Asianet Suvarna News Asianet Suvarna News

ಸಾರಿಗೆ ಮುಷ್ಕರ: ನೌಕರರಿಗೆ ಲಾಭಕ್ಕಿಂತ ಹಾನಿಯೇ ಜಾಸ್ತಿ..!

292 ಜನ ಕೆಲಸ ಹೋಯ್ತು, 36 ಜನರಿಗೆ ಅಮಾನತು, 478 ನೌಕರರ ವರ್ಗಾವಣೆ| 15 ದಿನದ ಸಾರಿಗೆ ಮುಷ್ಕರದ ಪರಿಣಾಮವಿದು| ಕೈಕೈ ಹಿಸುಕಿಕೊಳ್ಳುತ್ತಿರುವ ವಜಾಗೊಂಡ ನೌಕರರು| ಕೋರ್ಟ್‌ ಮೊರೆ ಸಾಧ್ಯತೆ| 

Dismissed employees Faces Problems due to KSRTC Strike grg
Author
Bengaluru, First Published Apr 22, 2021, 11:44 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.22): 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಬರೋಬ್ಬರಿ 15 ದಿನ ಮುಷ್ಕರ ನಡೆಸಿದರು. ಕೊನೆಗೂ ನೌಕರರು ತಾವೇ ಮುಷ್ಕರಕ್ಕೆ ಇತಿಶ್ರೀ ಹಾಡಿದ್ದಾರೆ. ವಜಾ, ವರ್ಗಾವಣೆ, ಅಮಾನತು ಶಿಕ್ಷೆ ಅನುಭವಿಸಿದ ಈ ನೌಕರರಿಗೆ ಈ ಮುಷ್ಕರದಿಂದ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚು.

ಇದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ನೌಕರರ ಪರಿಸ್ಥಿತಿ. ಈ ನಿಗಮವು ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ, ಧಾರವಾಡ, ಹುಬ್ಬಳ್ಳಿ-ಧಾರವಾಡ ನಗರ, ಉತ್ತರ ಕನ್ನಡ, ಹಾವೇರಿ, ಗದಗ, ಬಾಗಲಕೋಟೆ ಹೀಗೆ ಆರು ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ದೊಡ್ಡ ನಿಗಮ. ಬರೋಬ್ಬರಿ 23250 ಜನ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಾರೆ. ಅವರಲ್ಲಿ 16500ಕ್ಕೂ ಹೆಚ್ಚು ಜನ ಚಾಲನಾ ಸಿಬ್ಬಂದಿ ಅಂದರೆ ಚಾಲಕ, ನಿರ್ವಾಹಕ, ಚಾಲಕ ಕಂ ನಿರ್ವಾಹಕರಿದ್ದಾರೆ. ಇನ್ನುಳಿದವರು ತಾಂತ್ರಿಕ ಸಿಬ್ಬಂದಿ, ಆಡಳಿತ ವರ್ಗ, ಅಧಿಕಾರಿ ವರ್ಗ ಸೇರಿದ್ದಾರೆ.

ಬಸ್ ಸಂಚಾರ ಆರಂಭ: ಪ್ರಯಾಣಿಕರನ್ನು ಕೂಗಿ ಕೂಗಿ ಕರೆಯುತ್ತಿರುವ ಸಾರಿಗೆ ಸಿಬ್ಬಂದಿ..!

ಅಧಿಕಾರಿ ವರ್ಗ ಹೊರತು ಪಡಿಸಿದರೆ ಬಹುತೇಕ ಎಲ್ಲ ವಿಭಾಗಗಳ ನೌಕರರು ಕೆಲಸಕ್ಕೆ ಗೈರಾಗಿದ್ದರು. ಅಧಿಕಾರಿ ವರ್ಗ ನಿರಂತರ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಮನವಿ ಮಾಡಿದ್ದುಂಟು. ಮನವಿಗೆ ಸ್ಪಂದಿಸದ ಕಾರಣ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದುಂಟು. ಈ ಎಚ್ಚರಿಕೆ ಬಳಿಕ ತಾಂತ್ರಿಕ ಸಿಬ್ಬಂದಿ ಹಾಗೂ ಆಡಳಿತ ವಿಭಾಗದಲ್ಲಿನ ಇತರೆ ಸಿಬ್ಬಂದಿ ಬಹುಪಾಲು ಜನರು ಕೆಲಸಕ್ಕೆ ಹಾಜರಾದರು. ಆದರೆ ಚಾಲನಾ ಸಿಬ್ಬಂದಿ ಮಾತ್ರ ಬಹಳಷ್ಟುಜನ ಗೈರಾದರು. ಹೀಗಾಗಿ ಇದೀಗ ಶಿಕ್ಷೆ ಅನುಭವಿಸಿದವರಲ್ಲಿ ಹೆಚ್ಚಿನ ಪಾಲು ಚಾಲನಾ ಸಿಬ್ಬಂದಿಯೇ ಇದ್ದಾರೆ.

ಏನೇನು ಶಿಕ್ಷೆ?:

ಏ. 7ರಿಂದ ಪ್ರಾರಂಭವಾದ ಮುಷ್ಕರ ಬರೋಬ್ಬರಿ 15 ದಿನ ಅಂದರೆ ಏ. 21ರ ವರೆಗೆ ನಡೆದಿದೆ. ಈ 15 ದಿನಗಳಲ್ಲಿ ಕೆಲವೊಂದಿಷ್ಟು ಜನರನ್ನು ವಜಾಗೊಳಿಸಿದರೆ, ಕೆಲವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಮತ್ತೆ ಕೆಲವರನ್ನು ನಿಗಮದ ವ್ಯಾಪ್ತಿಯಲ್ಲೇ ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. 292 ಜನ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಇದರಲ್ಲಿ 156 ಜನ ಚಾಲಕರಿದ್ದರೆ, 37 ಜನ ನಿರ್ವಾಹಕರು, 85 ಜನ ಚಾಲಕ ಕಂ ನಿರ್ವಾಹಕರು, 10 ಜನ ತಾಂತ್ರಿಕ ಸಿಬ್ಬಂದಿ, ನಾಲ್ವರು ಇತರೆ ಸಿಬ್ಬಂದಿ ಇದ್ದಾರೆ. 292ರಲ್ಲಿ 172 ಜನ ಟ್ರೈನಿಗಳು, 114 ಪರೀಕ್ಷಾರ್ಥ ಸಿಬ್ಬಂದಿ, 6 ಜನ ಕಾಯಂ ಸಿಬ್ಬಂದಿಯಿದ್ದಾರೆ.

ಇನ್ನೂ 478 ಜನ ನೌಕರರನ್ನು ವರ್ಗಾವಣೆ ಮಾಡಿದ್ದರೆ, 36 ಜನ ನೌಕರರನ್ನು ಅಮಾನತು ಮಾಡಲಾಗಿದೆ. ವರ್ಗಾವಣೆ ಮಾಡಿದವರಲ್ಲಿ ಕೆಲವರು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಮತ್ತೆ ಕೆಲವರು ಈಗಾಗಲೇ ಕೆಲಸಕ್ಕೆ ಸೇರಿದ್ದುಂಟು. ಇನ್ನುಳಿದವರು ಇಂದು ಗುರುವಾರ ವರ್ಗದ ಊರಲ್ಲಿ ಕೆಲಸಕ್ಕೆ ಸೇರಲಿದ್ದಾರೆ. ಅಮಾನತುಗೊಂಡವರ ವಿಚಾರಣೆ ಇನ್ಮೇಲೆ ನಡೆಯಬೇಕಿದೆ. ಅಮಾನತು ಆದವರು ಇಂದಲ್ಲ ನಾಳೆ ಇಲಾಖಾ ವಿಚಾರಣೆ ಮುಗಿದ ಮೇಲೆ ಕೆಲಸಕ್ಕೆ ಹಾಜರಾಗಬಹುದು. ಆದರೆ ವಜಾಗೊಂಡವರದ್ದೇ ಇದೀಗ ಸಮಸ್ಯೆ ಎದುರಾಗಿದೆ.

ಸಾರಿಗೆ ಮುಷ್ಕರ ಅಂತ್ಯ: ಹೈಕೋರ್ಟ್ ಸೂಚನೆ ಬೆನ್ನಲ್ಲೇ ಚಳವಳಿ ಸ್ಥಗಿತ!

ಕೋರ್ಟ್‌ ಮೊರೆ ಸಾಧ್ಯತೆ:

ವಜಾಗೊಂಡವರು ಇದೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಮುಖಂಡರ ಮಾತು ಕೇಳಿ ಗೈರಾದೇವು. ಇದೀಗ ಕೆಲಸವನ್ನೇ ಕಳೆದುಕೊಳ್ಳುವಂತಾಗಿದೆ. ಮುಂದೆ ಕುಟುಂಬ ನಿರ್ವಹಿಸುವುದು ಹೇಗೆ? ಎಂಬ ಚಿಂತೆ ಇವರನ್ನು ಕಾಡುತ್ತಿದೆ. ಈಗಾಗಲೇ ಮುಖಂಡರೊಂದಿಗೆ ಮೊಬೈಲ್‌ ಮೂಲಕ ಸಂಪರ್ಕಿಸಿ, ನಿಮ್ಮ ಮಾತು ಕೇಳಿ ನಾವು ಕೆಲಸಕ್ಕೆ ಹೋಗಿಲ್ಲ. ಈಗ ಕೆಲಸ ಕಳೆದುಕೊಂಡಿದ್ದೇವೆ. ನಮಗೆ ದಿಕ್ಕೇ ತೋಚುತ್ತಿಲ್ಲ. ಕೆಲಸ ಮರಳಿ ಕೊಡಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ಅದಕ್ಕೆ ನಿಮ್ಮ ಪರವಾಗಿ ಹೋರಾಡುತ್ತೇವೆ ಎಂದು ಹೇಳುತ್ತಿದ್ದಾರಂತೆ. ಮುಖಂಡರು ನೌಕರರ ಪರವಾಗಿ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ ಎಂಬ ಮಾತು ಸಾರಿಗೆ ನೌಕರರದ್ದು.

ಹಿಂದೆ ಪ್ರತಿಸಲ ಸಾರಿಗೆ ಮುಷ್ಕರ ನಡೆದಾಗಲೂ ನೌಕರರಿಗೆ ಪೂರ್ಣಪ್ರಮಾಣದ ಲಾಭವಾಗದಿದ್ದರೂ ಅಲ್ಪ ಮಟ್ಟಿಗಾದರೂ ಸಮಾಧಾನವಾಗುತ್ತಿತ್ತು. ಆದರೆ ಈಗ ಲಾಭಕ್ಕಿಂತ ಹಾನಿಯಾಗಿದ್ದೇ ಜಾಸ್ತಿಯಾದಂತಾಗಿದೆ ಎಂದು ಸಿಬ್ಬಂದಿ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುವುದಂತೂ ಸತ್ಯ.
 

Follow Us:
Download App:
  • android
  • ios