ದೋಣಿ ಮಗುಚಿ 6 ಮಂದಿ ಕಾಣೆ : ಇಬ್ಬರ ಮೃತ​ದೇಹ ಪತ್ತೆ

Kannadaprabha News   | Asianet News
Published : Dec 02, 2020, 07:25 AM IST
ದೋಣಿ ಮಗುಚಿ 6 ಮಂದಿ ಕಾಣೆ : ಇಬ್ಬರ ಮೃತ​ದೇಹ ಪತ್ತೆ

ಸಾರಾಂಶ

ದೋಣಿ ಮಗುಚಿ ಇಬ್ಬರು ಮೀನುಗಾರರು ಸಾವಿಗೀಡಾಗಿದ್ದು,6 ಮಂದಿ ನಾಪತ್ತೆಯಾಗಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ದುರಮತ ನಡೆದಿದೆ. 

ಉಳ್ಳಾ​ಲ/​ಮಂಗ​ಳೂ​ರು (ಡಿ.02) :  ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್‌ ಬೋಟ್‌ ಮಗುಚಿ ನಾಲ್ಕು ಮಂದಿ ನಾಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಉಳ್ಳಾಲದ ಅರಬ್ಬಿ ಸಮುದ್ರತೀರದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.

ಘಟನೆಯಲ್ಲಿ 19 ಮಂದಿ ಮೀನುಗಾರರು ಡೆಂಗೀ( ಸಣ್ಣ ದೋಣಿ) ಮೂಲಕ ರಕ್ಷಿಸಲ್ಪಟ್ಟಿದ್ದಾರೆ. ಬೊಕ್ಕಪಟ್ನ ನಿವಾಸಿಗಳಾಗಿರುವ ಪಾಂಡುರಂಗ ಸುವರ್ಣ(58) ಮತ್ತು ಪ್ರೀತಂ(25) ಮೃತರು. ಝಿಯಾವುಲ್ಲ (32), ಅನ್ಸಾರ್‌ (31), ಹಸೈನಾರ್‌ (25), ಚಿಂತನ್‌ (21) ನಾಪತ್ತೆಯಾಗಿದ್ದಾರೆ.

ದೋಣಿ ಹುಟ್ಟು ಹಾಕಿ ಮಕ್ಕಳು, ಗರ್ಭಿಣಿಯರ ಆರೈಕೆ; ಅಂಗನವಾಡಿ ಕಾರ್ಯಕರ್ತೆಗೆ ಸಲಾಂ! ...

ಬೋಳಾರದ ಉದ್ಯಮಿಯೋರ್ವರಿಗೆ ಸೇರಿದ ಶ್ರೀರಕ್ಷಾ ಬೋಟ್‌ನಲ್ಲಿ ಸೋಮವಾರ ನಸುಕಿನ ಜಾವ 5ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 25 ಮಂದಿ ತೆರಳಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಮಂಗಳವಾರ ಮುಂಜಾನೆ ವಾಪಸ್‌ ಧಕ್ಕೆ ತಲುಪುವುದಿತ್ತು. ಆದರೆ ಸಮಯ ಕಳೆದರೂ ಬೋಟ್‌ ವಾಪಸಾಗದ ಹಿನ್ನೆಲೆಯಲ್ಲಿ ಬೋಟ್‌ ಮಾಲೀಕರು ವಯರ್‌ ಲೆಸ್‌ ಮೂಲಕ ದೋಣಿಯಲ್ಲಿದ್ದವರನ್ನು ಸಂಪರ್ಕಿಸಲು ಯತ್ನಿಸಿದಾಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಇದರಿಂದ ಸಂಶಯಗೊಂಡು ಉಳಿದ ಮೀನುಗಾರಿಕಾ ಬೋಟ್‌ನವರನ್ನು ಸಂಪರ್ಕಿಸಿ ಬೋಟ್‌ ಹುಡುಕುವಂತೆ ತಿಳಿಸಿದ್ದಾರೆ.

ಅದರಂತೆ ಇತರೆ ಮೀನುಗಾರಿಕಾ ಬೋಟ್‌ನವರು ಆಳಸಮುದ್ರದಲ್ಲಿ ಹುಡುಕಾಟ ನಡೆಸಿದಾಗ ಒಂದು ಕಡೆಯಲ್ಲಿ ಖಾಲಿ ಬಲೆ ಪತ್ತೆಯಾಗಿತ್ತು. ಅಲ್ಲಿಂದ ಹಲವು ನಾಟಿಕಲ್‌ ಮೈಲ್‌ ದೂರದಲ್ಲಿ ಡೆಂಗೀ ( ಸಣ್ಣ ದೋಣಿ)ಯಲ್ಲಿ 16 ಮಂದಿ ಕುಳಿತಿರುವುದು ಕಂಡುಬಂದಿತ್ತು. ಕೂಡಲೇ ಅವರನ್ನು ಇತರೆ ಬೋಟ್‌ನವರು ರಕ್ಷಿಸಿದ್ದಾರೆ. ಈ ವೇಳೆ ಆರು ಮಂದಿ ಬೋಟ್‌ನ ಕ್ಯಾಬಿನ್‌ ಒಳಗಿದ್ದವರು ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.

ಮಂಗ​ಳ​ವಾರ ಅಪ​ರಾ​ಹ್ನ ಮುಳುಗು ತಜ್ಞರು, ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ದೋಣಿಯ ಅವಶೇಷ ಕೂಡ ಸಮುದ್ರದಲ್ಲಿ ಮುಳುಗಿ ಮೇಲ್ಗಡೆ ಕಾಣಿಸುತ್ತಿಲ್ಲ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತ ಮೀನುಗಾರರು ತಿಳಿಸಿದ್ದಾರೆ.

ಸ್ಥಗಿತಗೊಂಡ ಕಾರ್ಯಾಚರಣೆ:  ಸಮುದ್ರದಲ್ಲಿ ಅಲೆಗಳ ಏರಿಳಿತ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತು ಸಂಜೆಯಾದ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಮುಳುಗಿದ ಬೋಟ್‌ ಬಳಿ ನಾಪತ್ತೆಯಾದವರಿಗಾಗಿ ಮುಳುಗು ತಜ್ಞರು ಹುಡುಕಾಟ ನಡೆಸಿದ್ದಾರೆ. ತಣ್ಣೀರುಬಾವಿ ಮುಳುಗು ತಜ್ಞರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮುಳುಗಿದ ಬೋಟ್‌ನಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ನಾಪತ್ತೆಯಾದ ನಾಲ್ವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ.

ಪರಿಹಾರ ಭರವಸೆ : ಬೋಟ್‌ ಮುಳುಗಿ ಸಾವಿಗೀಡಾದವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಜೊತೆ ಮಾತುಕತೆ ನಡೆಸಲಾಗಿದೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸುವಂತೆ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಸಚಿವರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದ್ದು, ತಕ್ಷಣವೇ ಪರಿಹಾರ ಘೋಷಿಸುವಂತೆ ಮನವಿ ಮಾಡಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು