* ಸಕ್ರಿಯ ಪ್ರಕರಣ ಸಂಖ್ಯೆಯೂ ಏರಿಕೆ
* 56 ಮೈಕ್ರೋ ಕಂಟೈನ್ಮೆಂಟ್
* ಸೋಂಕಿತರ ಸಂಪರ್ಕಿತರ ಪತ್ತೆಗೆ ಬಿಬಿಎಂಪಿ ಕ್ರಮ
ಬೆಂಗಳೂರು(ಡಿ.03): ನಗರದಲ್ಲಿ ಇಬ್ಬರಿಗೆ ಒಮಿಕ್ರೋನ್(Omicron) ಸೋಂಕು ದೃಢಪಟ್ಟಿರುವುದರಿಂದ ಅಷ್ಟೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಐಸೋಲೇಷನ್‌ನಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gaurav Gupta) ತಿಳಿಸಿದ್ದಾರೆ.
ಗುರುವಾರ ಬಿಬಿಎಂಪಿ(BBMP) ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾದ(South Africa) 66 ವರ್ಷದ ವ್ಯಕ್ತಿ ಮತ್ತು ಬೆಂಗಳೂರಿನ(Bengaluru) 46 ವರ್ಷದ ವ್ಯಕ್ತಿಯಲ್ಲಿ ಒಮಿಕ್ರೋನ್ ಪತ್ತೆಯಾಗಿದೆ. ಈ ಪೈಕಿ ದಕ್ಷಿಣ ಆಫ್ರಿಕಾ ಮೂಲಕ ವ್ಯಕ್ತಿಯ 24 ಮಂದಿ ಪ್ರಾಥಮಿಕ ಮತ್ತು 240 ಮಂದಿ ದ್ವಿತೀಯ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆಗೆ(Covid Test) ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಪ್ರತ್ಯೇಕ ನಿಗಾದಲ್ಲಿ ಇರಿಸಿದ್ದೇವೆ.
undefined
ಇನ್ನು ಯಾವುದೇ ವಿದೇಶಿ ಪ್ರಯಾಣದ ಇತಿಹಾಸವಿಲ್ಲದ 46 ವರ್ಷದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ 3 ಮತ್ತು ದ್ವಿತೀಯ ಸಂಪರ್ಕಿತ ಇಬ್ಬರು ಸೇರಿ ಐದು ಜನರಲ್ಲಿ ಕೊರೋನಾ(Coronavirus) ಸೋಂಕು ಪತ್ತೆಯಾಗಿದೆ. ಈ ಐದು ವ್ಯಕ್ತಿಗಳ ಮಾದರಿಗಳನ್ನು ಜಿನೊಮ್ ಸಿಕ್ವೆನ್ಸಿಂಗ್‌ಗೆ ಕಳುಹಿಸಿಕೊಡಲಾಗಿದೆ. ಅಲ್ಲದೆ 13 ಮಂದಿ ಪ್ರಾಥಮಿಕ ಮತ್ತು 205 ಮಂದಿ ದ್ವಿತೀಯ ಸಂಪರ್ಕಿತರನ್ನು ಐಸೊಲೇಷನ್‌ನಲ್ಲಿ ಇಟ್ಟು ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.
Covid 19 Variant: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ದ್ವಿಗುಣ: ಒಮಿಕ್ರೋನ್‌ಗೆ ಯುವಜನತೆಯೇ ಟಾರ್ಗೆಟ್?
ನಿಯಮ ಪಾಲಿಸಿ:
ಸೋಂಕಿತರ ಸಂಪರ್ಕಿತರ ಪತ್ತೆಗೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ನಾಗರಿಕರು ಒಮಿಕ್ರೋನ್ ಬಗ್ಗೆ ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ. ಕಡ್ಡಾಯವಾಗಿ ಮಾಸ್ಕ್(Mask) ಧರಿಸಿ, ಹೆಚ್ಚಾಗಿ ಗುಂಪು ಸೇರದೆ ಸಾಮಾಜಿಕ ಅಂತರ(Social Distance) ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ಒಂದೇ ದಿನ 200+ ಸೋಂಕಿತ ಕೇಸ್
ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಗುರುವಾರ 206 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,56,823ಕ್ಕೆ ಏರಿಕೆಯಾಗಿದೆ. 105 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,35,458ಕ್ಕೆ ಏರಿಕೆಯಾಗಿದೆ. ಇಬ್ಬರ ಸಾವಿನೊಂದಿಗೆ ಈವರೆಗೆ ಮೃತರಾದವರ ಸಂಖ್ಯೆ 16,340ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸದ್ಯ 5024 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.
ಕಳೆದ ಹತ್ತು ದಿನಗಳಿಂದ ಬೆಳ್ಳಂದೂರು ವಾರ್ಡ್‌ನಲ್ಲಿ 6, ದೊಡ್ಡನೆಕ್ಕುಂದಿ, ಹಗದೂರು ವಾರ್ಡ್‌ಗಳಲ್ಲಿ ತಲಾ 4, ರಾಜರಾಜೇಶ್ವರಿ ನಗರ, ಕಾಡುಗೋಡಿ, ವಸಂತಪುರ ಬೇಗೂರು, ವರ್ತೂರು, ಎಚ್‌ಎಸ್‌ಆರ್ ಲೇಔಟ್ ಸಿ.ವಿ.ರಾಮನ್‌ನಗರ ವಾರ್ಡ್‌ಗಳಲ್ಲಿ ತಲಾ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
Covid 19 Variant: ಪೋಷಕರೇ ಹುಷಾರ್: 'ಮಕ್ಕಳ ಮೇಲೆಯೇ Omicron ಹೆಚ್ಚು ಪರಿಣಾಮ'
56 ಮೈಕ್ರೋ ಕಂಟೈನ್ಮೆಂಟ್:
ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಇಳಿಕೆಯಾಗಿದ್ದು, ಇಂದು 56 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಬೊಮ್ಮನಹಳ್ಳಿ 20, ಪೂರ್ವ 10, ದಕ್ಷಿಣ ವಲಯ 10, ಯಲಹಂಕ 7, ಪಶ್ಚಿಮ 6, ಮಹದೇವಪುರ 3 ಮೈಕ್ರೋ ಕಂಟೈನ್ಮೆಂಟ್‌ಗಳಿದ್ದು, ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಲಯ ಮೈಕ್ರೋ ಕಂಟೈನ್ಮೆಂಟ್ ಮುಕ್ತವಾಗಿವೆ.
61 ಸಾವಿರ ಮಂದಿಗೆ ಲಸಿಕೆ
ಕೊರೋನಾ ಹೊಸ ತಳಿ ಒಮಿಕ್ರೋನ್ ಪತ್ತೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದ್ದು, ಗುರುವಾರ ಒಂದೇ ದಿನ 61,081 ಮಂದಿ ಲಸಿಕೆ(Vaccine) ಪಡೆದುಕೊಂಡಿದ್ದಾರೆ.
ಕಳೆದೊಂದು ವಾರದಿಂದ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳ ಸಂಖ್ಯೆಯನ್ನೂ ಕೂಡ ಬಿಬಿಎಂಪಿ ಹೆಚ್ಚಿಸಿದೆ. ಸರ್ಕಾರಿ ಆಸ್ಪತ್ರೆಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಬಸ್-ರೈಲ್ವೆ ನಿಲ್ದಾಣ, ಜನ ಸಂದಣಿ ಇರುವ ಸಾರ್ವಜನಿಕ ಜಾಗಗಳಲ್ಲಿಯೂ ಲಸಿಕಾ ಕೇಂದ್ರ ತೆರೆಯಲಾಗಿದೆ.
399 ಸರ್ಕಾರಿ ಮತ್ತು 164 ಖಾಸಗಿ ಲಸಿಕಾ ಕೇಂದ್ರಗಳು ಸೇರಿ 563 ಲಸಿಕಾ ಕೇಂದ್ರಗಳಲ್ಲಿ 61,081 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1,41,59,937 ಡೋಸ್ ಲಸಿಕೆ ನೀಡಲಾಗಿದ್ದು, 81,29,118 ಮಂದಿ ಮೊದಲ ಮತ್ತು 60,30,819 ಜನರು ದ್ವಿತೀಯ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಈ ನಡುವೆ ಮೊದಲ ಲಸಿಕೆ ಪಡೆದು ಎರಡನೇ ಡೋಸ್ ಪಡೆಯದವರ ಮಾಹಿತಿ ಪಡೆಯಲು ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಲಸಿಕೆ ಪಡೆಯುವಂತೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸುವುದರ ಜೊತೆಗೆ ಫೋನ್ ಮಾಡಿ ಲಸಿಕೆ ಪಡೆಯಲು ಮನವೊಲಿಸುವ ಕಾರ್ಯ ನಡೆಯುತ್ತಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.