ಚಿಕ್ಕಮಗಳೂರು (ಅ.21) : ನೈತಿಕ ಮೌಲ್ಯಗಳ ಆಧಾರದಲ್ಲಿ ಪ್ರತಿಯೊಬ್ಬರು ನಡೆದುಕೊಳ್ಳುವ ಸಮಾಜ ವ್ಯವಸ್ಥೆ ನಿರ್ಮಾಣ ಆಗುವುದಿಲ್ಲವೋ ಅಲ್ಲಿಯವರೆಗೂ ದುಷ್ಟಮನಸ್ಥಿತಿ ಜನರಿಗೆ ಕಾನೂನಿನ ಮೂಲಕ ಮತ್ತು ಸಜ್ಜನರ ರಕ್ಷಣೆ ಮಾಡಲು ಪೊಲೀಸ್ ವ್ಯವಸ್ಥೆ ಮೂಲಕ ನಾವು ಸುಸ್ಥಿರ ಸಮಾಜ ನಿರ್ಮಾಣದ ಕಡೆಗೆ ಹೆಜ್ಜೆ ಹಾಕಬೇಕಾಗುತ್ತದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಶೋಷಣೆಗೆ ಒಳಗಾಗುವ ಕಾಲ ಇದಲ್ಲ: ಸಿ.ಟಿ.ರವಿ
ನಗರದ ರಾಮನಹಳ್ಳಿ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಹುತಾತ್ಮ ಸ್ಮಾರಕ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವಿಂದು ಸುಕ್ಷಿತವಾಗಿದ್ದೇವೆಂದರೆ ಒಂದೆಡೆ ಗಡಿ ರಕ್ಷಣೆ ಮಾಡುತ್ತ ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುತ್ತಿರುವ ಯೋಧರು, ಮತ್ತೊಂದೆಡೆ ನಾಗರಿಕ ಸಮಾಜದೊಳಗೆ ನಮ್ಮನ್ನು ರಕ್ಷಣೆ ಮಾಡುತ್ತ ತಮ್ಮ ಕರ್ತವ್ಯ ಮೆರೆಯುತ್ತಿರುವ ಪೊಲೀಸರು ಎಂದರು.
ಕರ್ತವ್ಯದಲ್ಲಿದ್ದಾಗಲೇ ಈ ವರ್ಷ ದೇಶದಾದ್ಯಂತ 264 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಯಾವುದಾದರೂ ಊರಲ್ಲಿ ಅನಾಥಾಲಯಗಳು, ಆಸ್ಪತ್ರೆಗಳು ಆರಂಭವಾದರೆ ಹೆಚ್ಚು ಪೊಲೀಸ್ ಠಾಣೆಗಳಿಗೆ ಬೇಡಿಕೆ ಬಂದರೆ ಅದು ಒಳ್ಳೆಯ ಸಂದೇಶವಲ್ಲ. ರೋಗಗಳು ಹೆಚ್ಚಾದಂತೆ ಚಿಕಿತ್ಸಾಲಯಗಳು ನಿರ್ಮಾಣ ಆಗುತ್ತವೆ. ಎಲ್ಲಿಯವರೆಗೆ ರೋಗಮುಕ್ತ ವ್ಯವಸ್ಥೆ ನಿರ್ಮಾಣ ಆಗುವುದಿಲ್ಲವೋ ಅಲ್ಲಿಯವರೆಗೆ ಅಸ್ಪತ್ರೆಗಳು ಅವಶ್ಯವಿರುತ್ತದೆ. ಹಾಗೇಯೇ ಕುಟುಂಬ ವ್ಯವಸ್ಥೆಯ ದೌರ್ಬಲ್ಯಗಳು ಅನಾಥಾಲಯಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಹೆಚ್ಚು ಅಪರಾಧಗಳಾಗುವುದು, ಹೆಚ್ಚು ಪೊಲೀಸ್ ಠಾಣೆಗಳ ತೆರೆಯಲು ಬೇಡಿಕೆ ಬರುತ್ತಿದೆ ಎಂದರೆ ಹೆಮ್ಮೆಪಡುವಂಥದ್ದಲ್ಲ ಎಂದರು.
ಇಂದು ನಮ್ಮ ದೇಶದೊಳಗೆ ನಿರಂತರ ಕರ್ತವ್ಯ ಮಾಡುತ್ತಲೆ ತಮ್ಮ ಕುಟುಂಬ ಜೀವನವನ್ನು ಬದಿಗೊತ್ತಿ ಕಷ್ಟದ ಸಂದರ್ಭಗಳಲ್ಲಿ 24 ಗಂಟೆ ಕರ್ತವ್ಯ ಮಾಡುತ್ತಿದ್ದರೂ ಸಾರ್ವಜನಿಕ ಸಹಾನುಭೂತಿ ಕಡಿಮೆ ಇರುವ ಕಾರ್ಯಕ್ಷೇತ್ರವೆಂದರೆ ಪೊಲೀಸ್ ಇಲಾಖೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಪೊಲೀಸ್ ಇಲಾಖೆ ವೃತ್ತಿಯೇ ಬಹಳ ಒತ್ತಡದ ವೃತ್ತಿ, ಪೊಲೀಸ್ ಇಲಾಖೆ ಇಲ್ಲದಿದ್ದರೆ ಶಾಂತಿ ಸುವ್ಯವಸ್ಥೆ ಕಾಪಾಡಲಾಗದೇ ಸಮಾಜದಲ್ಲಿ ಅರಾಜಕತೆ ಇರುತ್ತದೆ. ಸುರಕ್ಷತೆ, ಭದ್ರತೆ ಇರುವುದಿಲ್ಲ. ಕಳ್ಳತನ, ಸುಲಿಗೆ, ಟ್ರಾಫಿಕ್ ಜಾಮ್ ಎಲ್ಲವೂ ಆಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಪೊಲೀಸ್ ಇಲ್ಲದ ಸಮಾಜ ಸಾಧ್ಯವೇ ಇಲ್ಲ ಎಂದು ಹೇಳಿದರು.
ಅ.21, 1959ರಲ್ಲಿ ಚೀನಾ ದಾಳಿಯಲ್ಲಾದ ದುರ್ಘಟನೆಯಲ್ಲಿ 10 ಮಂದಿ ಪೊಲೀಸರು ಮರಣ ಹೊಂದಿದ್ದರು. ಈ ಘಟನೆ ನಡೆದ ಒಂದು ತಿಂಗಳವರೆಗೂ ನಮ್ಮ ದೇಶಕ್ಕೆ ಹುತಾತ್ಮ ದೇಹ ನೀಡುವುದಿಲ್ಲ, ಬದಲಿಗೆ ನ.28ರಂದು ನೀಡುತ್ತಾರೆ. ಆ ಸ್ಮರಣಾರ್ಥ ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಪೊಲೀಸ್ ಅಂದರೆ ಧೈರ್ಯ, ತ್ಯಾಗ, ಸಮರ್ಪಣೆ. ನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಪ್ರಾಮಾಣಿಕತೆಯಿಂದ ಮಾಡಿದರೆ ಸಮಾಜದಿಂದ ಅಷ್ಟೇ ಗೌರವ ಸಲ್ಲುತ್ತದೆ. ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಮಿಕ್ಕಿದ್ದನ್ನು ಭಗವಂತನಿಗೆ ಬಿಟ್ಟವರಿಗೆ ಖಂಡಿತಾ ಜಯ ಸಿಕ್ಕೆ ಸಿಗುತ್ತದೆ ಎಂದರು.
ಊರಲ್ಲಿ ಹೊಡೆದಾಡಿಸುವ ರಾಜಕಾರಣ ಮಾಡಿಲ್ಲ; ಸಿ.ಟಿ.ರವಿ
ಆರಂಭದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಗೌರವ ಸಮರ್ಪಿಸಿದರು. ಹುತಾತ್ಮರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪು ಹಾರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.