
ಫಕೃದ್ದೀನ್ ಎಂ.ಎನ್.
ಕನ್ನಡಪ್ರಭ ವಾರ್ತೆ ನವಲಗುಂದ (ಧಾರವಾಡ)
ಕೃಷಿ ಎಂದರೆ ಕೇವಲ ಕಷ್ಟವಲ್ಲ, ಪರಿಶ್ರಮಕ್ಕೆ ತಕ್ಕ ಫಲವೂ ಸಿಗಬಹುದು ಎಂಬುದಕ್ಕೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೋಟಕನಾಳದ ಬಸವರಡ್ಡಿ ನಿಂಗರಡ್ಡಿ ರೂಗಿ ಅವರ ರೈತ ಕುಟುಂಬ 45 ಎಕರೆಯಲ್ಲಿ ಈರುಳ್ಳಿ ಬೆಳೆದು ₹1 ಕೋಟಿಗೆ ಅಧಿಕ ಆದಾಯ ಗಳಿಸಿದೆ.
ತೀವ್ರ ಬರಗಾಲದ ಸವಾಲುಗಳ ನಡುವೆಯೂ ಕೃಷಿಯಲ್ಲಿ ತೊಡಗಿಸಿಕೊಂಡು 3000 ಕ್ವಿಂಟಲ್ (300 ಟನ್) ಈರುಳ್ಳಿ ಮಾರಾಟ ಮಾಡಿದೆ. ರೈತರ ಆತ್ಮವಿಶ್ವಾಸ, ಶ್ರಮ ಮತ್ತು ಕೃಷಿಯ ಮೇಲಿನ ನಂಬಿಕೆಗೆ ಈ ಸಾಧನೆ ಸಾಕ್ಷಿಯಾಗಿದೆ.
ಬಸವರಡ್ಡಿ ರೂಗಿ ಕುಟುಂಬಕ್ಕೆ ಗೋದಿ ಮತ್ತು ಜೋಳದ ಜತೆಗೆ ಈರುಳ್ಳಿ ಬೆಳೆ ಪ್ರಮುಖ ಜೀವನೋಪಾಯ. ಆದರೆ, ಅವರ ಕಾರ್ಯ ಸುಲಭವಾಗಿರಲಿಲ್ಲ. ಕಳೆದ ವರ್ಷವೂ ಅವರು 45 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಆಗ ಭಾರೀ ಮಳೆಯಿಂದ ಬೆಳೆ ಜಲಾವೃತವಾಯಿತು. ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಭಾರಿ ನಷ್ಟ ಅನುಭವಿಸಿದರು. ನಿರಾಶೆಗೊಳ್ಳುವ ಪರಿಸ್ಥಿತಿಯಲ್ಲಿಯೂ ಈ ಕುಟುಂಬ ಧೈರ್ಯ ಕಳೆದುಕೊಳ್ಳಲಿಲ್ಲ. ಅದೇ ಭೂಮಿಯಲ್ಲಿ ಮತ್ತೆ ಈರುಳ್ಳಿ ಬೆಳೆಯಲು ನಿರ್ಧರಿಸಿತ್ತು. ಈ ಬಾರಿ ಪ್ರಕೃತಿ ಅವರ ಪರವಾಗಿತ್ತು.
ಮಳೆ ಸಮಯಕ್ಕೆ ಸರಿಯಾಗಿ ಬಂದು ಬೆಳೆ ಚೆನ್ನಾಗಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿತು. ಇಲ್ಲಿಯವರೆಗೆ ಅವರು ಸುಮಾರು 3000 ಕ್ವಿಂಟಲ್ ಈರುಳ್ಳಿಯನ್ನು ಹುಬ್ಬಳ್ಳಿ ಕೃಷಿ ಮಾರುಕಟ್ಟೆಗೆ ತಂದು ಕ್ವಿಂಟಲ್ಗೆ ₹4500ರಿಂದ ₹6100ವರೆಗೂ ಮಾರಾಟ ಮಾಡಿದ್ದಾರೆ. ಇದರಿಂದ ₹1 ಕೋಟಿಗೂ ಹೆಚ್ಚು ಆದಾಯ ಗಳಿಸಿದ್ದಾರೆ. ಇನ್ನೂ 1500 ಚೀಲ ಈರುಳ್ಳಿ ಈಗಾಗಲೇ ಮಾರಾಟಕ್ಕೆ ಸಿದ್ಧವಾಗಿದ್ದು, ಜಮೀನಿನಲ್ಲಿ ಕೊಯ್ಲು ಕಾರ್ಯ ಇನ್ನೂ ಅಂತಿಮ ಹಂತದಲ್ಲಿದೆ. ಹೊಲಗಳಲ್ಲಿ ಇನ್ನೂ ಬೆಳೆ ಉಳಿದಿರುವುದರಿಂದ ಮುಂದಿನ ದಿನಗಳಲ್ಲಿ ಆದಾಯ ಮತ್ತಷ್ಟು ಹೆಚ್ಚಾಗಬಹುದು ಎಂಬುದು ಅವರ ನಂಬಿಕೆಯಾಗಿದೆ.
ಈ ಯಶಸ್ಸು ಕೇವಲ ಅದೃಷ್ಟವಲ್ಲ. ನಿರಂತರ ಪರಿಶ್ರಮ, ಸರಿಯಾದ ಯೋಜನೆ ಮತ್ತು ನಷ್ಟದಿಂದ ಪಾಠ ಕಲಿತು ಮುಂದುವರಿದ ಮನೋಭಾವ ಇದಕ್ಕೆ ಕಾರಣ. ಕಳೆದ ವರ್ಷದ ನಷ್ಟವನ್ನು ಮರೆತು ಮತ್ತೆ ಅದೇ ಬೆಳೆಯನ್ನು ಆಯ್ಕೆ ಮಾಡಿಕೊಂಡು ಯಶಸ್ವಿಯಾಗಿರುವುದು ಇತರೆ ರೈತರಿಗೆ ಸ್ಫೂರ್ತಿಯಾಗಿದೆ ಎಂದು ನವಲಗುಂದದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕೃಷಿಯಲ್ಲಿ ನಷ್ಟ-ಲಾಭ ಸಹಜ. ಕಳೆದೆರಡು ವರ್ಷ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ನೀರಿಗೆ ಕೊಚ್ಚಿಹೋಗಿ ಕೋಟ್ಯಂತರ ರು. ನಷ್ಟ ಅನುಭವಿಸಿದ್ದೇನೆ. ಎದೆಗುಂದದೆ ಮುಂದುವರಿದರೆ ಒಳ್ಳೆಯ ದಿನಗಳು ಬರುತ್ತವೆ ಎಂಬುದಕ್ಕೆ ಈ ವರ್ಷ ಭೂಮಿ ತಾಯಿ ಫಲ ನೀಡಿದ್ದಾಳೆ ಎಂದು ಈರುಳ್ಳ ಬೆಳೆದ ರೈತ ಬಸವರಡ್ಡಿ ರೂಗಿ ಹೇಳುತ್ತಾರೆ.