ದಾವಣಗೆರೆ (ಅ.22) : ದೇಶದ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ಹೋರಾಡಿ, ಹುತಾತ್ಮರಾದ ಪೊಲೀಸರ ತ್ಯಾಗ, ಬಲಿದಾನ ಸದಾ ಸ್ಮರಣೀಯವಾದ್ದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು. ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶಾದ್ಯಂತ ಕಳೆದೊಂದು ವರ್ಷದಲ್ಲಿ 260 ಸಮವಸ್ತ್ರದಾರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯದಲ್ಲಿರುವಾಗಲೇ ಹುತಾತ್ಮರಾಗಿದ್ದಾರೆ ಎಂದರು.
ಗುಮ್ಮಟನಗರಿಯಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ, ವಿಜಯಪುರ ಪೊಲೀಸರನ್ನ ಹೊಗಳಿದ ಡಿಸಿ!
ಮುಂದಿನ ದಿನಗಳಲ್ಲಿ ಇಂತಹ ಬಲಿದಾನಗಳು ಕಡಿಮೆಯಾಗಲಿ. ರಕ್ಷಣಾ ಕಾರ್ಯದಲ್ಲಿ ತೊಡಗಿಸುವ ಪೊಲೀಸರಿಗೆ ಆಧುನಿಕತೆಗೆ ತಕ್ಕಂತೆ ರಕ್ಷಣಾ ಶಸ್ತ್ರಾಸ್ತ್ರಗಳೂ ಸಿಗುವಂತಾಗಲಿ . ಇಡೀ ದೇಶಾದ್ಯಂತ ಪೊಲೀಸ್ ರಕ್ಷಣಾ ಸಿಬ್ಬಂದಿ ನಮ್ಮ ದೇಶದ ರಕ್ಷಣೆ ಮಾಡಲು, ಜನರನ್ನು ಸುರಕ್ಷಿತವಾಗಿಡಲು, ಸಂವಿಧಾನವನ್ನು ಕಾಪಾಡುವ ಸಲುವಾಗಿ ತಮ್ಮ ಪ್ರಾಣದಾನ ಮಾಡಿದ್ದಾರೆ. ಇಂತಹ ಹುತಾತ್ಮರರನ್ನು ನಾವು ಸದಾ ಸ್ಮರಿಸಬೇಕು. ಹುತಾತ್ಮ ಕುಟುಂಬದ ಸದಸ್ಯರಿಗೆ ಸಂವೇದನಾ ಶೀಲ ಭಾವನೆಗಳ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಸಿಆರ್‌ಪಿಎಫ್ ತುಕಡಿ ಲಡಾಕ್‌ನಲ್ಲಿ ತಮ್ಮಲ್ಲಿದ್ದ ಸಾಮಾನ್ಯ ಸಶಸ್ತ್ರ ಬಂದೂಕುಗಳನ್ನು ಹಿಡಿದು, ನೆರೆಯ ಶತೃ ರಾಷ್ಟ್ರ ಚೀನಾ ಸೈನಿಕ ಸುಸಜ್ಜಿತ ಸಶಸ್ತ್ರ, ಮದ್ದುಗುಂಡುಗಳು, ಆಯುಧಗಳನ್ನೂ ಲೆಕ್ಕಿಸದೇ ಗಡಿಯಲ್ಲಿ ಹಾಟ್ ಸ್ಟ್ರೀಗ್ ಪೋಸ್ಟ್ ಬಳಿ ವೀರಾವೇಶ, ಧೈರ್ಯ, ಸಾಹಸದಿಂದ 21.10.1959ರಂದು ಹೋರಾಡುತ್ತಾರೆ. ಆಗ ಹುತಾತ್ಮರಾದ 10 ಪೊಲೀಸರು ಹಾಗೂ ನೋವನ್ನು ಅನುಭವಿಸಿದವರನ್ನು ಪ್ರತಿಯೊಬ್ಬ ಭಾರತೀಯರೂ ಸ್ಮರಿಸುತ್ತಾರೆ. ವೀರ ಮರಣ ಹೊಂದಿದವರ ಸ್ಮರಣಾರ್ಥ ಒಂದು ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯ ಪಾಲನೆಯಲ್ಲಿ ಪ್ರತಿವರ್ಷ ಜೀವ ಕಳೆದುಕೊಳ್ಳುತ್ತಿರುತ್ತಾರೆ. ಅಂತಹವರ ಸ್ಮರಣೆಗಾಗಿ ಪ್ರತಿ ವರ್ಷ ಅ.21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ. ನಮ್ಮ ದೇಶದ 260 ಜನ ಪೊಲೀಸ ಅಧಿಕಾರಿ, ಸಿಬ್ಬಂದಿಗಳಲ್ಲಿ ರಾಜ್ಯದ ಅವಿನಾಶ, ಮಂಜುನಾಥ, ರಾಜು, ಸದಾಶಿವ, ಜಿ.ಎಂ. ಮಾಲತೇಶ, ಅಬೂಬಕರ್, ಬಸವರಾಜ, ಅನಿಲ್, ನಿಂಗಪ್ಪ, ಪ್ರಸಾದ, ಪಂಡಿತ್ ಕೌಸರ್ ಹುತಾತ್ಮರಾಗಿದ್ದಾರೆ. ಇಂತಹ ಹುತಾತ್ಮರ ತ್ಯಾಗ, ಬಲಿದಾನವನ್ನು ಪೊಲೀಸ್ ಇಲಾಖೆ ಜೊತೆ ಜನರೂ ಮರೆಯುವುದಿಲ್ಲ ಎಂದು ಅವರು ಹೇಳಿದರು.
ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ತ್ಯಾಗರಾಜನ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಜಯಮ್ಮ ಗೋಪಿನಾಯ್ಕ, ಎಎಸ್ಪಿ ರಾಮಗೊಂಡ ಬಿ.ಬಸರಗಿ, ಲೋಕಾಯುಕ್ತ ಎಸ್ಪಿ ಎಂ.ಎಸ್.ಕೊಲ್ಲಾಪುರಿ, ನಿವೃತ್ತ ಎಸ್ಪಿ ರವಿನಾರಾಯಣ, ನಿವೃತ್ತ ಡಿವೈಎಸ್ಪಿ ಕೆ.ಪಿ.ಚಂದ್ರಪ್ಪ, ಡಿವೈಎಸ್ಪಿಗಳಾದ ಪ್ರಕಾಶ, ಬಿ.ಎಸ್.ಬಸವರಾಜ, ಕನ್ನಿಕಾ ಸಿಕ್ರಿವಾಲ್, ನರಸಿಂಹ ವಿ.ತಾಮ್ರಧ್ವಜ, ಸಿಪಿಐ ನಾಗೇಶ ಐತಾಳ್, ರಾಜ್ಯ ಗುಪ್ತವಾರ್ತೆ ಎಸಿ ಸೋಮಲಿಂಗ ಬಿ.ಕುಂಬಾರ, ಆರ್‌ಟಿಒ ಶ್ರೀಧರ ಮಲ್ನಾಡ್, ವಾಸಂತಿ ಉಪ್ಪಾರ, ಭಾಗ್ಯಶ್ರೀ, ಸತ್ಯ ನಾರಾಯಣ, ಆರ್.ಮಲ್ಲಮ್ಮ ಚೌಬೆ, ವರದಿಗಾರರ ಕೂಟದ ಕೆ.ಏಕಾಂತಪ್ಪ ಸೇರಿದಂತೆ ಗಣ್ಯರು, ಸಾರ್ವಜನಿಕರು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ನಮನ ಸಲ್ಲಿಸಿದರು.
ಹುತಾತ್ಮರಾದ ನಾಲ್ವರು ಜಮ್ಮು ಪೊಲೀಸ್ ಕುಟುಂಬಕ್ಕೆ ಉದ್ಯೋಗ: ನೇಮಕಾತಿ ಪತ್ರ ನೀಡಿದ ಅಮಿತ್ ಷಾ
ವಾಲಿ ಫೈರಿಂಗ್, ಪೊಲೀಸ್ ಧ್ವಜ ಅರ್ಧಕ್ಕೆ ಇಳಿಸಿ, 2 ನಿಮಿಷ ಮೌನ ಆಚರಿಸುವ ಮೂಲಕ ಹುತಾತ್ಮ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು. ಸಂಗೇನಹಳ್ಳಿ ದೇವರಾಜ, ಕೆ.ಎಸ್.ಶೈಲಜ ಕಾರ್ಯಕ್ರಮ ನಿರೂಪಿಸಿದರು. ಹೊನ್ನೂರಪ್ಪ ಪೊಲೀಸ್ ವಾದ್ಯವೃತ್ತದಿಂದ ಅಬೈಡ್ ವಿತ್ ಮಿ ಗೀತೆ ನುಡಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ವಂದನೆ ಸಲ್ಲಿಸಲಾಯಿತು.