* ಕೇಬಲ್ ದುರಸ್ತಿ ಕಾಮಗಾರಿ
* ಸರ್ವೀಸ್ ರಸ್ತೆಗಳಲ್ಲಿ ಕಿ.ಮೀ.ಗಟ್ಟಲೇ ಸಂಚಾರ ದಟ್ಟಣೆ
* ವಾಹನ ಸವಾರರ ಪರದಾಟ
ಬೆಂಗಳೂರು(ಡಿ.26): ಕೇಬಲ್ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ನಿನ್ನೆ(ಶನಿವಾರ)ಯಿಂದ ಒಂದು ವಾರ ಕಾಲ ರಾಷ್ಟ್ರೀಯ ಹೆದ್ದಾರಿ-4 ಪೀಣ್ಯ ಎಲೆವೇಟೆಡ್ ಹೈ ವೇ(ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ, ತುಮಕೂರು ರಸ್ತೆ)ಯಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ.
ಪ್ಲಿಲರ್ 102 ಮತ್ತು 103ರ ಮಧ್ಯೆ 8ನೇ ಮೈಲಿಯ ಸ್ವಾತಿ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆಗೆ ಅಳವಡಿಸಿರುವ ಕೇಬಲ್ ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವ ಅಗತ್ಯವಿರುವುದರಿಂದ ಒಂದು ವಾರಗಳ ಕಾಲ ವಾಹನ ಸಂಚಾರ ನಿರ್ಬಂಧಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(National Highway Authority) ಅಧಿಕಾರಿಗಳು ನಗರ ಸಂಚಾರ ಪೊಲೀಸರಿಗೆ(Police) ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಶನಿವಾರದಿಂದಲೇ ಮೇಲ್ಸೇತುವೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿರ್ಬಂಧಿಸಿದ್ದಾರೆ. ಅಂತೆಯೆ ಆ ಮಾರ್ಗದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಿದ್ದಾರೆ.
Ejipura Flyover: ಕಾಮಗಾರಿ ವಿಳಂಬ, ಬಿಬಿಎಂಪಿ ಅಧಿಕಾರಿಗಳಿಗೆ ಸಂಸದ ತೇಜಸ್ವಿ ಸೂರ್ಯ ತರಾಟೆ
ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಿದ ಪರಿಣಾಮ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು. ಬೆಂಗಳೂರು(Bengaluru) ನಗರದಿಂದ ತುಮಕೂರು ರಸ್ತೆ ಮುಖಾಂತರ ನಗರದಿಂದ ಹೊರಹೋಗುವ ಹಾಗೂ ನಗರ ಪ್ರವೇಶಿಸುವ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಕಿ.ಮೀ.ನಷ್ಟು ಉದ್ದಕ್ಕೆ ಸಾಲುಗಟ್ಟಿ ನಿಂತಿದ್ದವು. ಸದರಿ ಮಾರ್ಗದಲ್ಲಿ ಯಶವಂತಪುರ, ಗೊರಗುಂಟೆಪಾಳ್ಯ, 8ನೇ ಮೈಲಿ, ಪೀಣ್ಯ, ದಾಸರಹಳ್ಳಿ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಚಾರ ನಿರ್ವಹಿಸಲು ಪೊಲೀಸರು ಹೈರಣಾದರು.
ಅರ್ಧ ರಾಜ್ಯಕ್ಕೆ ಸಂಪರ್ಕ:
ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಎಲಿವೇಟೆಡ್ ಹೈ ವೇ ಬೆಂಗಳೂರು ನಗರದಿಂದ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಸದಾ ವಾಹನ ಸಂಚಾರ ದಟ್ಟಣೆಯಿಂದ ಕೂಡಿರುವ ಈ ರಸ್ತೆಯ ಮೇಲ್ಸೇತುವೆಯಲ್ಲಿ(Flyover) ಒಂದು ವಾರಗಳ ಕಾಲ ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಚಾರ(Traffic) ತ್ರಾಸದಾಯಕವಾಗಿರಲಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಿದ್ದರೂ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಾಗಲಿದೆ.
ನೈಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಧ್ಯತೆ?
ಪರ್ಯಾಯ ಮಾರ್ಗದಲ್ಲಿ ನಗರದಿಂದ ಹೊರಹೋಗುವ ಹಾಗೂ ನಗರ ಪ್ರವೇಶಿಸುವ ವಾಹನಗಳು ನೈಸ್ ರಸ್ತೆ ಬಳಸಲು ಸೂಚಿಸಿರುವುದರಿಂದ ಇನ್ನು ಒಂದು ವಾರಗಳ ಕಾಲ ನೈಸ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಅಂತೆಯೆ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಿರಿದಾಗಿರುವುದರಿಂದ ಆ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಉಂಟಾಗಿ ಸಮಸ್ಯೆಯಾಗಲಿದೆ. ಇನ್ನು ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ನಗರದಿಂದ ಹೊರ ಜಿಲ್ಲೆಗಳಿಗೆ ಭಾರೀ ಸಂಖ್ಯೆಯಲ್ಲಿ ಜನರು ತೆರಳಿದ್ದಾರೆ. ಭಾನುವಾರ ಸಂಜೆ ಹಾಗೂ ಸೋಮವಾರ ಮುಂಜಾನೆಯಿಂದ ಹೊರ ಜಿಲ್ಲೆಗಳಿಂದ ನಗರಕ್ಕೆ ಬರುವುದರಿಂದ ನೈಸ್ ರಸ್ತೆ ಸೇರಿದಂತೆ ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ.
ಹುಬ್ಬಳ್ಳಿ-ಧಾರವಾಡದ BRTSಗೆ ಕಳಪೆ ಕಾಮಗಾರಿ ಸಂಕಟ!
ಕಬ್ಬಿಣದ ಕೇಬಲ್ ಸಡಿಲ?
ಇಂಟರ್‌ಲಾಕ್ ಸಿಸ್ಟಮ್ ಬಳಸಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಒಂದು ಪಿಲ್ಲರ್‌ನಿಂದ ಮತ್ತೊಂದು ಪಿಲ್ಲರ್ ನಡುವಿನ ಸ್ಲಾಬ್‌ಗಳನ್ನ ಬಿಗಿಗೊಳಿಸಲು ಅಳವಡಿಸುವ ಕಬ್ಬಿಣದ ಕೇಬಲ್‌ಗಳಲ್ಲಿ ಒಂದು ಕೇಬಲ್ ಸಡಿಲಗೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ಮೇಲೆ ಸಂಚಾರ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ
- ತುಮಕೂರು(Tumakuru) ಕಡೆಯಿಂದ ಬೆಂಗಳೂರು ನಗರ ಪ್ರವೇಶಿಸುವ ವಾಹನಗಳು ಮಾದಾವರ ಬಳಿ ಬಲ ತಿರುವು ಪಡೆದು ನೈಸ್ ರಸ್ತೆಯ ಮುಖಾಂತರ ಬೆಂಗಳೂರು ನಗರ ಪ್ರವೇಶಿಸಬೇಕು
- ಬೆಂಗಳೂರು ನಗರದಿಂದ ತುಮಕೂರು ರಸ್ತೆ ಮುಖಾಂತರ ಹೊರಹೋಗುವ ವಾಹನಗಳು ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ರಿಂಗ್ ರಸ್ತೆ ಮುಖಾಂತರ ಸುಮ್ಮನಹಳ್ಳಿ, ಮಾಗಡಿ ರಸ್ತೆ ಕಡೆ ಸಂಚರಿಸಿ ನೈಸ್ ರಸ್ತೆ ಪ್ರವೇಶಿಸಿ ಬೆಂಗಳೂರಿನಿಂದ ಹೊರಗೆ ಸಂಚರಿಸಬೇಕು.