ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯದ ಜನರು ಬೇಸತ್ತಿದ್ದಾರೆ : ವಿಜಯೇಂದ್ರ

By Kannadaprabha News  |  First Published Jan 7, 2024, 10:50 AM IST

ಅಧಿಕಾರಕ್ಕೆ ಬಂದ 6 ತಿಂಗಳಿಗೆ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.


  ಮೈಸೂರು :  ಅಧಿಕಾರಕ್ಕೆ ಬಂದ 6 ತಿಂಗಳಿಗೆ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಗಾಡಿ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಪಂಕ್ಚರ್ ಆಗಿದೆ ಎಂದು ಲೇವಡಿ ಮಾಡಿದರು.

Tap to resize

Latest Videos

undefined

ಸಚಿವ ಅವರಿಗೆ ತಮ್ಮ ಸರ್ಕಾರದ ಆಡಳಿತ ವೈಖರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವೆನಿಸಿದೆ. ಹೀಗಾಗಿಯೇ ಅವರು ಜಾತಿವಾರು ಉಪಮುಖ್ಯಮಂತ್ರಿಗಳನ್ನು ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಅಧಿಕಾರಕ್ಕೆ ಬಂದ 7 ತಿಂಗಳಿಗೆ ದೇಶದಲ್ಲಿ ಯಾವುದಾದರೂ ಸರ್ಕಾರ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಅವರು ಕುಟುಕಿದರು.

28 ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಿಸಿ

ದೇಶದ ಜನತೆಗೆ ಮತ್ತೆ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಉತ್ತುಂಗಕ್ಕೇರಿರುವ ಮೋದಿಯವರ ಜನಪ್ರಿಯತೆಯನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಮತಗಳನ್ನಾಗಿ ಪರಿವರ್ತಿಸಬೇಕು. ವೀರ ಸೇನಾನಿಗಳಂತೆ ಹೋರಾಟ ನಡೆಸಿ ರಾಜ್ಯದ 28 ಸ್ಥಾನಗಳಲ್ಲೂ ಬಿಜೆಪಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಮಾಡಬೇಕು ಎಂದು ಅವರು ಕರೆ ನೀಡಿದರು.

ಪ್ರಧಾನಿ ಮೋದಿಯವರು ಸರ್ವವ್ಯಾಪ್ತಿ, ಸರ್ವರ ಸ್ಪರ್ಶ ಎಂಬಂತೆ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. 19 ಹಿಂದುಳಿದ ವರ್ಗಗಳಿಗೆ ನೇರವಾಗಿ ಸರ್ಕಾರದ ಅನುದಾನ ನೀಡುವ ಮೂಲಕ ಆ ವರ್ಗಗಳಿಗೆ ಆರ್ಥಿಕ ಶಕ್ತಿ ನೀಡಿ, ಅವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರಾಜಕಾರಣಿಯಾದವರು ಮುಂದಿನ ಚುನಾವಣೆ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ, ರಾಜಕೀಯ ತಜ್ಞರು ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ಅದೇ ರೀತಿ ಮೋದಿ ಅವರು ಈ ದೇಶದ ಭವಿಷ್ಯ, ಮುಂದಿನ ಪೀಳಿಗೆ ಬಗ್ಗೆ ಚಿಂತನೆ ನಡೆಸಿದ್ದಾರೆ. 2047ರ ವೇಳೆಗೆ ವಿಕಸಿತ ಭಾರತ, ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಚಿವರಾದ ಎಸ್.ಎ. ರಾಮದಾಸ್, ಎನ್. ಮಹೇಶ್, ಸಿ.ಎಚ್. ವಿಜಯಶಂಕರ್, ಮಾಜಿ ಶಾಸಕರಾದ ಎಲ್. ನಾಗೇಂದ್ರ, ಸಿದ್ದರಾಜು, ತೋಂಟದಾರ್ಯ, ಎಸ್. ಬಾಲರಾಜು, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಆರ್. ರಘು, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಮುಖಂಜರಾದ ಅನಿಲ್ ಥಾಮಸ್, ಎಲ್.ಆರ್. ಮಹದೇವಸ್ವಾಮಿ, ಎಚ್.ಜಿ. ಗಿರಿಧರ್, ವಾಣೀಶ್‌ ಕುವಾರ್, ಸೋಮಸುಂದರ್, ಜೋಗಿ ಮಂಜು, ಮಹೇಶ್, ಮಿರ್ಲೇ ಶ್ರೀನಿವಾಸಗೌಡ ಮೊದಲಾದವರು ಇದ್ದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗುರಿ ತಲುಪಲು ಮುಖಂಡರ ಮಾನಸಿಕ ಸ್ಥಿತಿ ಬದಲಾಗಬೇಕು. ಜಾತಿ, ವರ್ಗಗಳಿಗೆ ಸೀಮಿತವಾಗಿ ಯೋಚನೆ ಮಾಡದೆ, ಪಕ್ಷದ ಗೆಲುವಿಗಾಗಿ ಶಾಸಕರಂತೆ, ವೀರ ಸೇನಾನಿಗಳಂತೆ ಕೆಲಸ ಮಾಡಬೇಕು. ಪಕ್ಷದ ಬೇರನ್ನು ಗಟ್ಟಿ ಮಾಡಬೇಕು. ಆಗ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದಕ್ಕೆ ಸಹಾಯವಾಗುತ್ತದೆ.

- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

click me!