ನೀರಾವರಿ ಪ್ರದೇಶ ಮತ್ತಷ್ಟುವಿಸ್ತರಣೆಯಾಗುವ ಮೂಲಕ ಹುಕ್ಕೇರಿ ಕ್ಷೇತ್ರ ಹಸಿರು ಕ್ರಾಂತಿಗೆ ನಾಂದಿಯಾಗಲಿದೆ. ಇಲ್ಲಿನ ಬರಡು ಭೂಮಿಯಲ್ಲಿ ಘಟಪ್ರಭೆ ಹರಿಯುವ ಕಾಲ ಇದೀಗ ಸನ್ನೀಹಿತವಾಗಿದ್ದು ಇನ್ಮುಂದೆ ರೈತರ ಹೊಲಗದ್ದೆಗಳಲ್ಲಿ ವಿವಿಧ ಬೆಳೆಗಳು ನಳನಳಿಸಲಿವೆ. ಕೃಷಿಕನ ಮೊಗದಲ್ಲಿ ಮಂದಹಾಸ ಮೂಡಿದ್ದು ನಗೆಯ ಗೆರೆಗಳು ನಲಿದಾಡುತ್ತಿವೆ.
ಹುಕ್ಕೇರಿ (ಜು.14) : ನೀರಾವರಿ ಪ್ರದೇಶ ಮತ್ತಷ್ಟುವಿಸ್ತರಣೆಯಾಗುವ ಮೂಲಕ ಹುಕ್ಕೇರಿ ಕ್ಷೇತ್ರ ಹಸಿರು ಕ್ರಾಂತಿಗೆ ನಾಂದಿಯಾಗಲಿದೆ. ಇಲ್ಲಿನ ಬರಡು ಭೂಮಿಯಲ್ಲಿ ಘಟಪ್ರಭೆ ಹರಿಯುವ ಕಾಲ ಇದೀಗ ಸನ್ನೀಹಿತವಾಗಿದ್ದು ಇನ್ಮುಂದೆ ರೈತರ ಹೊಲಗದ್ದೆಗಳಲ್ಲಿ ವಿವಿಧ ಬೆಳೆಗಳು ನಳನಳಿಸಲಿವೆ. ಕೃಷಿಕನ ಮೊಗದಲ್ಲಿ ಮಂದಹಾಸ ಮೂಡಿದ್ದು ನಗೆಯ ಗೆರೆಗಳು ನಲಿದಾಡುತ್ತಿವೆ.
ಹುಕ್ಕೇರಿ ಕ್ಷೇತ್ರ ವ್ಯಾಪ್ತಿಯ ನಾನಾ ಗ್ರಾಮಗಳ 19 ಕೆರೆಗಳಿಗೆ ವರ್ಷವಿಡೀ ನೀರು ತುಂಬಿಸುವ ಮಹತ್ವದ ಯೋಜನೆಯೊಂದನ್ನು ಸಣ್ಣ ನೀರಾವರಿ ಇಲಾಖೆ ರೂಪಿಸಿದೆ. ಇದಕ್ಕಾಗಿ ಅಂದಾಜು 42 ಕೋಟಿ ರೂ,ಗಳನ್ನು ಕಾಯ್ದಿರಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಈ ಮಹತ್ತರ ಯೋಜನೆಗೆ ಈಗಾಗಲೇ ಗ್ರೀನ್ ಸಿಗ್ನಲ್ ದೊರಕಿದ್ದು ಕಾಮಗಾರಿ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ.
ಈ ಯೋಜನೆಯಿಂದ ಕೃಷಿ ಚಟುವಟಿಕೆಗೆ ಮತ್ತಷ್ಟುಉತ್ತೇಜನ ಸಿಗಲಿದ್ದು ಬೇಸಿಗೆಯಲ್ಲಿ ಸಂಭವನೀಯ ಕುಡಿಯುವ ನೀರಿನ ಅಭಾವವೂ ತಪ್ಪಲಿದೆ. ಹೀಗೆ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕ್ಷೇತ್ರದ ಜನತೆಗೆ ಕುಡಿಯುವ ನೀರು ಮತ್ತು ರೈತರ ಹೊಲಗಳಿಗೆ ನೀರಾವರಿ ಕಲ್ಪಿಸಬೇಕೆಂಬ ಸಚಿವ ದಿ.ಉಮೇಶ ಕತ್ತಿ ಅವರ ಕನಸು ಸಾಕಾರಗೊಳ್ಳಲಿದೆ ಎಂಬ ಅಬಿಪ್ರಾಯ ಸಾರ್ವತ್ರಿಕವಾಗಿದೆ.
ನೆಲಕ್ಕುರಳಿದ ಶತಮಾನದ ಮರ, ಅಧಿಕಾರಿಗಳು ಭೇಟಿ, ಗ್ರಾಮಸ್ಥರಲ್ಲಿ ಆತಂಕ!
ತಾಲೂಕಿನ ಸುಲ್ತಾನಪುರ ಬ್ಯಾರೇಜ್‌ನಿಂದ ಘಟಪ್ರಭಾ ನದಿಯ ಹಿನ್ನೀರು ಹೊರತೆಗೆದು ಈ ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ನಿಯೋಜಿತ ಯೋಜನೆ ವ್ಯಾಪ್ತಿಯ ಕೆರೆಗಳಲ್ಲಿ 100 ಮಿಲಿಯನ್ ಕ್ಯೂಬಿಕ್ ಫೀಟ್ (ಎಂಸಿಎಫ್‌ಟಿ) ನೀರು ಸಂಗ್ರಹವಾಗಲಿದ್ದು 1200 ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ.
ಬೆಳವಿ ಗ್ರಾಮದ 3, ಶೇಲಾಪುರದ 2, ಯಾದಗೂಡದ 2, ಶೆಟ್ಟಿಕೇರಿಯ 1, ನೇರ್ಲಿ 2, ಹುಲ್ಲೋಳಿಹಟ್ಟಿಯ 5, ಎಲಿಮುನ್ನೋಳಿಯ 2, ಹಂಜ್ಯಾನಟ್ಟಿಯ 1 ಸೇರಿ ಒಟ್ಟು 19 ಕೆರೆಗಳಿಗೆ ಏಕಕಾಲಕ್ಕೆ ನೀರು ತುಂಬಿಸುವ ಯೋಜನೆ ಇದಾಗಿದೆ. ತನ್ಮೂಲಕ ಬರಗಾಲ ನೆಲಕ್ಕೆ ಘಟಪ್ರಭೆಯ ಗಂಗೆ ಹರಿದು ಬರಲಿದ್ದು ಒಂದರ್ಥದಲ್ಲಿ ಕೆರೆಗಳ ಕ್ರಾಂತಿಯಾಗಲಿದೆ.
ಆಡಳಿತಾತ್ಮಕ, ತಾಂತ್ರಿಕ ಅನುಮೋದನೆಯಾಗಿ ಯೋಜನೆಯ ಟೆಂಡರ್ ಪ್ರಕ್ರಿಯೆ ಎಲ್ಲವೂ ಪೂರ್ಣವಾಗಿದ್ದು ಗುತ್ತಿಗೆದಾರರಿಗೆ ಆದೇಶ ಪತ್ರವನ್ನೂ ವಿತರಿಸಲಾಗಿದೆ. ಸಮರೋಪಾದಿಯಲ್ಲಿ ಯೋಜನೆಯ ಪಂಪಹೌಸ್, ಎಲೆಕ್ಟ್ರೀಕಲ್, ರೈಸಿಂಗ್ ಮೇನ್ ಮತ್ತಿತರ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆರೆಗಳಿಗೆ ನೀರು ತುಂಬುವುದರಿಂದ ಸಹಜವಾಗಿ ಭಾಂವಿ, ಬೋರವೆಲ್‌ಗಳಲ್ಲಿ ಅಂತರ್ಜಲ ಮಟ್ಟಹೆಚ್ಚಳವಾಗಲಿದೆ.
ಬೆಳಗಾವಿಯಲ್ಲಿ ಹಾಡಹಗಲೇ ಟ್ಯೂಷನ್‌ಗೆ ಹೊರಟಿದ್ದ ಬಾಲಕಿಯ ಅಪಹರಣಕ್ಕೆ ಯತ್ನ: ಸಿಸಿಟಿವಿಯಲ್ಲಿ ಕೃತ್ಯ ಸೆರೆ
ಈಗಾಗಲೇ ಕ್ಷೇತ್ರದಲ್ಲಿ ಕೊಟಬಾಗಿ ಏತ ನೀರಾವರಿ, ಸಿಬಿಸಿ, ಜಿಆರ್‌ಬಿಸಿ ಕಾಲುವೆ, ಬ್ರೀಡ್ಜ್ ಕಂ ಬಾಂದಾರ ಮತ್ತು ಬ್ಯಾರೇಜ್‌ನಿಂದ ಸಾವಿರಾರು ಹೆಕ್ಟೇರ್ ಪ್ರದೇಶ ನೀರಾವರಿಯಾಗಿದೆ. ಇದೀಗ 19 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೃಷಿ ಕ್ಷೇತ್ರ ಹಿಗ್ಗಲಿದೆ. ಅತಿಯಾದ ಮಳೆ ಹಾಗೂ ಪ್ರವಾಹದಂತಹ ಸನ್ನಿವೇಶದಲ್ಲಿ ಘಟಪ್ರಭಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಪೋಲಾಗುವ ನೀರನ್ನು ತಡೆಹಿಡಿದು ಈ ಯೋಜನೆಗೆ ಬಳಸಲು ಉದ್ದೇಶಿಸಲಾಗಿದೆ.
ರೈತರಿಗೆ ಹಸಿರುಣಿಸುವ ನಿಟ್ಟಿನಲ್ಲಿ 19 ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಈ ಭಾಗದಲ್ಲಿ ನೀರಾವರಿ ಪ್ರದೇಶ ಮತ್ತಷ್ಟುಏರಿಕೆಯಾಗಿ ಕೃಷಿ ಕ್ಷೇತ್ರ ಹಿಗ್ಗಲಿದೆ. ಜತೆಗೆ ರೈತರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ.
- ನಿಖಿಲ್ ಕತ್ತಿ, ಶಾಸಕರು.
ಹುಕ್ಕೇರಿ ಕ್ಷೇತ್ರದಲ್ಲಿ ಹೊಸದಾಗಿ 19 ಕೆರೆಗಳಿಗೆ ಶೀಘ್ರವೇ ನೀರು ತುಂಬಿಸಲಾಗುವುದು. ಇದಕ್ಕಾಗಿ 42 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಸಮಗ್ರ ನೀರಾವರಿಗೆ ಆದ್ಯತೆ ನೀಡಿದ್ದು ಅನುಷ್ಠಾನಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ.
-ಗುರು ಬಸವರಾಜಯ್ಯ, ಇಇ ಸಣ್ಣ ನೀರಾವರಿ ಇಲಾಖೆ.