ಗಾಯಾಳುಗಳನ್ನು ಪರ್ಯಾಯ ವ್ಯವಸ್ಥೆಯ ಮೂಲಕ ಸಾಗಿಸದೆ ಅಮಾನವೀಯವಾಗಿ ನಡೆದುಕೊಂಡ ಪೊಲೀಸರು
ಶಹಾಬಾದ(ಅ.30): ನಗರದಿಂದ ಯಾದಗಿರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 150ರಲ್ಲಿರುವ ಮಾಲಗತ್ತಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಸಮಯಕ್ಕೆ ಸರಿಯಾಗಿ 108 ಅಂಬುಲೆನ್ಸ್ ಬಾರದೆ, ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಪರ್ಯಾಯ ವ್ಯವಸ್ಥೆಯ ಮೂಲಕ ಸಾಗಿಸದೆ ಅಮಾನವೀಯವಾಗಿ ನಡೆದುಕೊಂಡು ಘಟನೆ ಶನಿವಾರ ಬೆಳಗ್ಗೆ ನಡೆಯಿತು.
ಮಾಲಗತ್ತಿ ಗ್ರಾಮದ ಬಳಿ ಬೆಳಗ್ಗೆ ಸುಮಾರು 9 ಗಂಟೆಗೆ ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಯುವಕರಿಗೆ ಲಾರಿಯೊಂದು ಡಿಕ್ಕಿ ಹೊಡೆದು, ಪರಾರಿಯಾಗಿದೆ. ಕಾಲಿಗೆ ತೀವ್ರ ಗಾಯವಾಗಿ, ಇಬ್ಬರು ಯುವಕರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ, ಸ್ಥಳಕ್ಕೆ ಆಗಮಿಸಿದ ಶೇಷಪ್ಪ ಎಂಬುವವರು 108 ಅಂಬುಲೆನ್ಸ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ 112 ಇಆರ್‌ಎಸ್‌ಎಸ್ ವಾಹನ, ಹೈವೇ ಪೆಟ್ರೋಲಿಂಗ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ಸುಮಾರು 9.50 ಗಂಟೆಯಾದರು ಸ್ಥಳಕ್ಕೆ 108 ಅಂಬುಲೆನ್ಸ ಬಾರದೆ ಇರುವದರಿಂದ ಪೊಲೀಸರು ಮಾನವೀಯತೆ ದೃಷ್ಟಿಯಿಂದ ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಸಾಗಿಸದೆ, ಕೈಕಟ್ಟಿ ನಿಂತಿದ್ದು, ಗಾಯಾಳುಗಳನ್ನು ಸಾಗಿಸುವದು ನಮ್ಮ ಕೆಲಸವಲ್ಲ ಎಂದು ಹೇಳಿದ್ದಾರೆ. ಕೊನೆಗೆ ಸ್ಥಳೀಯರು ಆಕ್ರೋಶಗೊಂಡು ಖಾಸಗಿ ವಾಹನದ ಮೂಲಕ ಸಾಗಿಸಲು ಮುಂದಾದಾಗ, ಖಾಸಗಿ ವಾಹನದಲ್ಲೂ ಸಾಗಿಸಲು ಅವಕಾಶ ನೀಡದೆ, ಅಂಬುಲೆನ್ಸ್ ಬರುತ್ತದೆ ತಡೆಯಿರಿ ಎಂದು ಜನರನ್ನು ತಡೆದಿದ್ದಾರೆ.
ಕಲಬುರಗಿ: ಶಕ್ತಿ ದೇವತೆ ಭಾಗ್ಯವಂತಿ ತಾಣ ಘತ್ತರಗಿಯಲ್ಲಿ ಸರ್ಕಾರಿ ಶಾಲೆಗಿಲ್ಲ ಜಾಗ..!
ಕೊನೆಗೆ ಜನರು ಅನಿವಾರ್ಯವಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಟಂಟಂ ಒಂದರಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಮಾರ್ಗ ಮಧ್ಯದಲ್ಲಿ 108 ಅಂಬುಲೆನ್ಸ್ ಬಂದ ನಂತರ ಗಾಯಾಳುಗಳನ್ನು ಆದರಲ್ಲಿ ಸಾಗಿಸಲಾಯಿತು. ಗಾಯಗೊಂಡ ಇಬ್ಬರು ಯುವಕರು ಮಾಲಗತ್ತಿ ಗ್ರಾಮದವರಾಗಿದ್ದು, ಕಾರ್ತಿಕ ತಂ. ಸುನೀಲ, ಹಾಗೂ ಸುಧಾಕರ ಎಂದು ಗುರುತಿಸಲಾಗಿದೆ.