ಪಿಂಜಾರ-ನದಾಫ್‌ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮದ ಚಿಂತನೆ: ಸಚಿವ ಆನಂದ್ ಸಿಂಗ್

By Kannadaprabha News  |  First Published Oct 30, 2022, 12:10 PM IST
  • ಪಿಂಜಾರ-ನದಾಫ್‌ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮದ ಚಿಂತನೆ
  • .75 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ
  • ವಿದ್ಯಾಭ್ಯಾಸಕ್ಕೆ ಐದು ಲಕ್ಷ ವೈಯಕ್ತಿಕ ದೇಣಿಗೆ ಭರವಸೆ ನೀಡಿದ ಸಚಿವ ಆನಂದ ಸಿಂಗ್‌

ಹೊಸಪೇಟೆ (ಅ.30) : ನದಾಫ್‌-ಪಿಂಜಾರ ಸಮಾಜದ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ.ಅದೇ ರೀತಿ ರಾಜ್ಯದಲ್ಲೂ ಪ್ರತ್ಯೇಕ ನಿಗಮ ಸ್ಥಾಪನೆ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಹೇಳಿದರು.

ರಾಹುಲ್ ಗಾಂಧಿ ಬರೀ ಪ್ರವಚನ ಹೇಳ್ತಾರೆ, ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡ್ತಿಲ್ಲ: ಆನಂದ್ ಸಿಂಗ್

Tap to resize

Latest Videos

undefined

ಕರ್ನಾಟಕ ರಾಜ್ಯ ನದಾಫ್‌,ಪಿಂಜಾರ ಸಂಘದ 30ನೇ ವಾರ್ಷಿಕೋತ್ಸವದ ನಿಮಿತ್ತ ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಶನಿವಾರ ನಡೆದ ಸಮಾಜದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಸಮಾಜದವರು ಭಾರಿ ಮುಗ್ಧರು,ಕಳೆದ ಹದಿನೈದು ವರ್ಷಗಳಲ್ಲಿ ಒಮ್ಮೆಯೂ ನನ್ನ ಬಳಿ ಬಂದು,ಯಾವುದೇ ಬೇಡಿಕೆ ಇಟ್ಟಿಲ್ಲ.ಕೆಲ ದಿನಗಳ ಹಿಂದೆ ಬೇಡಿಕೆ ಇಟ್ಟಾಗ ನಾನೇ ಖುದ್ದು ಸಮಾರಂಭಕ್ಕೆ ಐದು ಲಕ್ಷ ದೇಣಿಗೆ ನೀಡಿರುವೆ.ಈಗ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ವೈಯಕ್ತಿಕವಾಗಿ ಐದು ಲಕ್ಷ ಸಂಘದ ಖಾತೆಗೆ ನೀಡುವೆ.ಅಲ್ಲದೇ,ಹೊಸಪೇಟೆಯ ಸಂಕ್ಲಾಪುರದಲ್ಲಿ ಪಿಂಜಾರ-ನದಾಫ್‌ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಅನುದಾನದಲ್ಲಿ .75 ಲಕ್ಷ ಮಂಜೂರು ಮಾಡಿರುವೆ. ಅದರ ಆದೇಶ ಪ್ರತಿಯನ್ನೂ ಇಲ್ಲಿಯೇ ಸಮಾರಂಭದಲ್ಲೇ ಕೊಡುವೆ ಎಂದರು.

ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ನದಾಫ್‌-ಪಿಂಜಾರ ಸಮಾಜದ ಅಭಿವೃದ್ಧಿಗೆ ಮುಕ್ತ ಸಹಕಾರ ನೀಡುವೆ.ಈ ಸಮಾಜ ಶಾಂತಿ ಬಯಸುವ ಸಮಾಜವಾಗಿದೆ.ಮೊದಲಿನಿಂದಲೂ ಈ ಸಮಾಜದ ಜತೆಗೆ ನಾನು ನಿಂತಿರುವೆ.ಈಗಲೂ ಈ ಸಮಾಜದ ಜತೆಗೆ ನಿಲ್ಲುವೆ.ಸಮಾಜದ ಅಭಿವೃದ್ಧಿಗೆ ಸದಾ ಸಹಕಾರ ನೀಡುವೆ. ನಾವೆಲ್ಲರೂ ಒಂದಾಗಿ ಬಾಳಿದರೆ ಮಾತ್ರ ದೇಶ ಪ್ರಗತಿಪಥದತ್ತ ಸಾಗುತ್ತದೆ.ಹಾಗಾಗಿ ಪಿಂಜಾರ-ನದಾಫ್‌ ಸಮಾಜದ ಅಭಿವೃದ್ಧಿಗೆ ಹಡಗಲಿ ಕ್ಷೇತ್ರದಲ್ಲಿ ಮುಕ್ತ ಸಹಕಾರ ನೀಡಿರುವೆ ಎಂದರು.

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾ ನಾಯ್ಕ ಮಾತನಾಡಿ,ಪಿಂಜಾರ-ನದಾಫ್‌ ಸಮಾಜದವರು ಕಷ್ಟಜೀವಿಗಳು,ಸಮಾಜದಲ್ಲಿ ಸದಾ ಸೌಹಾರ್ದ ಬೆಸುವ ಜನಾಂಗವಾಗಿದ್ದಾರೆ. ಹಳ್ಳಿಗಳಲ್ಲಿ ಈಗಲೂ ಎಲ್ಲರ ಜತೆಗೆ ಸಹೋದರ ಸಂಬಂಧದೊಂದಿಗೆ ಬದುಕು ಸಾಗಿಸುತ್ತಾರೆ. ಮುಸ್ಲಿಂ ಸಮಾಜಕ್ಕೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ನೀಡಿರುವೆ.ಕೋಟಿ ವೆಚ್ಚದಲ್ಲಿ ಶಾದಿ ಮಹಲ್‌ಗಳನ್ನು ನಿರ್ಮಿಸಿರುವೆ. ಶಾಸಕರ ಅನುದಾನ ಕೂಡ ನೀಡಿರುವೆ. ಮಸೀದಿಗಳಿಗೂ ಸಹಾಯ ನೀಡಿರುವೆ. ಪಿಂಜಾರ-ನದಾಫ್‌ ಸಮಾಜದ ಬೇಡಿಕೆಗಳನ್ನು ಈಗಿನ ಸರ್ಕಾರ ಈಡೇರಿಸದಿದ್ದರೆ ಮುಂದೆ 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ನಾನೇ ಖುದ್ದು ಮುಂಚೂಣಿಯಲ್ಲಿ ನಿಂತು ನಿಮ್ಮ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಾಡಿ ಈಡೇರಿಸುವೆ ಎಂದರು.

ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಶ್ರೀಜ.ಕೊಟ್ಟೂರು ಬಸವಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿ, ಪಿಂಜಾರ-ನದಾಫ್‌ ಸಮಾಜದ ಮಕ್ಕಳು ಐಎಎಸ್‌, ಕೆಎಎಸ್‌ ಮಾಡಲು ಮುಂದೆ ಬಂದರೆ, ಶ್ರೀಮಠದ ವತಿಯಿಂದ ಸಹಕಾರ ನೀಡಲಾಗುವುದು. ಸಮಾಜದಲ್ಲಿ ಈಗ ಸೌಹಾರ್ದತೆ ಬೇಕಿದೆ.ಹಾಗಾಗಿ ಪಿಂಜಾರ-ನದಾಫ್‌ ಸಮಾಜ ಇನ್ನಷ್ಟುಸಂಘಟಿತರಾಗಿ ಸಮಾಜದಲ್ಲಿ ಸಾಮರಸ್ಯ ಮೂಡಿಸಲಿ ಎಂದರು.

ಕಲ್ಯಾಣ ಕರ್ನಾಟಕ ಪ್ರಗತಿಗೆ ಹತ್ತಾರು ಯೋಜನೆ; ಸಚಿವ ಆನಂದ್ ಸಿಂಗ್

ಎಮ್ಮಿಗನೂರಿನ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಸಿರಾಜ್‌ ಶೇಖ್‌, ಮುಖಂಡರಾದ ರಾಜಶೇಖರ ಹಿಟ್ನಾಳ, ಕುರಿ ಶಿವಮೂರ್ತಿ, ಎಚ್‌ಎನ್‌ಎಫ್‌ ಇಮಾಮ್‌ ನಿಯಾಜಿ,ಎಚ್‌.ಜಿ.ವಿರೂಪಾಕ್ಷಿ, ನಾಜೀಂ,ಜಲೀಲ್‌, ಎಂ.ಡಿ. ನದಾಫ್‌,ಪಿ.ಅಬ್ದುಲ್‌,ಬ್ಯಾಲೇಸಾಬ್‌, ಹೊನ್ನೂರಸಾಬ್‌, ಪಿ.ಬಾಬು,ಸುರೇಶ, ಇ.ಶೇಕ್ಷಾವಲಿ, ದಾದಾವಲಿ ಎಸ್‌., ಮೊಹಮ್ಮದ್‌ ರಫೀಕ್‌ ಮತ್ತಿತರರಿದ್ದರು.

click me!