ಶೇ. 50 ಪ್ರಯಾಣಿಕರು ಮಾರ್ಗಸೂಚಿಗಿಲ್ಲ ಬೆಲೆ| ಪೂರ್ಣ ಸೀಟುಗಳು ಭರ್ತಿಯಾಗಿದ್ದು ಮಾತ್ರವಲ್ಲ, ಹತ್ತಿಪ್ಪತ್ತು ಪ್ರಯಾಣಿಕರು ಬಸ್‌ಗಳಲ್ಲಿ ನಿಂತುಕೊಂಡೇ ಪ್ರಯಾಣ| 4 ವಾಹನ ವಶ ಸೇರಿ 14 ಪ್ರಕರಣ ದಾಖಲು|
ಹುಬ್ಬಳ್ಳಿ(ಏ.23): ಕೋವಿಡ್ ಮಾರ್ಗಸೂಚಿ ಪ್ರಕಾರ ಸಾರಿಗೆ ವಾಹನಗಳಲ್ಲಿ ಶೇ. 50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಆದರೆ, ಗುರುವಾರ ಈ ನಿಯಮ ಪಾಲಿಸುತ್ತಿರುವ ವಾಹನಗಳು ಕಂಡಿದ್ದೇ ಇಲ್ಲ ಎನ್ನಬಹುದು.
ಹೌದು. ಸರ್ಕಾರಿ ಬಸ್‌ಗಳಲ್ಲಿಯೂ ಕೂಡ ಶೇ.50ರಂತೆ, ಕೇವಲ 26 ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಕಂಡುಬರಲಿಲ್ಲ. ಪೂರ್ಣ ಸೀಟುಗಳು ಭರ್ತಿಯಾಗಿದ್ದು ಮಾತ್ರವಲ್ಲ, ಹತ್ತಿಪ್ಪತ್ತು ಪ್ರಯಾಣಿಕರು ಬಸ್‌ಗಳಲ್ಲಿ ನಿಂತುಕೊಂಡು ಸಾಗುತ್ತಿರುವುದು ಕೂಡ ಮಾಮೂಲಾಗಿತ್ತು. ನಗರ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಬಸ್‌ಗಳಲ್ಲಿಯೂ ಧಾರವಾಳವಾಗಿ ಪ್ರಯಾಣಿಕರನ್ನು ತುಂಬಿಸಿಕೊಂಡು ಕರೆತಂದಿದ್ದು ಕಂಡುಬಂತು.
undefined
ಹಳೆ ಬಸ್ ನಿಲ್ದಾಣ, ಹೊಸೂರು ಬಸ್ ಟರ್ಮಿನಲ್, ಗೋಕುಲದ ಹೊಸ ಬಸ್ ನಿಲ್ದಾಣ ಸೇರಿ ಎಲ್ಲಿಯೂ ಸಾಮಾಜಿಕ ಅಂತರ ಇರಲಿಲ್ಲ. ಕಾಟಾಚಾರಕ್ಕೆ ಒಂದೆಡೆ ಥರ್ಮಲ್ ಸ್ಕ್ರೀನಿಂಗ್ ಮಾತ್ರ ನಡೆಯುತ್ತಿತ್ತು. ಅಲ್ಲಲ್ಲಿ ಹ್ಯಾಂಡ್ ಸ್ಯಾನಿಟೈಸಿಂಗ್‌ಗೆ ವ್ಯವಸ್ಥೆ ಇರಲಿಲ್ಲ.
ಸಾರಿಗೆ ಮುಷ್ಕರ: ನೌಕರರಿಗೆ ಲಾಭಕ್ಕಿಂತ ಹಾನಿಯೇ ಜಾಸ್ತಿ..!
ನಗರದಲ್ಲಿ ಬೇಂದ್ರೆ ನಗರ ಸಾರಿಗೆ, ಟಂಟಂ, ಮ್ಯಾಕ್ಸಿಕ್ಯಾಬ್, ಮೋಟಾರು ಕ್ಯಾಬ್, ಟೆಂಪೋಗಳಲ್ಲಿ ಸಾಮಾನ್ಯ ದಿನಗಳಂತೆ ಎಷ್ಟು ಸಾಧ್ಯವೊ ಅಷ್ಟುಪ್ರಯಾಣಿಕರು ಸಾಗುತ್ತಿದ್ದರು. ಆಟೋರಿಕ್ಷಾಗಳಲ್ಲಿ ಐದಾರು ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿತ್ತು. ಮಹಾನಗರ ಹಾಗೂ ಪೊಲೀಸರು ಕೋವಿಡ್ ಕುರಿತಾಗಿ ಮಾಡುತ್ತಿದ್ದ ಜಾಗೃತಿಗೆ ಕವಡೆ ಕಾಸಿನ ಕಿಮ್ಮತ್ತು ಇರಲಿಲ್ಲ. ಇನ್ನು ಬಸ್ಸಿನ ಒಳಗಡೆಯೂ ಮಾಸ್ಕ್ ಇಲ್ಲದೆ ಪ್ರಯಾಣಿಕರು ಮಾತ್ರವಲ್ಲ, ಬಸ್ ನಿರ್ವಾಹಕರೂ ಇದ್ದುದು ಕಂಡುಬಂತು. ಕಳೆದ ಬಾರಿಯಂತೆ ಬಸ್ ಪ್ರಯಾಣಿಕರ ಮಾಹಿತಿ ಪಡೆದುಕೊಳ್ಳುವ ಪ್ರಯತ್ನವೂ ಇರಲಿಲ್ಲ. ಒಟ್ಟಾರೆ ಬಸ್ ಪ್ರಯಾಣದಲ್ಲಿಯೂ, ಬಸ್ ನಿಲ್ದಾಣದಲ್ಲಿಯೂ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗುತ್ತಿದ್ದುದು ಸ್ಪಷ್ಟವಾಗಿತ್ತು.
4 ವಾಹನ ವಶ ಸೇರಿ 14 ಪ್ರಕರಣ ದಾಖಲು
ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಶೇ. 50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಹಾಗೂ ನಗರ ಸಾರಿಗೆ ಬಸ್‌ಗಳ ಮೇಲೆ ದಾಳಿ ನಡೆಸಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು 4 ವಾಹನಗಳ ವಶಕ್ಕೆ ಪಡೆದಿರುವುದು ಸೇರಿ 14 ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಗರದ ಐಟಿ ಪಾರ್ಕ್ ಸೇರಿ ವಿವಿಧೆಡೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಮಠ ನೇತೃತ್ವದಲ್ಲಿ ಆರ್‌ಟಿಒ ಅಧಿಕಾರಿಗಳು ದಾಳಿ ಕೈಗೊಂಡರು. 1 ಬೇಂದ್ರೆ ನಗರ ಸಾರಿಗೆ 3 ಮ್ಯಾಕ್ಸಿಕ್ಯಾಬ್ ಸೇರಿ 4 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಾಕರಸಾ ಸಂಸ್ಥೆಯ ನಗರ ಸಾರಿಗೆಯ 2 ಬಸ್, ಬೇಂದ್ರೆ ನಗರ ಸಾರಿಗೆ 3, ಬಿಆರ್‌ಟಿಎಸ್ 2, ಪಿಎಸ್‌ವಿ ಬಸ್ 1 ಬಸ್ ಸೇರಿ ಒಟ್ಟು 14 ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.