ರಾಯಬಾಗ ಪಟ್ಟಣದಲ್ಲಿ ಮೀನುಗಾರಿಕೆ ಇಲಾಖೆಗೆ ಸೇರಿದ್ದ ಸರ್ಕಾರಿ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಪರಭಾರೆ
ಬೆಳಗಾವಿ(ಆ.04): ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಮೀನುಗಾರಿಕೆ ಇಲಾಖೆಗೆ ಸೇರಿದ್ದ ಸರ್ಕಾರಿ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯ ಹೆಸರಿಗೆ ಪರಭಾರೆ ಮಾಡಿದ್ದ ರಾಯಬಾಗ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೇರಿದಂತೆ ಒಟ್ಟು ಮೂರು ಜನರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ರಾಯಬಾಗ ಪಪಂ ಮುಖ್ಯಾಧಿಕಾರಿ ಸಂಜೀವ್ ಮಾಂಗ, ಅಂದಿನ ಕಂದಾಯ ನಿರೀಕ್ಷಕ ಬಿ.ಲಕ್ಷ್ಮೇಶ ಹಾಗೂ ಕರವಸೂಲಿಗಾರನಾಗಿದ್ದ ವಿ.ಆರ್.ಚಲವಾದಿ ಅವರನ್ನು ಅಮಾನುಗೊಳಿಸಿ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರ ಹಾಗೂ ನಿರ್ದೇಶಕಿ ಎಂ.ಎಸ್.ಅರ್ಚನಾ ಅವರು ಆದೇಶ ಹೊರಡಿಸಿದ್ದಾರೆ. ಲಕ್ಷಾಂತರ ರು. ಬೆಲೆ ಬಾಳುವ ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ ಕುರಿತು ಕನ್ನಡಪ್ರಭ ಸತತವಾಗಿ ವಿಸ್ತೃತ ವರದಿಗಳನ್ನು ಪ್ರಕಟಿಸಿತ್ತು. ಈ ವರದಿಗಳಿಂದ ಎಚ್ಚೆತ್ತ ಅಧಿಕಾರಿಗಳ ಗಮನವನ್ನು ಸೆಳೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚನೆ ನೀಡಿದ್ದರು.
ಸಿದ್ದರಾಮೋತ್ಸವ ಬೆನ್ನಲ್ಲೇ ಬಿಜೆಪಿ ಪ್ರಭಾವಿ ಲಿಂಗಾಯತ ನಾಯಕನ ಜನ್ಮದಿನೋತ್ಸವಕ್ಕೆ ಸಿದ್ಧತೆ
ಈ ಹಿನ್ನೆಲೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ.ಈಶ್ವರ ಉಳ್ಳಾಗಡ್ಡಿ ಅವರು ತನಿಖೆ ನಡೆಸಿದ ಸಮಯದಲ್ಲಿ ರಾಯಬಾಗ ಪಪಂ ವ್ಯಾಪ್ತಿಯ ಮೀನುಗಾರಿಕೆ ಕಚೇರಿ ನಿವೇಶನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪರಭಾರೆ ಮಾಡುವುದಕ್ಕಿಂತ ಮೊದಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿದ ಸಮಯದಲ್ಲಿ ಪಟ್ಟಣ ಪಂಚಾಯತಿ ದಾಖಲೆಗಳಲ್ಲಿ ಮೀನುಗಾರಿಕೆ ಇಲಾಖೆಗೆ ಹೆಸರಿಗೆ ಇರುವ ಬಗ್ಗೆ ಹಲವು ದಾಖಲೆ, ಪುರಾವೆಗಳು ಲಭ್ಯವಾಗಿದೆ. ಪರಭಾರೆ ಮಾಡಿಸಿಕೊಂಡ ಕಮಲಾಬಾಯಿ ಚವ್ಹಾಣ ಎಂಬುವರು ಹಕ್ಕು ಹೊಂದಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಜಾಗ ಮೀನುಗಾರಿಕೆ ಇಲಾಖೆಗೆ ಸೇರಿದ್ದು, ಪಟ್ಟಣ ಪಂಚಾಯತಿ ಅಧಿಕಾರಿ, ಸಿಬ್ಬಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಮಲಾಬಾಯಿ ಚವ್ಹಾಣ ಎಂಬುವರಿಗೆ ಒಟ್ಟು 1 ಎಕರೆ 20 ಗುಂಟೆ ಜಾಗದಲ್ಲಿ 65ಗಿ70 ಅಳತೆಯ ಜಾಗವನ್ನು ಪರಭಾರೆ ಮಾಡಿರುವ ಬಗ್ಗೆ ಖಚಿತವಾಗಿದೆ.
ರಾಯಬಾಗ ಪಟ್ಟಣ ಪಂಚಾಯಿತಿಯಲ್ಲಿ ಪಹಣಿಪತ್ರಗಳಿಗೆ ಕರ ವಸೂಲಿಗಾರ ವೆಂಕಟೇಶ ಚಲವಾದಿ ಎಂಬಾತ ಇನಿಷಿಯಲ್ ಸಹಿ ಮಾಡಿ, ನಂತರ ಮುಖ್ಯಾಧಿಕಾರಿ ಸಹಿ ಮಾಡಿಸಿದ್ದರು. ಅಲ್ಲದೇ ರಾಯಬಾಗ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೀನುಗಾರಿಗೆ ಇಲಾಖೆಗೆ ಸೇರಿದ್ದ ಜಾಗವನ್ನು ಖೊಟ್ಟಿದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಪಹಣಿಪತ್ರ ಪೂರೈಕೆ ಮಾಡಲಾಗಿದೆ. ಈ ಕೃತ್ಯದಲ್ಲಿ ಬೇರೆಯವರ ಕೈವಾಡವೂ ಇದೆ ಎಂಬ ಶಂಕೆ ಬಲವಾಗಿದೆ. ಅಲ್ಲದೇ ಸ್ವಂತ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಜತೆಗೆ ಖಾಸಗಿ ವ್ಯಕ್ತಿಗೆ 2018 ಫೆಬ್ರುವರಿಯಲ್ಲಿ ಖರೀದಿ ಪತ್ರ ಮಾಡಿಸಿಕೊಂಡಿದ್ದಾರೆ. ಆದ್ದರಿಂದ ಪಹಣಿಪತ್ರಕ್ಕೆ ಸಹಿ ಮಾಡಲು ಅಧಿಕಾರ ಇಲ್ಲದಿದ್ದರೂ ಇನಿಷಿಯಲ್ ಸಹಿ ಮಾಡಿದ ಕರ ವಸೂಲಿಗಾರ, ಪಹಣಿಪತ್ರಕ್ಕೆ ಸಹಿ ಮಾಡಿದ ಪಪಂ ಮುಖ್ಯಾಧಿಕಾರಿ, ಜಾಗ ತಮ್ಮದಲ್ಲದಿದ್ದರೂ ತಮ್ಮ ಹೆಸರಿಗೆ ಮಾಡಿಸಿಕೊಂಡಿರುವ ಖಾಸಗಿ ವ್ಯಕ್ತಿಗಳು ಹಾಗೂ ಸಾಕ್ಷಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಲ್ಲದೇ ವಿಶೇಷ ತಂಡವನ್ನು ರಚಿಸಿ ಸರ್ಕಾರಿ ಆಸ್ತಿಗಳನ್ನು ವಶಪಡಿಸಿಕೊಳ್ಳಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಅವರು ಸಹ ಲಿಖಿತ ದೂರನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದರು.