ಉಡುಪಿ ಮಲ್ಪೆ ಶಿಪ್‌ಯಾರ್ಡ್‌ನಿಂದ ನಾರ್ವೆಗೆ 8 ಕಾರ್ಗೋ ಹಡಗುಗಳ ನಿರ್ಮಾಣಕ್ಕೆ 1100 ಕೋಟಿ ರು.ಗಳ ಒಪ್ಪಂದ

By Kannadaprabha News  |  First Published Jul 2, 2024, 5:03 PM IST

ಮಲ್ಪೆಯಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಮತ್ತು ನಾರ್ವೆಯ ನೌಕಾಸಮೂಹ ಸಂಸ್ಥೆ ವಿಲ್ಸನ್ ಎಎಸ್‌ಎ ನಡುವೆ 8 ಕಾರ್ಗೋ ಹಡಗುಗಳ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.


 ಉಡುಪಿ (ಜು.1): ಇಲ್ಲಿನ ಮಲ್ಪೆಯಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ (ಯುಸಿಎಸ್‌ಎಲ್) ಮತ್ತು ನಾರ್ವೆಯ ನೌಕಾಸಮೂಹ ಸಂಸ್ಥೆ ವಿಲ್ಸನ್ ಎಎಸ್‌ಎ ನಡುವೆ 8 ಕಾರ್ಗೋ ಹಡಗುಗಳ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ವಿಲ್ಸನ್ ಎಎಸ್‌ಎ ಸಂಸ್ಥೆಗೆ ಯುಸಿಎಸ್‌ಎಲ್ ಈಗಾಗಲೇ 3800 ಟಿಡಿಡಬ್ಲ್ಯು ಸಾಮರ್ಥ್ಯದ ಒಣ ಸರಕು ಸಾಗಾಟ (ಡ್ರೈ ಕಾರ್ಗೋ)ದ 6 ಹಡಗುಗಳ ವಿನ್ಯಾಸ ಮತ್ತು ನಿರ್ಮಾಣದ ಒಪ್ಪಂದಕ್ಕೆ 2023ರಲ್ಲಿ ಸಹಿ ಮಾಡಿದೆ. ಅದರ ಮುಂದುವರಿದ ಭಾಗವಾಗಿ ಈಗ 6300 ಟಿಡಿಡಬ್ಲ್ಯು ಸಾಮರ್ಥ್ಯದ ಡ್ರೈ ಕಾರ್ಗೋ 8 ಹಡಗುಗಳನ್ನು ವಿನ್ಯಾಸ, ನಿರ್ಮಾಣಗೊಳಿಸಿ, 2028ರ ಸೆಪ್ಟಂಬರ್‌ನೊಳಗೆ ಹಸ್ತಾಂತರಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.

Tap to resize

Latest Videos

undefined

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಳೆಯ ನೆರೆ, ಮುಖ್ಯದ್ವಾರವನ್ನೇ ಬಂದ್‌ ಮಾಡಿದ ಗ್ರಾಮಸ್ಥರು!

ಈ ಹಡಗುಗಳು 100 ಮೀ. ಉದ್ದವಿದ್ದು, 6300 ಮೆಟ್ರಿಕ್ ಟನ್‌ ತೂಕವಿರಲಿವೆ. ಈ ಹಡಗುಗಳನ್ನು ನೆದರ್ಲ್ಯಾಂಡ್ಸ್ ನ ಕೊನೊಶಿಪ್ ಇಂಟರ್ನ್ಯಾಷನಲ್ ಸಂಸ್ಥೆ ವಿನ್ಯಾಸಗೊಳಿಸುತ್ತಿದ್ದು, ಯುರೋಪ್ ಕರಾವಳಿಯ ಜಲಮಾರ್ಗದಲ್ಲಿ ಸಾಮಾನ್ಯ ಸರಕು ಸಾಗಣೆಗಾಗಿ ಪರಿಸರಸ್ನೇಹಿ ಡೀಸೆಲ್ ಎಲೆಕ್ಟ್ರಿಕ್ ನಿಂದ ಸಂಚರಿಸಲಿವೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 1,100 ಕೋಟಿ ರು. ಗಳಾಗಿದೆ.

ಮಾಜಿ ಸಂಸದೆ ಸುಮಲತಾ ವಿರೋಧಿಸಿದ್ದ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಸಿದ್ಧತೆ!

ನಾರ್ವೆಯ ಬರ್ಗೆನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ವಿಲ್ಸನ್ ಎಎಸ್‌ಎ ಕಂಪನಿಯು ಯುರೋಪ್‌ನಲ್ಲಿ ಪ್ರಮುಖ ಕಿರು ಸಮುದ್ರ ನೌಕಾಪಡೆ ನಿರ್ವಾಹಕವಾಗಿದೆ. ಈ ಕಂಪೆನಿಯು ಯುರೋಪ್‌ನಾದ್ಯಂತ ಸುಮಾರು 15 ಮಿಲಿಯನ್ ಟನ್ ಒಣ ಸರಕುಗಳನ್ನು ಸಾಗಿಸುತ್ತದೆ. 1500 ರಿಂದ 8500 ಟಿಡಿಡಬ್ಲ್ಯುವರೆಗಿನ ಸುಮಾರು 130 ಹಡಗುಗಳನ್ನು ಹೊಂದಿದೆ.

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ ಸಂಸ್ಥೆಯು ಆತ್ಮನಿರ್ಭರ ಭಾರತ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಅನುಮೋದಿತ ವಿನ್ಯಾಸ ಮತ್ತು ರೂಪುರೇಷೆಗಳಿಗನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

click me!