ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಕೊತ್ತಂಬರಿ ಬೆಳೆಗೆ ಹಾನಿ
ಪಿ.ಎಸ್. ಪಾಟೀಲ
ರೋಣ(ಆ.04): ಬಯಲುಸೀಮೆ ಪ್ರದೇಶವೆಂದೇ ಕರೆಯಲ್ಪಟ್ಟ ತಾಲೂಕಿನ ಬೆಣ್ಣಿಹಳ್ಳ, ಹಿರೇಹಳ್ಳ ಭಾಗದಲ್ಲಿ ಬೆಳೆಯಲಾದ ಒಣ ಬೇಸಾಯ ಕೊತ್ತಂಬರಿ ಸೊಪ್ಪಿಗೆ ರಾಯಲ್ ಸೀಮಾ (ಆಂಧ್ರ ಪ್ರದೇಶ), ಮಹಾರಾಷ್ಟ್ರ, ಗೋವಾದಲ್ಲಿ ಭಾರಿ ಡಿಮಾಂಡ್ ಬಂದಿದ್ದು, ಕೊತ್ತಂಬರಿ ಸೊಪ್ಪು ಖರೀದಿಗೆ ದಲ್ಲಾಳಿಗಳು ಮುಗಿಬಿದ್ದಿದ್ದಾರೆ. ಆಂಧ್ರದ ರಾಯಲ್ ಸೀಮಾ ಪ್ರದೇಶವಾದ ಅನಂತಪುರಂ, ಅನ್ನಮಯ್ಯ, ಕರ್ನೂಲ, ನಂದ್ಯಾಳ, ತಿರುಪತಿ, ಕಡಪಾ ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕದ ಬಯಲು ಸೀಮೆ ಕೊತ್ತಂಬರಿಗೆ ಸೊಪ್ಪಿಗೆ ಸಾಕಷ್ಟು ಬೇಡಿಕೆ ಇದೆ. ಜತೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್, ಘಟಪ್ರಭಾ, ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ, ಪುಣೆ, ಗೋವಾಗಳಲ್ಲೂ ಇಲ್ಲಿಯ ಕೊತ್ತಂಬರಿ ಸೊಪ್ಪು ಮಾರಾಟವಾಗುತ್ತಿದೆ.
ಯಾಕೀ ಬೇಡಿಕೆ?:
undefined
ಆರೋಗ್ಯ ಮತ್ತು ಸೌಂದರ್ಯ ವೃದ್ಧಿಗೆ, ರುಚಿಕರ ಆಹಾರ ಪದಾರ್ಥ ತಯಾರಿಕೆಗೆ ಮತ್ತು ಔಷಧೀಯ ಗುಣ ಹೊಂದಿದ್ದರಿಂದ ಇಲ್ಲಿಯ ಕೊತ್ತಂಬರಿ ಸೊಪ್ಪನ್ನು ಅಲ್ಲಿಯ ಜನರು ಬಯಸುತ್ತಿದ್ದಾರೆ. ಈ ವರ್ಷ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿದಿದ್ದರಿಂದ ಕೊತ್ತಂಬರಿ ಬೆಳೆಹಾನಿಯಾಗಿದೆ. ರೋಣ ತಾಲೂಕಿನ ಬೆಳವಣಿಕಿ, ಮಲ್ಲಾಪುರ, ಸಂದಿಗವಾಡ, ಕೌಜಗೇರಿ, ಹೊನ್ನಾಪುರ, ಅರಹುಣಸಿ, ಮೇಲ್ಮಠ, ಸವಡಿ, ಯಾವಗಲ್ಲ, ಯಾ.ಸ. ಹಡಗಲಿ, ಹಿರೇಮಣ್ಣೂರ, ಚಿಕ್ಕಮಣ್ಣೂರ, ಬಾಸಲಾಪುರ, ಹೊನ್ನಾಪುರ, ಡ.ಸ. ಹಡಗಲಿ ಮುಂತಾದ ಹಳ್ಳಿಗಳಲ್ಲಿ ಒಣ ಬೇಸಾಯದಲ್ಲಿ ಬೆಳೆದ ಕೊತ್ತಂಬರಿ ಸೊಪ್ಪು ಅಕ್ಕಪಕ್ಕದ ರಾಜ್ಯಗಳಿಗೆ ರವಾನೆಯಾಗುತ್ತಿದೆ.
ಬಹುತೇಕವಾಗಿ ಕೊತ್ತಂಬರಿಯನ್ನು ಮುಂಗಾರು ಹಂಗಾಮಿನಲ್ಲಿ ಬೆಳೆಯುತ್ತಾರೆ. ಆದರೆ ಈ ವರ್ಷ ಹಿಂಗಾರಿ ಹಂಗಾಮಿನಲ್ಲಿಯೇ ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದೆ. ಇದು 45 ದಿನದ ಬೆಳೆಯಾಗಿದ್ದು, ಸದ್ಯ ಕಟಾವು ಹಂತಕ್ಕೆ ಬಂದಿದೆ.
ಅತೀ ಮಳೆಗೆ ತತ್ತರಿಸಿದ ಹೂ ಬೆಳೆಗಾರರು: ಶ್ರಾವಣದ ಮೊದಲ ಸೋಮವಾರವೂ ಹೂವಿಗಿಲ್ಲ ಬೆಲೆ
ಎಕರೆಗೆ 12ರಿಂದ 15 ಸಾವಿರ ದರ:
ಇಲ್ಲಿ ಬೆಳೆಯಲಾದ ಕೊತ್ತಂಬರಿ ಸೊಪ್ಪು ಎಕರೆಗೆ .12ರಿಂದ .15 ಸಾವಿರ ವರೆಗೆ ಮಾರಾಟವಾಗುತ್ತಿದೆ. ಬೆಳೆ ಪ್ರಮಾಣಕ್ಕೆ ಅನುಗುಣವಾಗಿ ದಲ್ಲಾಳಿಗಳು ಧಾರಣೆ ನಿಗದಿ ಮಾಡುತ್ತಾರೆ. ಬೆಳೆಗೆ 30 ದಿನ ಆಗಿರುವಾಗಲೇ ವ್ಯಾಪಾರಸ್ಥರು ರೈತರ ಜತೆ ದರ ನಿಗದಿ ಮಾಡಿರುತ್ತಾರೆ. ಬೆಳೆಯನ್ನು ತಮ್ಮ ಸುಪರ್ದಿಗೆ ಪಡೆದು ತಾವೇ ಕಟಾವು ಮಾಡಿ ಕೊಂಡೊಯ್ಯುತ್ತಾರೆ. ಇದನ್ನು ಹೊರತುಪಡಿಸಿ ಕೆಲವು ರೈತರು ಟ್ರೇ ಲೆಕ್ಕದಲ್ಲಿ ಮಾರುತ್ತಾರೆ. 1 ಟ್ರೇ (25ರಿಂದ 30 ಸಿವುಡು) .140ರಿಂದ .180ರ ವರೆಗೆ ಮಾರಾಟವಾಗುತ್ತಿದೆ. ಉತ್ತಮ ಕೊತ್ತಂಬರಿ ಸೊಪ್ಪು ಇದ್ದಲ್ಲಿ ಟ್ರೇ ಒಂದಕ್ಕೆ .200ರಿಂದ .300ರ ವರೆಗೆ ಹರಾಜು ಆಗುತ್ತವೆ.
ದಿನಕ್ಕೆ 10ರಿಂದ 12 ಕ್ಯಾಂಟರ್ ಸಾಗಾಟ:
ಖರೀದಿದಾರರಾದ ಎಂ. ಕಿಲ್ಲೇದಾರ, ಎಂ.ಬಿ. ದಸ್ತಗಿರಿ ಅವರು ದಿನಕ್ಕೆ 10ರಿಂದ 12 ಕ್ಯಾಂಟರ್‌ಗಳಲ್ಲಿ ಕೊತ್ತಂಬರಿ ಸೊಪ್ಪು ತುಂಬಿ ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಕಳೆದೊಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕೊತ್ತಂಬರಿ ಬೆಳೆ ಹಾನಿಯಾಗುವ ಆತಂಕ ಸೃಷ್ಟಿಯಾಗಿದೆ. ತೇವಾಂಶ ಹೆಚ್ಚಾದಲ್ಲಿ ಕೊತ್ತಂಬರಿ ಕೊಳೆಯುತ್ತದೆ. ಕಳೆದ 20 ವರ್ಷಗಳಲ್ಲಿ ಈ ವರ್ಷವೇ ಇಷ್ಟೊಂದು ಬೇಡಿಕೆ ಬಂದಿದ್ದು, ರೈತರು ಖುಷಿಯಾಗಿದ್ದಾರೆ.
Heavy Rain Fall : ಚೇರ್ ಮೇಲೆ ರಾತ್ರಿ ಕಳೆದ ಆಪರೇಷನ್ ಆದ ವ್ಯಕ್ತಿ!
ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಅಲ್ಲಿ ಬೆಳೆಯಲಾದ ಕೊತ್ತಂಬರಿ ಹಾನಿಯಾಗಿದೆ. ಇದರಿಂದ ರೋಣ ತಾಲೂಕಿನಲ್ಲಿ ಬೆಳೆದ ಕೊತ್ತಂಬರಿಗೆ ಬೇಡಿಕೆ ಬಂದಿದೆ. ದಲ್ಲಾಳಿಗಳೇ ಹೊಲಕ್ಕೆ ಬಂದು ಎಕರೆಗೆ ಇಂತಿಷ್ಟುಧಾರಣಿ ನಿಗದಿ ಮಾಡಿ, ತಾವೇ ಕಟಾವು ಮಾಡಿಕೊಂಡು ಸಾಗಿಸುತ್ತಿದ್ದಾರೆ. ಒಣ ಬೇಸಾಯ ಬೆಳೆಯಾದ ಕೊತ್ತಂಬರಿ ಆರೋಗ್ಯ ಉತ್ತಮವಾಗಿದೆ ಅಂತ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಹಿರಿಯ ಪತ್ರಕರ್ತ ರುದ್ರಪ್ಪ ಶಿವಸಿಂಪಿ ತಿಳಿಸಿದ್ದಾರೆ.
ಬಹುತೇಕವಾಗಿ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊತ್ತಂಬರಿ ಬೆಳೆಯುತ್ತಾರೆ. ಆದರೆ ಈ ಬಾರಿ ಹಿಂಗಾರು ಹಂಗಾಮಿನಲ್ಲಿಯೇ ಕೊತ್ತಂಬರಿ ಬೆಳೆದಿದ್ದು, ಇಲಾಖೆ ಬಿತ್ತನೆ ಗುರಿ ಮೀರಿದೆ ಅಂತ ರೋಣ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ ಹೊಸೂರ ಹೇಳಿದ್ದಾರೆ.