Udupi; 16 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ

By Suvarna NewsFirst Published Jun 11, 2022, 4:47 PM IST
Highlights

ಉಡುಪಿಯ ಉದ್ಯಮಿ ಕೆನ್ಯೂಟ್ ಮೋನಿಸ್  ಎಂಬುವವರು ಸುಮಾರು 40 ಪವನ್ ಗಳಷ್ಟಿದ್ದ ಚಿನ್ನಾಭರಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜೂ.11): ಮಾನವೀಯತೆ ಪ್ರಾಮಾಣಿಕತೆಗೆ ಇದು ಕಾಲವಲ್ಲ ಅನ್ನೋ ಮಾತಿದೆ. ರಸ್ತೆಬದಿಯಲ್ಲಿ ಹತ್ತು ರೂಪಾಯಿ ಬಿದ್ದರೆ, ಮುಗುಮ್ಮಾಗಿ ಜನ ಕಿಸೆಗೆ ಹಾಕಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಸುಮಾರು 40 ಪವನ್ ಗಳಷ್ಟಿದ್ದ ಚಿನ್ನಾಭರಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಟಪಾಡಿಯಿಂದ ಶಿರ್ವದತ್ತ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಮಧ್ಯೆ ಮಹಿಳೆಯೊಬ್ಬರ ಬ್ಯಾಗ್   ಬಿದ್ದುಹೋಗಿತ್ತು.  ಬ್ಯಾಗ್ ನಲ್ಲಿ 40 ಪವನ್ ಚಿನ್ನಾಭರಣವಿತ್ತು. ಅನಾಥವಾಗಿ ಬಿದ್ದಿದ್ದ ಬ್ಯಾಗ್‌ನ್ನು ಪೊಲೀಸರಿಗೆ ಒಪ್ಪಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮರೆದ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಶಂಕರಪುರ ನಿವಾಸಿ, ಉದ್ಯಮಿ ಕೆನ್ಯೂಟ್ ಮೋನಿಸ್ ಅವರು ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.  ಮೋನಿಸ್ ಅವರು ಇದೇ ಮಾರ್ಗದಲ್ಲಿ ಬೈಕ್ ಮೂಲಕ ಪ್ರಯಾಣಿಸುತ್ತಿದ್ದರು. ಕಟಪಾಡಿ ಚೊಕ್ಕಾಡಿ ರೈಲ್ವೆ ಸೇತುವೆಯ ಬಳಿ ಮಹಿಳೆಯ ಬ್ಯಾಗ್ ಅನಾಥವಾಗಿ ಬಿದ್ದಿತ್ತು. ಬ್ಯಾಗಿನ ಒಳಗಿದ್ದ ಬ್ರಾಂಡೆಡ್ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ರಸ್ತೆ ನಡುವಲ್ಲೇ ಇದ್ದ ಬ್ಯಾಗನ್ನು ಅನುಮಾನಗೊಂಡು ಎತ್ತಿ ಪರಿಶೀಲಿಸಿದಾಗ ಅದರಲ್ಲಿ ಅಪಾರ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿತ್ತು.

ಕರ್ನಾಟಕದಲ್ಲಿ ಮತ್ತೆ ಆಪರೇಷನ್ ಕಮಲ, ಸುಳಿವು ಕೊಟ್ಟ ಸಚಿವ

ಚಿನ್ನಾಭರಣ ಕಂಡ ನಂತರವೂ ಕೆನ್ಯೂಟ್ ಮೋನೀಸ್ ಮನಪರಿವರ್ತನೆ ಆಗಲಿಲ್ಲ. ವಸ್ತುಗಳನ್ನು ಕಳೆದುಕೊಂಡ ವ್ಯಕ್ತಿಯ ಬಗ್ಗೆ ಅನುಕಂಪ ಗೊಂಡ ಅವರು, ಬ್ಯಾಗನ್ನು ಕಟಪಾಡಿಯ ಉದ್ಯಮಿಯಾದ ವಾಸು ಪೂಜಾರಿ ಅವರ ಬಳಿ ತಂದು ಕೊಟ್ಟರು. ಇವರಿಬ್ಬರು ಗೆಳೆಯರು ಸೇರಿ ಕಟಪಾಡಿಯಲ್ಲಿರುವ ಪೊಲೀಸ್ ಠಾಣೆಗೆ ಚಿನ್ನಾಭರಣ ತಲುಪಿಸಿ ಪ್ರಾಮಾಣಿಕತೆ ಮೆರೆದರು.

ಈ ಚಿನ್ನಾಭರಣ ವು ಶಿರ್ವ ನಿವಾಸಿ ನ ಅನ್ಸಿರಾ ಬಾನು ಎಂಬವರಿಗೆ ಸೇರಿದ್ದು ಅನ್ನೋದು ನಂತರ ಗೊತ್ತಾಗಿದೆ. ಅವರು ಕುಂದಾಪುರದಿಂದ ತನ್ನ ಗಂಡನ ಮನೆಯಿಂದ ತಾಯಿಯ ಮನೆಗೆ ಹೋಗುತ್ತಿದ್ದಾಗ, ಕಟಪಾಡಿಯಿಂದ ಶಿರ್ವಕ್ಕೆ ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಮಾರ್ಗಮಧ್ಯದಲ್ಲಿ ಚಿನ್ನಾಭರಣ ಮತ್ತು ಬಟ್ಟೆಗಳಿದ್ದ ಬ್ಯಾಗ್  ಬಿದ್ದುಹೋಗಿತ್ತು. 

Davanagere: ಮನೆ ಕಟ್ಟಿಸಬೇಕೆಂದಿದ್ದ ಹಣದಲ್ಲಿ ಶಾಲಾ ಕೊಠಡಿ ನಿರ್ಮಿಸಿದ ನೌಕರ

ಬ್ಯಾಗ್ ಕಳೆದುಕೊಂಡ ಮಹಿಳೆ ಮತ್ತೆ ಮರಳಿ ಬಂದು ಕಟಪಾಡಿ ರಿಕ್ಷಾ ಸ್ಟ್ಯಾಂಡ್ ನಲ್ಲಿ ವಿಚಾರಿಸಿದಾಗ ಬ್ಯಾಗ್ ಸಿಕ್ಕಿರುವುದು ಗೊತ್ತಾಗಿದೆ. ಬಳಿಕ ಪೊಲೀಸರನ್ನು ಸಂಪರ್ಕಿಸಿ ಬ್ಯಾಗ್ ಕಳೆದುಕೊಂಡಿರುವ ವಿಷಯವನ್ನು ತಿಳಿಸಿದರು. ಕಾಪು ಪೊಲೀಸರು ಸೂಕ್ತ ವಿಚಾರಣೆ, ಪರಿಶೀಲನೆ ನಡೆಸಿದ ಬಳಿಕ ಮಹಿಳೆಯ ಹೇಳಿಕೆಯನ್ನು ಪಡೆದು ಚಿನ್ನಾಭರಣಗಳನ್ನು ಮರಳಿಸಿದ್ದಾರೆ.

ಈ ಹಿಂದೆ ಹೋಟೆಲ್ ಉದ್ಯಮ ನಡೆಸುತ್ತಿದ್ದ ಕೆನ್ಯೂಟ್ ಮೋನೀಸ್ ಅವರು, ಸದ್ಯ ಬಿಲ್ಡಿಂಗ್ ಮೆಟೀರಿಯಲ್ ನ ಉದ್ಯಮ ನಡೆಸುತ್ತಿದ್ದಾರೆ. ಪರರ ಚಿನ್ನಾಭರಣಕ್ಕೆ ಆಸೆ ಪಡದ ಇವರ ವ್ಯಕ್ತಿತ್ವ ಪೊಲೀಸರ ಸಹಿತ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

click me!