ಗದಗ: ಮುಂಗಾರು ಪೂರ್ವ ಮಳೆಗೆ ಜಿಲ್ಲೆ​ಯಲ್ಲಿ ಇಬ್ಬರು ಬಲಿ!

By Kannadaprabha NewsFirst Published Apr 8, 2023, 9:51 AM IST
Highlights
  • ಮುಂಗಾರು ಪೂರ್ವ ಮಳೆಗೆ ಜಿಲ್ಲೆ​ಯಲ್ಲಿ ಇಬ್ಬರು ಬಲಿ
  • ಬಿರು​ಗಾಳಿ​ಯೊಂದಿಗೆ ಸುರಿದ ಆಲಿ​ಕಲ್ಲು ಮಳೆ
  • ಕೊತಬಾಳ ಗ್ರಾಮದಲ್ಲಿ ಆಲಿಕಲ್ಲಿನ ಹಿಮಪಾತ

ಗದಗ (ಏ.8) : ಜಿಲ್ಲೆ​ಯ ವಿವಿಧ ಗ್ರಾಮಗಳಲ್ಲಿ ಶುಕ್ರ​ವಾರ ಮಧ್ಯಾಹ್ನದ ವೇಳೆಯಲ್ಲಿ ಸುರಿದ ಮುಂಗಾರು ಪೂರ್ವ ಭಾರೀ ಗಾಳಿ, ಮಳೆಗೆ ಜನ ಜೀವನವೇ ಆಸ್ತವ್ಯಸ್ತವಾಗಿದ್ದು, ಸಿಡಿಲಿನ ಅಬ್ಬರಕ್ಕೆ ಕುರಿಕಾಯಲು ತೆರಳಿದ್ದ ಇಬ್ಬರು ಯುವಕರು ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗದಗ ತಾಲೂ​ಕಿನ ಲಿಂಗ​ದಾ​ಳ​(Lingadal)ದಲ್ಲಿ ಕುರಿ ಮೇಯಿ​ಸಲು ತೆರ​ಳಿದ್ದ ಯುವ​ಕ​ರಿ​ಬ್ಬರು ಸಿಡಿ​ಲಿನ ಹೊಡೆ​ತಕ್ಕೆ ಸ್ಥಳ​ದ​ಲ್ಲಿಯೇ ಮೃತ​ಪಟ್ಟು ಇನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ. ಮೃತ ಯುವಕರನ್ನು ಶರಣಪ್ಪ (16) ಹಾಗೂ ದೇವೇಂದ್ರಪ್ಪ (16) ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಸುನೀಲ ಎನ್ನುವ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Weather Forecast: ಇನ್ನೂ 2 ದಿನ ಗುಡುಗು ಸಹಿತ ಮಳೆ: ಸುವರ್ಣನ್ಯೂಸ್‌ಗೆ ಹವಾಮಾನ ಇಲಾಖೆ ಮುನ್ಸೂಚನೆ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಹೊಸ ಮಳೆಗಳು ಮೇ 14ರಂದು ಪ್ರಾರಂಭವಾಗಲಿದ್ದು, ಅದಕ್ಕೂ ಪೂರ್ವದಲ್ಲಿಯೇ ಶುಕ್ರವಾರ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದ್ದು ಮಳೆಯ ಅಬ್ಬರ ಹಾಗೂ ಗುಡುಗು ಸಿಡಿಲಿನ ಆರ್ಭಟಕ್ಕೆ ಕೆಲ ಗಂಟೆಗಳ ಕಾಲ ಜಿಲ್ಲೆಯ ಜನರು ತೀವ್ರ ಭಯಭೀತರಾಗಿ ಕೈಯಲ್ಲಿ ಜೀವ ಹಿಡಿದುಕೊಂಡು ಕುಳಿತುಕೊಳ್ಳುವಂತಾಗಿತ್ತು.

ಜಿಲ್ಲೆಯ ರೋಣ ತಾಲೂಕಿನ ಕೊತಬಾಳದಲ್ಲಿ ಇತಿಹಾಸದಲ್ಲಿಯೇ ಕಂಡು ಕೇಳರಿಯದ ರೀತಿಯಲ್ಲಿ ಒಮ್ಮೆಲೇ ಆಲಿಕಲ್ಲು ಮಳೆಯಾಗಿದ್ದು, ಮನೆಯ ಚಾವಣಿಯ ಮೇಲೆ ನಡೆದಾಡಲು ಸಾಧ್ಯವಾಗದ ರೀತಿಯಲ್ಲಿ ಆಲಿಕಲ್ಲುಗಳು ಬಿದ್ದಿವೆ. ನಂತರ ಸುರಿದ ರಭಸದ ಮಳೆಗೆ ಚಾವಣಿಯಿಂದ ಅಪಾರ ಪ್ರಮಾಣದ ಆಲಿಕಲ್ಲು ನೀರಿನೊಂದಿಗೆ ಹರಿದು ಬರುವ ದೃಶ್ಯ ಸಹಜವಾಗಿಯೇ ಸಾರ್ವಜನಿಕರಲ್ಲಿ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಕೊತಬಾಳ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆಯೊಂದಿಗೆ ಅಪಾರ ಪ್ರಮಾಣದ ಆಲಿಕಲ್ಲು ಬಿದ್ದ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆಗಳು, ಜಮೀನುಗಳೆಲ್ಲಾ ಬಿಳಿ ಹಾಸಿನಿಂದ ಹೊಚ್ಚಿದ ಸ್ಥಿತಿ ನಿರ್ಮಾಣವಾಗಿತ್ತು.

ಹೊತ್ತಿ ಉರಿದ ಗೂಡಂಗಡಿ

ಶುಕ್ರವಾರ ಮಧ್ಯಾಹ್ನ ಮಳೆಗಿಂತ ಜೋರಾಗಿ ಅಬ್ಬರಿಸಿದ ಸಿಡಿಲಿನ ಆರ್ಭಟಕ್ಕೆ ಜಿಲ್ಲೆಯ ಹೊಳೆಆಲೂರಿನ ನವ ಗ್ರಾಮದ ರಸ್ತೆ ಪಕ್ಕದಲ್ಲಿದ್ದ ಕೃಷ್ಣಾ ಗಂಗಪ್ಪ ಲಮಾಣಿ ಎನ್ನುವವರ ಅಂಗಡಿಗೆ ಸಿಡಿಲು ಬಡಿದಿದ್ದು, ಕ್ಷಣಾರ್ಧದಲ್ಲಿ ಅಂಗಡಿಗೆಲ್ಲಾ ಬೆಂಕಿ ವ್ಯಾಪಿಸಿಕೊಂಡು ಅಂಗಡಿಯಲ್ಲಿ ಕಿರಾಣಿ, ಸ್ಟೇಶನರಿ ವಸ್ತುಗಳು, ಇದರ ಪಕ್ಕದಲ್ಲಿಯೇ ವಾಸಕ್ಕಾಗಿ ನಿರ್ಮಾಣ ಮಾಡಿಕೊಂಡಿದ್ದ ಶೆಡ್‌ನಲ್ಲಿದ್ದ ಬೆಲೆಬಾಳುವ ಸೀರೆ ಸೇರಿದಂತೆ 8 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸಿಡಿಲಿನಿಂದ ಉಂಟಾದ ಬೆಂಕಿಗೆ ಆಹುತಿಯಾಗಿವೆ.

 

8 ರವರೆಗೆ ಹಗುರ ಮಳೆ ಸಾಧ್ಯತೆ : ಕೃಷಿ ಹವಾಮಾನ ಕ್ಷೇತ್ರ ಮಾಹಿತಿ

ಅಲ್ಲಲ್ಲಿ ಮಳೆ

ಮುಂಡ​ರಗಿ ತಾಲೂ​ಕಿನ ವಿವಿ​ಧೆಡೆ ಗುಡುಗು ಮಿಂಚಿನ, ಆರ್ಭ​ಟದ ಜತೆಗೆ ಅಪಾರ ಗಾಳಿ ಮಳೆ ಸುರಿದಿದೆ. ಬಾರಿ ಬಿರು​ಗಾ​ಳಿಗೆ ಜನರು ತತ್ತ​ರಿ​ಸಿದರು. ಗಾಳಿ, ಮಳೆ ಮಾವಿನ ಬೆಳೆ​ಗೆ ಹಾನಿಯುಂಟು ಮಾಡಲಿದೆ ಎಂದು ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಹೊಳೆ​ಆ​ಲೂರ ಹೋಬಳಿ ವ್ಯಾಪ್ತಿ​ಯಲ್ಲಿ ಗುಡುಗು ಮಿಂಚಿ​ನೊಂದಿಗೆ ಮಳೆ​ಯಾಗಿ ಚರಂಡಿ​ಗ​ಳೆಲ್ಲ ತುಂಬಿ ಹರಿದು ಅಲ್ಲಲ್ಲಿ ಬಿರು​ಗಾ​ಳಿಗೆ ವಿದ್ಯುತ್‌ ತಂತಿ ಹರಿದು ವಿದ್ಯುತ್‌ ಸ್ಥಗಿ​ತ​ಗೊಂಡಿದೆ. ಗಜೇಂದ್ರ​ಗಡ ತಾಲೂ​ಕಿ​ನಾ​ದ್ಯಂತ ಮೋಡ ಕವಿದ ವಾತಾ​ವ​ರ​ಣ​ವಿದ್ದು, ಡಂಬ​ಳ​ ಹೋ​ಬಳಿ, ಲಕ್ಷ್ಮೇ​ಶ್ವರ ತಾಲೂ​ಕಿನ ಅಲ್ಲಲ್ಲಿ ಅಲ್ಪ ಮಳೆ​ಯಾ​ಗಿ​ದೆ.

click me!