ಜೂನ್ ವೇಳೆಗೆ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಪೂರ್ಣ, ಪ್ರಧಾನಿ ಮೋದಿಯಿಂದ ಉದ್ಘಾಟನೆ: ಸಚಿವ ವಿ. ಸೋಮಣ್ಣ

Gowthami K   | Kannada Prabha
Published : Nov 09, 2026, 09:11 AM IST
V Somanna

ಸಾರಾಂಶ

ಪಾವಗಡ ರೈಲು ನಿಲ್ದಾಣ ಮತ್ತು ರಾಜವಂತಿ ಗೂಡ್ಸ್ ರೈಲ್ವೆ ನಿಲ್ದಾಣದ ಕಾಮಗಾರಿಗಳನ್ನು ಕೇಂದ್ರ ಸಚಿವ ವಿ. ಸೋಮಣ್ಣ ಪರಿಶೀಲಿಸಿದ್ದಾರೆ. ಬಹುದಿನಗಳ ನಿರೀಕ್ಷೆಯ ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯನ್ನು ಜೂನ್ ವೇಳೆಗೆ ಪೂರ್ಣಗೊಳಿಸಿ ಪ್ರಧಾನಿ ಮೋದಿ ಅವರಿಂದ ಉದ್ಘಾಟಿಸಲು ಉದ್ದೇಶಿಸಲಾಗಿದೆ.

ಪಾವಗಡ: ಪಟ್ಟಣದ ರೈಲು ನಿಲ್ದಾಣ ಹಾಗೂ ರಾಜವಂತಿ ಗ್ರಾಮದ ಸಮೀಪದ ಗೂಡ್ಸ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿದರು. ನಿಲ್ದಾಣದ ಕಾಮಗಾರಿ ಕುರಿತಂತೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಶೀಘ್ರ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಮುಂದಿನ 20ವರ್ಷಗಳ ತಂತ್ರಜ್ಞಾನ ಹಾಗೂ ಅಗತ್ಯಗಳಿಗೆ ತಕ್ಕಂತೆ ರೈಲು ನಿಲ್ದಾಣವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿಗೆ ನಾನು ಸಚಿವನಾದ ಮೇಲೆ ವಿಶೇಷ ಗಮನ ಹರಿಸಿ ವೇಗ ನೀಡಿದ್ದೇನೆ. ಬರುವ ಜೂನ್ ತಿಂಗಳ ಹೊತ್ತಿಗೆ ಕಾಮಗಾರಿ ಮುಗಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಾದ್ಯಂತ ಹಲವು ರೈಲ್ವೆ ಯೋಜನೆಗಳು ಪ್ರಗತಿಯಲ್ಲಿದ್ದು, ಅಗತ್ಯ ಅನುದಾನ ಬೇಗನೆ ಮಂಜೂರಾದರೆ ಉಳಿದ ಕಾಮಗಾರಿಗಳನ್ನೂ ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ ಸೋಮಣ್ಣ ಅವರನ್ನು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಶಾಲು-ಹಾರ ಹಾಕಿ ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.

ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ರೈಲ್ವೆ ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಸಿ. ಅಂಜಿನಪ್ಪ, ಎಸ್. ಶಿವಪ್ರಸಾದ್, ಹಿರಿಯ ಮುಖಂಡರಾದ ತಿಮ್ಮಾರೆಡ್ಡಿ, ಎನ್.ಎ. ಈರಣ್ಣ, ಬಲರಾಮರೆಡ್ಡಿ, ಸೋಮಶೇಖರಪ್ಪ, ಸೊಗಡು ವೆಂಕಟೇಶ್, ಜಿ.ಟಿ. ಗಿರೀಶ್, ಪುರುಷೋತ್ತಮರೆಡ್ಡಿ, ಸೂರ್ಯನಾರಾಯಣ, ಬ್ಯಾಡನೂರು ಶಿವು, ರಂಗೇಗೌಡ, ಅರಸೀಕೆರೆ ತಿಪ್ಪೇಸ್ವಾಮಿ, ಅಲ್ಕುಂದರಾಜ್, ಟೈಲರ್ ಚಂದ್ರು, ಟೈಲರ್ ನಾಗರಾಜ್, ತಿಪ್ಪೇಸ್ವಾಮಿ, ಶಿವಕುಮಾರ್ ಸಾಕೇಲ್ ಸೇರಿ ಮೈತ್ರಿಕೂಟದ ಪ್ರಮುಖ ನಾಯಕರು, ಕಾರ್ಯಕರ್ತರು ಮತ್ತು ಸಂಬಂಧಪಟ್ಟ ರೈಲ್ವೆ ಇಲಾಖೆ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

2027ರ ಡಿಸೆಂಬರ್‌ಗೆ ಈ ಭಾಗದಲ್ಲಿ ರೈಲು ಸಂಚಾರ: ಸಚಿವ ವಿ. ಸೋಮಣ್ಣ

ಕೊರಟಗೆರೆ: ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರ 20ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ತಿಳಿಸಿದರು.

ಪಾವಗಡ, ಮಧುಗಿರಿ, ಮಡಕಶಿರಾ ಹಾಗೂ ಕೊರಟಗೆರೆ ತಾಲ್ಲೂಕಿನ ರೈಲ್ವೆ ಕಾಮಗಾರಿ ವೀಕ್ಷಣೆ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಪಾವಗಡ ಹಾಗೂ ಮಧುಗಿರಿ ಭಾಗದ ಮಿಡಗೇಶಿಯಲ್ಲಿ ಇನ್ನೂ ಫ್ಲೋರೈಡ್ ನೀರು ಸಮಸ್ಯೆ ಇದೆ. ಅಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಲಾಗಿದೆ ಎಂದರು. ಮಡಕಶಿರಾ-ಮಧುಗಿರಿ-ಪಾವಗಡ-ಕೊರಟಗೆರೆ ರೈಲ್ವೆ ಮಾರ್ಗದ ಕಾಮಗಾರಿ ವೇಗವಾಗಿ ಸಾಗಿದ್ದು, 2027ರ ಡಿಸೆಂಬರ್ ಒಳಗಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ತುಮಕೂರು-ಬೆಂಗಳೂರು ನಡುವೆ ಮೂರು-ನಾಲ್ಕು ಪಥದ ರೈಲ್ವೆ ಹಳಿ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ. ತುಮಕೂರು-ರಾಯದುರ್ಗ ನಡುವೆ ಎರಡು ಪಥದ ಕಾಮಗಾರಿಗೂ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.

ನಿನ್ನೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ್ದು, ಗುಣಮಟ್ಟದ ಕೆಲಸ ನಡೆಯುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.

ಎಸ್‌ಐಆರ್ ವಿಚಾರದಲ್ಲಿ ಮುಖ್ಯಮಂತ್ರಿಗಳು ಧರಣಿ ಕುಳಿತರೂ ಏನು ಪ್ರಯೋಜನವಾಗಿಲ್ಲ. ಅಧಿಕಾರಿಗಳನ್ನು ನೇಮಿಸಿದವರೇ ಇವರು. ಬದ್ಧತೆ ಮತ್ತು ಇಚ್ಛಾಶಕ್ತಿ ಇಲ್ಲದಿದ್ದರೆ ಸುಳ್ಳನ್ನೇ ನಿಜ ಮಾಡಲು ಹೊರಡುತ್ತಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವ ಹಗರಣವೂ ಸಿಗದಿದ್ದಾಗ ಇಂತಹ ಆರೋಪ ಮಾಡುತ್ತಿದ್ದಾರೆ. ಫಾರಂ 6, 7, 8 ಇರುವುದೇ ಹೆಸರು ಸೇರಿಸಲು ಮತ್ತು ತೆಗೆೆಯಲು. ಹೆಸರು ಸೇರಿಸುವುದು ಸುಲಭ, ತೆಗೆಯುವುದು ಕಷ್ಟ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಹಣ ನೀಡುವ ಕೆಲಸ ಮಾಡುತ್ತದೆ. ಆದರೆ ಜೆಜೆಎಂ ಕಾಮಗಾರಿಯನ್ನು ಕಳಪೆ ಗುಣಮಟ್ಟದಲ್ಲಿ ಮಾಡಿಸುವುದು ರಾಜ್ಯ ಸರ್ಕಾರದ ಕೆಲಸ. ಸಾರ್ವಜನಿಕರ ಕೆಲಸ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸುವುದು ರಾಜ್ಯದ ಜವಾಬ್ದಾರಿ ಎಂದು ಹೇಳಿದರು.

ಡಾ. ಜಿ. ಪರಮೇಶ್ವರ್ ಬಹಳ ಒಳ್ಳೆಯ ಮನುಷ್ಯ. ದೇವರು ಅವರಿಗೆ ಎಲ್ಲವನ್ನೂ ನೀಡಿದ್ದಾರೆ. ನಮ್ಮಿಬ್ಬರ ಸ್ನೇಹಕ್ಕೆ 35 ವರ್ಷಗಳ ಇತಿಹಾಸವಿದೆ. ಮುಂದಿನ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಕಾಮಗಾರಿ ವೀಕ್ಷಣೆಗೆ ಬರುತ್ತೇವೆ ಎಂದರು.

ಕಸಬಾ ಕೊರಟಗೆರೆ ಹೂಲೀಕುಂಟೆ ಬೈಪಾಸ್ ರಸ್ತೆಯಲ್ಲಿ ರೈಲ್ವೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 52/8 ಜಯಣ್ಣ ಬಿನ್ ಲೇಟ್ ಸಿದ್ದಪ್ಪ ಎಂಬುವವರ ಜಮೀನಿನ ಕಾಮಗಾರಿಯಲ್ಲಿ ಮೊದಲ ಅಳತೆಗಿಂತ 10 ಅಡಿ ಹೆಚ್ಚಿಗೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ರೈತ ಸಂಘದ ಮುಖಂಡ ಸಿದ್ದರಾಜು ಆರೋಪ ಮಾಡಿದ್ದು. ಈ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು.

PREV
Read more Articles on
click me!

Recommended Stories

Bengaluru: ಅಣ್ಣನನ್ನೇ ಮೀರಿಸಿದ ರುಬ್ಬುಗುಂಡು ಹಂತಕ, 2018ರಲ್ಲೇ ನಡೆದಿತ್ತು ಡಬಲ್ ಮರ್ಡರ್!
Dharwad: 45 ಎಕರೆ ಭೂಮಿಯಲ್ಲಿ 300 ಟನ್‌ ಈರುಳ್ಳಿ ಬೆಳೆದು 1 ಕೋಟಿ ಸಂಪಾದಿಸಿದ ರೈತ