ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ| ನಿಯಮ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿ, ಮುಖಂಡರು, ಕಾರ್ಯಕರ್ತರು, ರಾಜಕೀಯ ಪ್ರತಿನಿಧಿಗಳ ವಿರುದ್ಧ ವಿಪತ್ತು ಕ್ರಮ| ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಲು ಚುನಾವಣಾ ಪ್ರಚಾರ ನಿಷೇಧ: ಡಿಸಿ ಮಾಲಪಾಟಿ|
ಬಳ್ಳಾರಿ(ಏ.23): ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ವಾರಾಂತ್ಯದ ಸಮಯದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಭ್ಯರ್ಥಿ, ಮುಖಂಡರು, ಕಾರ್ಯಕರ್ತರು, ರಾಜಕೀಯ ಪ್ರತಿನಿಧಿಗಳು ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
ನಿಯಮ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿ, ಮುಖಂಡರು, ಕಾರ್ಯಕರ್ತರು, ರಾಜಕೀಯ ಪ್ರತಿನಿಧಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 51ರಿಂದ 60ರವರೆಗೆ ಅನ್ವಯವಾಗುವ ಐಪಿಸಿ ಸೆಕ್ಷನ್ 188 ರಂತೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ರ ಕಲಂ (4),(5) ಮತ್ತು (10) ರಂತೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯಕ್ಕೆ ಒಂದು ರೂಲ್ಸ್, ಶ್ರೀರಾಮುಲುಗೆ ಪ್ರತ್ಯೇಕ ರೂಲ್ಸ್; ಸಚಿವರಿಂದ ಪದೇ ಪದೇ ರೂಲ್ಸ್ ಬ್ರೇಕ್!
ರಾಜ್ಯಾದ್ಯಂತ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಚುನಾವಣಾ ಆಯೋಗದ ಆದೇಶದಂತೆ ಗರಿಷ್ಟ 5 ಜನ ಬೆಂಬಲಿಗರೊಂದಿಗೆ ಫೇಸ್ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ತೆರಳಿ ಚುನಾವಣೆಯ ಪ್ರಚಾರ ನಡೆಸಲು ಅವಕಾಶ ನೀಡಲಾಗಿತ್ತು. ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವುದರಿಂದ ಕೇವಲ ತುರ್ತು ಸೇವಾ ವಾಹನಗಳನ್ನು ಹೊರತು ಪಡಿಸಿ, ಅನಗತ್ಯ ವಾಹನಗಳು ಓಡಾಡುವುದನ್ನು ಮತ್ತು ಸಾರ್ವಜನಿಕರ ಅನಗತ್ಯ ಓಡಾಟವನ್ನು ನಿಷೇಧಿಸಲಾಗಿದ್ದು, ಅಂಗಡಿ, ಬಾರ್, ಹೋಟೆಲ್ ಇತರೆ ಇತರೆ ಎಲ್ಲಾ ತರಹದ ಅಂಗಡಿಗಳನ್ನು ಮುಚ್ಚುವುದು ಕಡ್ಡಾಯವಾಗಿರುತ್ತದೆ. ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಲು ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.