
ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಹಸುಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟು ಸಂಚಾರಕ್ಕೆ ಅಡಚಣೆ ಉಂಟುಮಾಡುವ ಮಾಲೀಕರ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಮಾರತಹಳ್ಳಿಯ ಕಳಾಮಂದಿರ ರಸ್ತೆಯಲ್ಲಿ ಹಸುಗಳಿಂದಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ, ಹಸುಗಳ ಮಾಲೀಕನ ವಿರುದ್ಧ ಏರ್ ಪೋರ್ಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಆಗಸ್ಟ್ 10 ರಂದು ಬೆಳಗ್ಗೆ 10:00 ರಿಂದ 12:00 ಗಂಟೆಯ ಸುಮಾರಿಗೆ ಮಾರತಹಳ್ಳಿಯ ಕಳಾಮಂದಿರ ಸಮೀಪದ ಹೊರವರ್ತುಲ ರಸ್ತೆಯಲ್ಲಿ (ORR) ಸುಮಾರು 9 ರಿಂದ 10 ಹಸುಗಳು ರಸ್ತೆಯ ಮಧ್ಯೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಭಾರೀ ಅಡಚಣೆಯುಂಟಾಗಿತ್ತು. ಕರ್ತವ್ಯದಲ್ಲಿದ್ದ ಹೆಚ್.ಎ.ಎಲ್ ಏರ್ ಪೋರ್ಟ್ ಸಂಚಾರ ಠಾಣೆಯ ಪೊಲೀಸ್ ಅಧಿಕಾರಿ ನಾಗೇಂದ್ರ ಎನ್. ಅವರು ಇದನ್ನು ಗಮನಿಸಿ ಕ್ರಮ ಕೈಗೊಂಡಿದ್ದಾರೆ.
ರಸ್ತೆಯಲ್ಲಿ ಹಸುಗಳನ್ನು ಬಿಟ್ಟು ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಹಸುಗಳ ಮಾಲೀಕ ಸಂತೋಷ್ ಇ. (ಬಿನ್ ಈರಪ್ಪ) ಎಂಬುವವರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸಂತೋಷ್ ಅವರು ಅಶ್ವತ್ಥನಗರದ ನಿವಾಸಿಯಾಗಿದ್ದು, ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 285 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿರ್ಲಕ್ಷ್ಯತನದಿಂದ ಹಸುಗಳನ್ನು ರಸ್ತೆಗೆ ಬಿಟ್ಟಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಎಫ್‌ಐಆರ್ ಇತರ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ನೀಡಿದಂತಿದೆ.