* ಅರಣ್ಯದಲ್ಲಿ ಹಲಸು ಮತ್ತಿತರ ಹಣ್ಣುಗಳನ್ನು ಅಪಾರ ಪ್ರಮಾಣದಲ್ಲಿ ರಾಶಿ ಹಾಕುವ ಯೋಜನೆ
* ವಿಶ್ವ ಪರಿಸರ ದಿನಾಚರಣೆಯಂದು ಕಾಡಾನೆಗಳ ಫುಡ್ ಪ್ಯಾಕೇಜ್ ಯೋಜನೆ ಚಾಲನೆ
* ಮೀಸಲು ಅರಣ್ಯದಲ್ಲಿ ಆಹಾರದ ಕೊರತೆ ಕೂಡ ಇರುವುದು ಕಾಡಾನೆಗಳ ಉಪಟಳಕ್ಕೆ ಕಾರಣ
ಕೀರ್ತನ
ಕುಶಾಲನಗರ(ಜೂ.11): ಕಾಡಿನಿಂದ ನಾಡಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿರುವ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಕುಶಾಲನಗರ ಅರಣ್ಯ ವಲಯದ ಅಧಿಕಾರಿಗಳು ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದ್ದಾರೆ. ಆಹಾರ ಅರಸಿಕೊಂಡು ನಾಡಿಗೆ ಬರುವ ಕಾಡಾನೆಗಳಿಗೆ ಕುಶಾಲನಗರ ಅರಣ್ಯ ವಲಯದ ಆನೆ ಕಾಡು, ಅತ್ತೂರು, ಮೀನುಕೊಲ್ಲಿ ಮುಂತಾದ ಕಡೆ ಮೀಸಲು ಅರಣ್ಯಗಳಲ್ಲಿ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆ ಕಂಡಿರುವ ಸ್ಥಳದ ವ್ಯಾಪ್ತಿ ಗುರುತಿಸಿ ಕಾಡಾನೆಗಳ ಆಹಾರವಾದ ಹಲಸು ಮತ್ತಿತರ ಹಣ್ಣುಗಳನ್ನು ರಾಶಿ ರಾಶಿ ಹಾಕುವ ಯೋಜನೆ ಇದಾಗಿದೆ.
ಕುಶಾಲನಗರ ಸಮೀಪದ ಅತ್ತೂರು ಆನೆಕಾಡು ಮತ್ತು ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ನಡುವೆ ಅಂದಾಜು 75ಕ್ಕೂ ಅಧಿಕ ಕಾಡಾನೆಗಳು ನೆಲೆ ಕಂಡಿದ್ದು, ಈ ಗಜಪಡೆ ಆಹಾರವನ್ನು ಅರಸಿಕೊಂಡು ನಾಡಿಗೆ ಬರುವುದು ನಿರಂತರ ವಾಡಿಕೆ ಆಗಿದೆ.
ಏನಿದು ಯೋಜನೆ?:
ಮೀಸಲು ಅರಣ್ಯದಲ್ಲಿ ಆಹಾರದ ಕೊರತೆ ಕೂಡ ಇರುವುದು ಕಾಡಾನೆಗಳ ಉಪಟಳಕ್ಕೆ ಕಾರಣ ಎನ್ನುವುದನ್ನು ಅರಿತ ಕುಶಾಲನಗರ ಅರಣ್ಯ ವಲಯ ಅಧಿಕಾರಿ ಕೆ.ವಿ. ಶಿವರಾಮ್ ಮತ್ತು ಅಧಿಕಾರಿ ಸಿಬ್ಬಂದಿಗಳ ತಂಡ ಈ ವಿನೂತನ ‘ವೈಲ್ಡ್ ಎಲಿಫೆಂಟ್ ಫುಡ್ ಪ್ಯಾಕೇಜ್’ ಎಂಬ ಕಾರ್ಯಕ್ರಮ ರೂಪಿಸಿದೆ. ಮಾರ್ಗಮಧ್ಯದಲ್ಲಿಯೇ ಹೊಟ್ಟೆತುಂಬಿಸಿಕೊಳ್ಳುವ ಗಜಪಡೆ ನಾಡಿನತ್ತ ಮುಖ ಮಾಡದೆ ವಾಪಸ್ ತಮ್ಮ ನೆಲೆಗೆ ಹೋಗುತ್ತಿರುವುದು ಕಂಡುಬಂದಿದೆ.
ಕೊಡಗು: ಕಾಡಾನೆ ಹಾವಳಿ ತಪ್ಪಿಸಲು ಆನೆಗಳಿಗೆ ರೇಡಿಯೋ ಕಾಲರ್
ಮೀಸಲು ಅರಣ್ಯದ ಒಳಭಾಗದಲ್ಲಿ ಲೋಡುಗಟ್ಟಲೇ ಹಲಸಿನ ಕಾಯಿಗಳನ್ನು ಸಂಗ್ರಹಿಸಿ ಅದನ್ನು ಕಾಡಾನೆಗಳು ಬರುವ ಮಾರ್ಗದಲ್ಲಿ ಹಾಕುವ ಕಾರ್ಯಕ್ರಮ ಕೆಲವು ದಿನಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಹಲಸಿನ ಕಾಯಿಗಳನ್ನು ಅರಣ್ಯದ ಒಳಭಾಗದಲ್ಲಿರುವ ಕಾಡಾನೆಗಳು ಬಂದು ತಿನ್ನುತ್ತಿರುವ ಮಾಹಿತಿಗಳು ಲಭ್ಯವಾಗಿದೆ ಎನ್ನುತ್ತಾರೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ
ಕುಶಾಲನಗರ ವಲಯದ ಅತ್ತೂರು ಆನೆಕಾಡು, ಮೀನು ಕೊಲ್ಲಿ, ದುಬಾರೆ ವ್ಯಾಪ್ತಿಯ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಪಿ. ರಂಜನ್, ಸುಬ್ರಾಯ, ಅನಿಲ್ ಡಿಸೋಜ, ದೇವಯ್ಯ ಮತ್ತು ಸಿಬ್ಬಂದಿಗಳು ತಮ್ಮ ವಿಭಾಗಗಳಲ್ಲಿ ಎಲಿಫೆಂಟ್ ಫುಡ್ ಪ್ಯಾಕೇಜ್ ಒದಗಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಿವರಾಂ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ವಿಶ್ವ ಪರಿಸರ ದಿನಾಚರಣೆಯಂದು ಕಾಡಾನೆಗಳ ಫುಡ್ ಪ್ಯಾಕೇಜ್ ಯೋಜನೆ ಚಾಲನೆಗೊಂಡಿದೆ.
ಮೀಸಲು ಅರಣ್ಯದ ಒಳಭಾಗದಲ್ಲಿ ಲೋಡುಗಟ್ಟಲೇ ಹಲಸಿನ ಕಾಯಿಗಳನ್ನು ಸಂಗ್ರಹಿಸಿ ಅದನ್ನು ಕಾಡಾನೆಗಳು ಬರುವ ಮಾರ್ಗದಲ್ಲಿ ಹಾಕುವ ಕಾರ್ಯಕ್ರಮ ಕೆಲವು ದಿನಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಹಲಸಿನ ಕಾಯಿಗಳನ್ನು ಅರಣ್ಯದ ಒಳಭಾಗದಲ್ಲಿರುವ ಕಾಡಾನೆಗಳು ಬಂದು ತಿನ್ನುತ್ತಿರುವ ಮಾಹಿತಿಗಳು ಲಭ್ಯವಾಗಿದೆ ಅಂತ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ ತಿಳಿಸಿದ್ದಾರೆ.