
ಕಲಬುರಗಿ: ಛಿದ್ರ ಛಿದ್ರಗೊಂಡಿರುವ ಮನೆ. ಮನೆಯೊಳಗಿನ ವಸ್ತುಗಳು ಮಾತ್ರವಲ್ಲ, ದೇಹಗಳೂ ಸಹ ಛಿದ್ರ ಛಿದ್ರ. ಮುಂಡದಿಂದ ಬೇರ್ಪಟ್ಟು ಛಿದ್ರಗೊಂಡು ಬಿದ್ದಿರುವ ಮುಂಡ. ಈ ಭಯಾನಕ ಸ್ಪೋಟದ ದೃಷ್ಯಗಳು ಕಂಡು ಬಂದಿದ್ದು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ. ಅಂದ ಹಾಗೆ ಇಲ್ಲಿ ಸ್ಪೋಟ ಸಂಭವಿಸಿದ್ದು ಆಕಸ್ಮಿಕವಾಗಿ ಅಲ್ಲ. ಕುಟುಂಬದ ಯಜಮಾನನೇ ಇಲ್ಲಿ ಸೂಸೈಡ್ ಬಾಂಬರ್. ಅಕ್ಷರಶಃ ಭಯೋತ್ಪಾದನಾ ಕೃತ್ಯಕ್ಕೆ ಹೋಲಿಸಬಹುದಾದ ಭಯಾನಕ ಕೃತ್ಯವೊಂದು ಆಳಂದನ ಮಟಕಿ ತಾಂಡಾದಲ್ಲಿಂದು ನಡೆದಿದೆ.
ಹೌದು! ಹೆಂಡತಿಯ ಮೇಲಿನ ಹಗೆತನದಿಂದ ಗಂಡನೇ ತನ್ನ ಮೈಗೆ ಜಿಲೆಟಿನ್ ಸ್ಪೋಟಕ ಕಟ್ಟಿಕೊಂಡು ಹೆಂಡತಿ, ಮಗ, ಮಗಳು ಹಾಗೂ ಅಣ್ಣನ ಹೆಂಡತಿ ಇರುವ ಕೋಣೆಯೊಳಗೆ ಹೋಗಿ ತನ್ನನ್ನು ತಾನೇ ಸ್ಪೋಟಿಸಿಕೊಂಡಿದ್ದಾನೆ. ಪರಿಣಾಮ ತಾನೂ ಸಾವಿಗೀಡಾಗಿ ತನ್ನ 16 ವರ್ಷದ ಮಗಳನ್ನೂ ಬಲಿ ಪಡೆದಿದ್ದಾನೆ. ಅಷ್ಟೇ ಅಲ್ಲ ಘಟನೆಯಲ್ಲಿ ಆತನ ಹೆಂಡತಿ, ಮಗ, ಅಣ್ಣನ ಹೆಂಡತಿ ಸಹಿತ ನಾಲ್ಬರು ತೀವ್ರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮಟಕಿ ತಾಂಡಾ ನಿವಾಸಿ 50 ವರ್ಷದ ಶೇವಾಲಾಲ್ ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ. ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಾವಿ ತೋಡುವ ಬ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದ ಶೇವಾಲಾಲ್, ತನ್ನ ಪತ್ನಿ ಸವಿತಾಳ ಶೀಲದ ಮೇಲೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ. ಪತ್ನಿ ಹಾಗೂ ಮಕ್ಕಳು ಪುಣೆಯಲ್ಲಿದ್ದರು. ವಾರದ ಹಿಂದಷ್ಟೇ ಪತ್ನಿ ಮಟಕಿ ತಾಂಡಾಗೆ ಬಂದಿದ್ದ ವಿಚಾರ ತಿಳಿದು ಶೇವಾಲಾಲ್ ಕೂಡ ನಿನ್ನೆಯಷ್ಟೇ ಊರಿಗೆ ಬಂದಿದ್ದ. ನಿನ್ನೆ ಹೆಂಡತಿಯೊಂದಿಗೆ ಜಗಳ ಮಾಡಿದ್ದ. ಮಕ್ಕಳೂ ಸಹ ತಾಯಿಗೆ ಸಪೋರ್ಟ ಮಾಡಿದ್ದ ಕಾರಣ ಎಲ್ಲರನ್ನೂ ಒಂದೇ ಬಾರಿಗೆ ಬಲಿ ಪಡೆಯುವ ದುರುದ್ದೇಶದಿಂದ ಈ ಭಯಾನಕ ಪ್ಲಾನ್ ಮಾಡಿಕೊಂಡಿದ್ದಾನೆ.
ಅದರಂತೆ ಇಂದು ಬೆಳಿಗ್ಗೆ 9 ಗಂಟೆಗೆ ಮನೆಗೆ ಎಂಟ್ರಿ ಕೊಟ್ಟ ಶೇವಾಲಾಲ್, ಮೈತುಂಬಾ ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಮನೆಯಲ್ಲಿದ್ದ ಪತ್ನಿ, ಮಕ್ಕಳು ಹಾಗೂ ಅಣ್ಣನ ಹೆಂಡತಿಯ ಎದುರೇ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಶೇವಾಲಾಲ್ ದೇಹವೇ ಛಿದ್ರ ಛಿದ್ರಗೊಂಡಿದ್ದು, ಆತನ ಮುಖ ಹಾಗೂ ಕತ್ತಿನ ಭಾಗ ದೇಹದಿಂದ ಬೇರ್ಪಟ್ಟು ಬಿದ್ದಿದೆ.
ಘಟನೆಯಲ್ಲಿ ಶೇವಾಲಾಲ್ ಹಾಗೂ ಆತನ 16 ವರ್ಷದ ಮಗಳು ವೀರಾಬಾಯಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನು ಶೇವಾಲಾಲ್ ಪತ್ನಿ ಸವಿತಾ, ಮಗ ಹಾಗೂ ಅಣ್ಣನ ಹೆಂಡತಿ ಸೇರಿದಂತೆ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು, ಕಲಬುರಗಿಯ ಟ್ರಾಮಾ ಕೇರನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸ್ಫೋಟದ ರಭಸಕ್ಕೆ ಇಡೀ ಮನೆಯೇ ಧರೆಗುರುಳಿದೆ. ವಿಷಯ ತಿಳಿಯುತ್ತಿದ್ದಂತೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಸ್ಥಳಕ್ಕೆ ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಅನುಮಾನ ಎನ್ನುವ ಪಿಡುಗು ಒಂದು ಇಡೀ ಕುಟುಂಬವನ್ನೇ ನಾಶಮಾಡಿದ್ದು, ಊರನ್ನೇ ಆತಂಕಕ್ಕೆ ತಳ್ಳಿದೆ. ಘಟನೆಗೆ ಸಂಬಂಧಿಸಿದಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ವರದಿ: ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್, ಕಲಬುರಗಿ)