Kalaburagi News: ಧಾರಾಕಾರ ಮಳೆಯಿಂದ ಶಿಥಿಲಗೊಂಡಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ಕಾಲೇಜಿನ ಮೇಲ್ಚಾವಣಿ ಕುಸಿದು ಮೂವರು ವಿದ್ಯಾರ್ಥಿನಿಯರಿಗೆ ಗಾಯಗಳಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ (ಆ. 04): ಧಾರಾಕಾರ ಮಳೆಯಿಂದ ಶಿಥಿಲಗೊಂಡಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ಕಾಲೇಜಿನ ಮೇಲ್ಚಾವಣಿ ಕುಸಿದು ಮೂವರು ವಿದ್ಯಾರ್ಥಿನಿಯರಿಗೆ ಗಾಯಗಳಾದ ಘಟನೆ ಗುರುವಾರ ಆಳಂದ ತಾಲೂಕಿನ ಮಾದನಹಿಪ್ಪರಗಾದಲ್ಲಿ ನಡೆದಿದೆ. ಕಾಲೇಜಿನ ಮೊದಲ ಮಹಡಿಯ ಮೇಲಿರುವ ಎರಡು ಕೋಣೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ತರಗತಿಗಳು ನಡೆದಿವೆ. ಪಾಠ ನಡೆಯುತ್ತಿರುವಾಗಲೇ ಪ್ರಥಮ ಪಿಯು ತರಗತಿಯ ಕೋಣೆಯ ಮೇಲ್ಚಾವಣಿಯ ಸಿಮೆಂಟಿನ ಪದರು ಕಳಚಿ ವಿದ್ಯಾರ್ಥಿನಿಯರ ತಲೆ ಮೇಲೆ ಬಿದ್ದಿದೆ. ನಿಖಿತಾ ಬಾಬುರಾವ ಎಂಬ ವಿದ್ಯಾರ್ಥಿನಿಯ ತಲೆ ಒಡೆದು ರಕ್ತ ಬಂದಿದೆ ಇನ್ನಿಬ್ಬರ ವಿದ್ಯಾರ್ಥಿನಿಯರಾದ ತಾರಾಬಾಯಿ ಉಮೇಶ್ ಮತ್ತು ವಿಜಯಲಕ್ಷ್ಮೀ ಸಿದ್ದರಾಮ ಇವರಿಗೂ ತಲೆ ಮೇಲೆ ಬಿದ್ದಿರುವದರಿಂದ ತಲೆಗೆ ಪೆಟ್ಟಾಗಿದೆ.
ತಕ್ಷಣವೆ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಪಾಟೀಲ ಉಪನ್ಯಾಸಕರಾದ ಡಾ. ನಾಗಮ್ಮ, ಸಂತೋಷ ವಣಗೇರೆ, ಡಾ.ಲಿಂಗನಬಸವ ಪಾಟೀಲ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸೇರಿಕೊಂಡು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಕಾಲೇಜಿನ ಸಿಬ್ಬಂದಿ ವಿರುದ್ದ ಪಾಲಕರ ಆಕ್ರೋಶ: ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತೆಗೆ ದೌಡಾಯಿಸಿದ ಪಾಲಕರು ಕಾಲೇಜು ಸಿಬ್ಬಂದಿಯನ್ನು ತರಾಟಗೆ ತೆಗೆದುಕೊಂಡರು. ಕಾಲೇಜಿನ ಕಟ್ಟಡ ಸೋರುತ್ತಿದ್ದರೂ ತರಗತಿಗಳು ಯಾಕೆ ನಡೆಸಿದ್ದೀರಿ ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ. ಕಟ್ಟಡದ ಬಗ್ಗೆ ಗೊತ್ತಿದ್ದರೂ ನೀವೂ ನಿರ್ಲಕ್ಷ್ಯ ತೋರಿದ್ದಿರಿ ಕರ್ನಾಟಕ ಪಬ್ಲಿಕ್ ಶಾಲೆಯ ಹಲವಾರು ಕೋಣೆಗಳು ಮಳೆಯಿಂದ ಸೋರುತ್ತಿದ್ದು, ಕೆಲವು ಕೋಣೆಗಳಲ್ಲಿ ಮಾತ್ರ ತರಗತಿಗಳು ನಡೆಯುತ್ತಿವೆ. ಕಾಲೇಜಿನ ಹೊಸ ಕಟ್ಟಡಗಳು ಕೂಡಾ ಕಳಪೆ ಗುಣಮಟ್ಟದ ಕಾಮಗಾರಿಯಾಗಿವೆ ಎಂಬುದಕ್ಕೆ ಸೋರುತ್ತಿರುವ ಕೋಣೆಗಳೇ ಸಾಕ್ಷಿಯಾಗಿವೆ ಎಂದು ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ, ರೆಡ್ ಅರ್ಲಟ್