ವಿರೋಧ ಪಕ್ಷಗಳ ಮೇಲೆ ಅಸ್ತ್ರ ಪ್ರಯೋಗ : ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪ

By Kannadaprabha NewsFirst Published Apr 8, 2023, 9:15 AM IST
Highlights

ವಿರೋಧ ಪಕ್ಷ ನಾಯಕರ ವಿರುದ್ಧ ಚುನಾವಣಾ ಆಯೋಗವು ಬಹಳ ಬೇಗ ಅಸ್ತ್ರ ಪ್ರಯೋಗಿಸುತ್ತಿದ್ದು, ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ತಿಳಿಸಿದರು.

  ಮೈಸೂರು :  ವಿರೋಧ ಪಕ್ಷ ನಾಯಕರ ವಿರುದ್ಧ ಚುನಾವಣಾ ಆಯೋಗವು ಬಹಳ ಬೇಗ ಅಸ್ತ್ರ ಪ್ರಯೋಗಿಸುತ್ತಿದ್ದು, ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ತಿಳಿಸಿದರು.

ನೀತಿ ಸಂಹಿತೆ ಜಾರಿಗೆ ಮುನ್ನವೇ ತಮ್ಮನ್ನು ಸ್ವಾಗತಿಸಿದ ಕಲಾವಿದರಿಗೆ ಅವರು 1 ಸಾವಿರ ನಗದು ನೀಡಿದ್ದು ಮತ್ತು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಪೆದ್ದ ಎಂದು ಹೇಳಿದ ಕಾರಣಕ್ಕೆ ಆಯೋಗದ ವತಿಯಿಂದ ದೂರು ದಾಖಲಿಸಲಾಗಿದೆ. ಇದನ್ನು ನಾವು ವಿರೋಧಿಸದೆ, ಸ್ವಾಗತಿಸುತ್ತೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Latest Videos

ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಒತ್ತಡ ಇರಬಹುದು. ನಟಿ ಶ್ರುತಿ ಅವರು ನಿಮ್ಮ ವಂಶ ಬಿಟ್ಟು ಬೇರೆಯವರ ವಂಶಕ್ಕೆ ಮತ ನೀಡುವುದೆಂದರೆ ಜೆಡಿಎಸ್‌, ಬೇರೆ ದೇಶದವರಿಗೆ ಮತ ನೀಡುವುದು ಕಾಂಗ್ರೆಸ್‌, ಭಾರತೀಯರ ವಂಶ ಉದ್ಧಾರವಾಗಬೇಕಾದರೆ ಬಿಜೆಪಿಗೆ ಮತ ನೀಡುವಂತೆ ಹೇಳಿದ್ದಾರೆ. ಇವರ ವಿರುದ್ಧ ಯಾಕೇ ಪ್ರಕರಣ ದಾಖಲಿಸಿಲ್ಲ ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸಚಿವೆ ಸ್ಮೃತಿ ಇರಾನಿ ವಂಶಸ್ಥರಂತೆ ಶ್ರುತಿ ಮಾತನಾಡಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮನೆಯಲ್ಲಿ ಮತದಾನ ಹಿಂಪಡೆಯಿರಿ:

ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. 80 ವರ್ಷ ಮೇಲ್ಪಟ್ಟವರು, ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಿದೆ. ಕುಟುಂಬದ ಸದಸ್ಯರ ಮೂಲಕ ಮತದಾರರನನ್ನು ಬುಕ್‌ ಮಾಡಿಕೊಳ್ಳಲಾಗಿದ್ದು, ಇದನ್ನು ಹಿಂಪಡೆಯಬೇಕು. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಾಲಕ್ಕೆ ಅರ್ಜಿ ನೀಡಿ ಆಮಿಷ ಒಡ್ಡಲಾಗುತ್ತಿದೆ. ಚುನಾವಣಾ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ ಯಾರಿಗೂ ಸಾಲ ಕೊಡದಂತೆ ನಿರ್ದೇಶನ ಕೊಡಬೇಕು ಎಂದು ಅವರು ಹೇಳಿದರು.

ನಟ ಸುದೀಪ್‌ ಅವರು ನಾನು ಬೊಮ್ಮಾಯಿ ಮಾಮನಿಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಅಲ್ಲದೇ, ತಮಿಳುನಾಡು, ತೆಲಾಂಗಣ ನಟಿ ಮಣಿಯರು ಬೊಮ್ಮಾಯಿ ಮಾಮಾನ ಪರ ಪ್ರಚಾರಕ್ಕೆ ಬರಲಿದ್ದಾರೆ. ಇದರರ್ಥ ಸಿಎಂ ಬಸವರಾಜ ಬೊಮ್ಮಾಯಿ ಅವರ ವರ್ಚಸ್ಸು ಸಂಪೂರ್ಣ ಕುಸಿದಿದೆಯೇ? ತಾರಾ ಪ್ರಚಾರಕರೂ ಬಂದರೂ ಶಿಗ್ಗಾವಿಯಲ್ಲಿ ಬೊಮ್ಮಾಯಿ ಸೋಲಲಿದ್ದಾರೆ ಎಂದರು.

ನಗರಾಧ್ಯಕ್ಷ ಆರ್‌.ಮೂರ್ತಿ ಅವರು ಸುದ್ದಿಗೋಷ್ಠಿಗೂ ಮುನ್ನ ಮಾಜಿ ಸಂಸದ ದಿ.ಆರ್‌.ಧ್ರುವನಾರಾಯಣ ಅವರ ಪತ್ನಿ ವೀಣಾ ಧ್ರುವನಾರಾಯಣ ಅವರಿಗೆ ಸಂತಾಪ ಸೂಚಿಸಿದರು.

ನಗರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಗಿರೀಶ್‌, ಮಾಧ್ಯಮ ವಕ್ತಾರ ಮಹೇಶ್‌ ಇದ್ದರು.

click me!