ತುಮಕೂರು - ವಾಸಿಸಲು ಸ್ವಂತ ಮನೆ ಕಟ್ಟಿಸಿಕೊಡಿ: ಜನಪ್ರತಿನಿಧಿಗಳ ಮುಂದೆ ವಿದ್ಯಾರ್ಥಿನಿ ಮನವಿ

By Kannadaprabha News  |  First Published Jan 7, 2024, 10:39 AM IST

 ನಮಗೆ ನಿವೇಶನವನ್ನು ನೀಡಿ ಮನೆಯನ್ನು ನಿರ್ಮಿಸಿಕೊಡಿ ಮತ್ತು ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಡಿ ಎಂದು ತರೂರು ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಮಕ್ಕಳ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಳು.


  ಶಿರಾ: ಸರ್ ನಮ್ಮ ತಂದೆ ತಾಯಿ ಇಬ್ಬರೂ ಮರಣ ಹೊಂದಿದ್ದಾರೆ, ಈ ಸಂಕಷ್ಟದ ನಡುವೆಯೂ ನಾವು ಶಿಕ್ಷಣವನ್ನು ಕಲಿಯಲು ಪ್ರಯತ್ನಿಸುತ್ತಿದ್ದೇವೆ. ಈ ಹಳ್ಳಿಯಲ್ಲಿ ವಾಸಮಾಡಲು ನಮಗೆ ಸ್ವಂತ ಮನೆಯಿಲ್ಲ. ಹಾಗಾಗಿ ನಮಗೆ ನಿವೇಶನವನ್ನು ನೀಡಿ ಮನೆಯನ್ನು ನಿರ್ಮಿಸಿಕೊಡಿ ಮತ್ತು ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಡಿ ಎಂದು ತರೂರು ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಮಕ್ಕಳ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಳು.

ತಾಲೂಕಿನ ತರೂರು ಗ್ರಾಮ ಪಂಚಾಯಿತಿ, ಚೈಲ್ಡ್ ರೈಟ್ ಟ್ರಸ್ಟ್ ಹಾಗೂ ಸಿಎಂಸಿಎ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿನಿ ಮಾತನಾಡಿದರು.

Latest Videos

undefined

ಗಂಜಲಗುಂಟೆ ಅಂಗನವಾಡಿ ಕಾರ್ಯಕರ್ತೆಯಾದ ಹೇಮಾ ಅವರು ಸಭೆಯಲ್ಲಿ ತಮ್ಮ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ, ಶಾಲೆಯ ಒಂದು ನಿರುಪಯುಕ್ತ ಕೊಠಡಿಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದೇವೆ. ಆ ಕೊಠಡಿಯು ಸಹ ಮಕ್ಕಳನ್ನು ಕೂರಿಸಲು ಅಪಾಯಕಾರಿಯಾಗಿದ್ದು, ಕೇಂದ್ರದ ಹೊರಗಡೆ ಮಕ್ಕಳಿಗೆ ಊಟ, ಪಾಠ ಎಲ್ಲವನ್ನು ಸಹ ನಡೆಸಲಾಗುತ್ತಿದೆ. ಇಲಾಖೆಯಿಂದ ಕಟ್ಟಡ ಕಟ್ಟಲು ಅನುಮೋದನೆ ಆಗಿದ್ದರೂ ಕೂಡ ಯಾವುದೇ ಜನಪ್ರತಿನಿಧಿಗಳು ಕಟ್ಟಡವನ್ನು ಕಟ್ಟಿಕೊಡಲು ಮುಂದೆ ಬರುತ್ತಿಲ್ಲ. ಇದರಿಂದ ಕೇಂದ್ರವನ್ನು ನಡೆಸಲು ಬಹಳ ಕಷ್ಟಕರವಾಗುತ್ತಿದೆ. ಕೂಡಲೇ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇಂದ್ರಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸಿ ಕೊಡಬೇಕೆಂದು ಕೇಳಿಕೊಂಡರು.

ಸಭೆಯಲ್ಲಿ ಮಕ್ಕಳು ತಮ್ಮ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವಂತೆ, ರಸ್ತೆಗಳನ್ನು ಸರಿಪಡಿಸುವಂತೆ, ಶಾಲೆಗೆ ನೀರನ್ನು ಪೂರೈಸುವಂತೆ, ಶಾಲಾ ಕೊಠಡಿಗಳನ್ನು ದುರಸ್ಥಿಗೊಳಿಸುವಂತೆ, ಆಟದ ಮೈದಾನವನ್ನು ಮತ್ತು ಕಾಂಪೌಂಡ್ ಒದಗಿಸುವಂತೆ, ಶೌಚಾಲಯವನ್ನು ನಿರ್ಮಿಸಿಕೊಡುವಂತೆ ಹಾಗೂ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಒಟ್ಟು ೯ ಶಾಲೆಗಳಿಂದ ೨೦೦ಕ್ಕೂ ಹೆಚ್ಚು ಮಕ್ಕಳು, ೫ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿ, ಒಟ್ಟು ೩೫ ಸಮಸ್ಯೆಗಳನ್ನು ಹೇಳಿಕೊಂಡರು. ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಹುಬೇಗ ಬಗೆಹರಿಸುವುದಾಗಿ ತಿಳಿಸಿದರು.

ಸಭೆಯನ್ನು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲಕ್ಷ್ಮೀ ಉದ್ಘಾಟಿಸಿ ಮಾತನಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಗ್ರಾಮ ಪಂಚಾಯತಿಯು ಬದ್ದವಾಗಿದ್ದು, ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ಶ್ರಮಿಸುತ್ತೇವೆ. ಈ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರಿಂದ ಪಂಚಾಯತಿಯಲ್ಲಿ ಕ್ರಿಯಾ ಯೋಜನೆ ಮಾಡಲು ಸಹಾಯಕವಾಯಿತು ಎಂದು ತಿಳಿಸಿದರು.

ಸಭೆಯಲ್ಲಿ ಮಕ್ಕಳ ಹಕ್ಕುಗಳ ಕಾರ್ಯಕರ್ತ ಮಂಜುನಾಥ್ ಅಮಲಗೊಂದಿ, ನೋಡಲ್ ಅಧಿಕಾರಿ ಮಂಜುಪ್ರಸಾದ್, ಅಭಿವೃದ್ಧಿ ಅಧಿಕಾರಿ ಹನುಮಂತರಾಯಪ್ಪ, ಶಿಕ್ಷಕರಾದ ಹನುಮಂತರಾಜು, ಸಿಆರ್‌ಪಿ ಸುರೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿ ಗೋಪಿನಾಥ್, ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸಿದ್ದೇಶ್ ಕೆ.ಎಸ್., ಗ್ರಾ.ಪಂ. ಸದಸ್ಯರಾದ ತಿಪ್ಪೇಸ್ವಾಮಿ, ನಾಗಣ್ಣ, ರಾಮಕ್ಕ, ಸಿಎಂಸಿಎ ಸ್ವಯಂಸೇವಕಿ ನವ್ಯಾ ಸೇರಿದಂತೆ ಹಲವರು ಹಾಜರಿದ್ದರು.

click me!