬೆಳೆಗಾರರು ಪ್ರತ್ಯೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದನ್ನು ಕಾನೂನು ತರುವ ಮೂಲಕ ಬಗೆಹರಿಸಲಾಗುವುದು ಎಂದರು.
ರೈತರಿಗೆ ಅಪಮಾನಿಸಿದ ಸಚಿವೆ ಶೋಭಾ ವಜಾಕ್ಕೆ ಆಗ್ರಹ
ಬ್ರಹ್ಮಾವರ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆ
ದೇಶದಲ್ಲಿ ಸಕ್ಕರೆ ಉತ್ಪಾದನೆ ಬೇಡಿಕೆಗಿಂತ ಹೆಚ್ಚಿದೆ, ಅದರೂ ರಫ್ತಾಗುತ್ತಿಲ್ಲ. ಅಲ್ಲದೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಎಥೆನಾಲ್ ಬಳಕೆಗೆ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ನಷ್ಟದಿಂದ ಸ್ಥಗಿತಗೊಂಡಿರುವ ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರ ಉತ್ಪಾದನೆಗಿಂತ ಕಬ್ಬಿನಿಂದ ಎಥೆನಾಲ್ ಉತ್ಪಾದಿಸುವುದಕ್ಕೆ ಯೋಚಿಸಲಾಗುತ್ತಿದೆ ಎಂದು ಶೋಭಾ ಹೇಳಿದರು.
ಕರಾವಳಿಯಲ್ಲಿ ಮತ್ತೆ ಹಡಿಲು ಭೂಮಿ ಕೃಷಿ ಅಗತ್ಯ
ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ತಮಗೆ ಬೇಕಾದಷ್ಟುಅಕ್ಕಿಯನ್ನು ಇಲ್ಲಿನ ಜನರು ತಾವೇ ಬೆಳೆಯುತ್ತಿದ್ದರು. ಆದರೆ ಇಂದು ಶೇ.95ರಷ್ಟು ಅಕ್ಕಿ ಹೊರಜಿಲ್ಲೆಗಳಿಂದ ತರಿಸಲಾಗುತ್ತಿದೆ. ಇದಕ್ಕೆ ಇಲ್ಲಿನ ಜನರು ಕೃಷಿಯನ್ನು ಬಿಟ್ಟು, ತೋಟ ಮಾಡಿದ್ದು ಕಾರಣ. ಕರಾವಳಿಯಲ್ಲಿ ಮತ್ತೆ ಹಡಿಲುಭೂಮಿಯನ್ನು ಕೃಷಿ ಮಾಡುವ ಮೂಲಕ ಅಕ್ಕಿಯ ವಿಷಯದಲ್ಲಿ ಸ್ವಾಭಿಲಂಬಿಗಳಾಗುವುದಕ್ಕೆ ಅವಕಾಶ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.