ಶಿಕ್ಷಣವೆಂಬುದು ಪ್ರತಿ ಹೆಣ್ಣು ಮಗುವಿನ ಬಾಳಿನಲ್ಲಿಯೂ ಬೆಳಕು ಇದ್ದಂತೆ, ಇಂದಿಗೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಈ ಬೆಳಕನ್ನು ಕಾಣಲು ಸಾಧ್ಯವಾಗಿಲ್ಲ. ನಿಮ್ಮ ಈ ಹೊಸ ಬದುಕಿಗೆ ಕಾರಣರಾದ ನಿಮ್ಮ ಪೋಷಕರು ಮತ್ತು ಶಾಲಾ, ಕಾಲೇಜು ಶಿಕ್ಷಕರನ್ನು ನೀವು ಮರೆಯುವಂತಿಲ್ಲ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.
ತುಮಕೂರು : ಶಿಕ್ಷಣವೆಂಬುದು ಪ್ರತಿ ಹೆಣ್ಣು ಮಗುವಿನ ಬಾಳಿನಲ್ಲಿಯೂ ಬೆಳಕು ಇದ್ದಂತೆ, ಇಂದಿಗೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಈ ಬೆಳಕನ್ನು ಕಾಣಲು ಸಾಧ್ಯವಾಗಿಲ್ಲ. ನಿಮ್ಮ ಈ ಹೊಸ ಬದುಕಿಗೆ ಕಾರಣರಾದ ನಿಮ್ಮ ಪೋಷಕರು ಮತ್ತು ಶಾಲಾ, ಕಾಲೇಜು ಶಿಕ್ಷಕರನ್ನು ನೀವು ಮರೆಯುವಂತಿಲ್ಲ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.
ನಗರದ ಸಿದ್ದಗಂಗಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜಿನ ವಾರ್ಷಿಕ ಚಟುವಟಿಕೆ ಸಂಸ್ಕೃತಿ 2023-24 ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವೆಂಬ ಬೆಳಕು ನಿಮ್ಮ ಬಾಳಿನದ್ದಕ್ಕೂ ಇರಬೇಕೆಂದರೆ ನೀವುಗಳು ಸತತ ಪರಿಶ್ರಮದ ಮೂಲಕ ಜ್ಞಾನವೆಂಬ ಬೆಳಕನ್ನು ಬಹಳ ಉನ್ನತ ಮಟ್ಟದಲ್ಲಿ ಪಡೆದುಕೊಂಡರೆ, ಇದಕ್ಕಿಂತ ಮಿಗಿಲಾದ ಮತ್ತೊಂದಿಲ್ಲ ಎಂದರು.
undefined
ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅಶೀರ್ವಚನ ನೀಡಿ, ಶಿಕ್ಷಣವೆಂಬುದು ಕೇವಲ ಬುದ್ದಿಯನ್ನು ಅರಳಿಸುವುದಲ್ಲ. ಬುದ್ದಿಯ ಜೊತೆಗೆ ಮನಸ್ಸು ಮತ್ತು ಹೃದಯವನ್ನು ಅರಳಿಸುವಂತದ್ದಾಗಬೇಕು. ಬುದ್ದಿವಂತಿಕೆಯ ಜೊತೆಗೆ, ಹೃದಯವಂತಿಕೆ, ಗುಣವಂತಿಕೆ ಇದ್ದರೆ ಹೆಚ್ಚು ಬೆಲೆ ಬರುತ್ತದೆ ಎಂದರು.
ನಾಗರಿಕತೆ ಮತ್ತು ಸಂಸ್ಕೃತಿ ಎರಡು ಪ್ರಮುಖ ವಿಷಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾಗರಿಕತೆ ನಾವು ಸಮಾಜದೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಸಿದರೆ, ಸಂಸ್ಕೃತಿ ನಮ್ಮೊಳಗೆ ನಾವು ಹೇಗೆ ವರ್ತಿಸಬೇಕೆಂಬುದನ್ನು ತಿಳಿಸುತ್ತದೆ. ಸಂಸ್ಕೃತಿ ಎಂಬುದು ಮಸುಕಾಗುತ್ತದೆಯೇನು ಎಂಬ ಭಾವನೆ ಮೂಡುತ್ತಿದೆ. ನೆಡೆ ನುಡಿ ಒಂದಾಗಿರುವುದು ಸಂಸ್ಕೃತಿ. ಅದು ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದರು.
ಸಿದ್ಧಗಂಗಾ ಪದವಿಪೂರ್ವ ಮಹಿಳಾ ಕಾಲೇಜಿನ ಸಂಸ್ಕೃತಿ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಕಾಲೇಜಿನ ಸಂಯೋಜಕರೇ ಹೇಳಿದಂತೆ ವರ್ಷದಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ, ಕ್ರೀಡೆ, ಕಲೆ, ಸಾಹಿತ್ಯ ಕುರಿತು ಸುಮಾರು ೨೩ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ, ನಿಮ್ಮಲ್ಲಿಯೇ ಹುದುಗಿರುವ ಪ್ರತಿಭೆಯನ್ನು ಹೊರತರಲು ವೇದಿಕೆ ಕಲ್ಪಿಸಿದ್ದಾರೆ. ನಿಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಇದು ಸಹಕಾರಿಯಾಗಲಿದೆ. ಇಂದು ಮಹಿಳೆಯರು ಸೇನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ಆಟೋಟಗಳು ಕೇವಲ ಸ್ಪರ್ಧೆಗಾಗಿ ಸಿಮೀತವಾಗದೆ, ನಿಮ್ಮಗಳ ದೈಹಿಕ ಮಾನಸಿಕ ಬೆಳವಣಿಗೆಗೂ ಬಳಸಿಕೊಳ್ಳಿ ಎಂದು ಸಿದ್ದಲಿಂಗ ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಪಿಯು ಕಾಲೇಜುಗಳ ಸಂಯೋಜನಾಧಿಕಾರಿ ಪ್ರೊ.ಜಿ.ಎಸ್. ರೇಣಕುಪ್ಪ ಮಾತನಾಡಿ, ಸಂಸ್ಕೃತಿ ಎಂಬ ಹೆಸರು ನೀಡಿ ಇಂದಿಗೆ ೨೪ ವರ್ಷ ತುಂಬಿದೆ. ಅಂದಿನಿಂದಲೂ ಎಲ್ಲಾ ವಿಭಾಗದಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ, ಪಠ್ಯೇತರ ಚಟವಟಿಕೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ ಎಲ್ಲಾ ಶಿಕ್ಷಕ ವೃಂದಕ್ಕೂ ಅಭಿನಂದನೆ ಸಲ್ಲಿಸುತ್ತೇನೆ. ಕಾಲೇಜಿನ ಶೇ.೫೦ಕ್ಕೂ ಹೆಚ್ಚು ಮಕ್ಕಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಿಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿದ್ದೀರ. ನೂರರಲ್ಲಿ ಒಂದಾಗದೆ, ನೂರರಲ್ಲಿ ಮೊದಲಿಗರಾಗಿ, ಇದು ನಿಮ್ಮಗೆ ಕೀರ್ತಿ, ಹಣ ಎಲ್ಲವನ್ನು ತಂದುಕೊಡುತ್ತದೆ ಎಂದು ಶುಭ ಹಾರೈಸಿದರು.
ಇದೇ ವೇಳೆ ಸಿದ್ಧಗಂಗಾ ಆಸ್ಪತ್ರೆಯ ಮಕ್ಕಳ ತಜ್ಞೆ ಹಾಗೂ ಗಾಯಕಿ ಡಾ. ಶ್ರಾವ್ಯಾ ಎಸ್. ರಾವ್ ಹಾಡುಗಳನ್ನು ಹೇಳಿ ರಂಜಿಸಿದರು. ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಚಂದ್ರಶೇಖರ್ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ.ಜಿ.ಎಸ್. ರೇಣುಕಪ್ಪ, ವೈದ್ಯೆ ಹಾಗೂ ಗಾಯಕಿ ಡಾ. ಶ್ರಾವ್ಯಾ ಎಸ್.ರಾವ್., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಸಂಸ್ಕೃತಿ ಕಾರ್ಯಕ್ರಮದ ಸಂಸಯೋಜಕ ಆರ್.ಸಿ. ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
ಪ್ರತಿ ದಿನ ಹೊಸದನ್ನು ಕಲಿಯಲು ನಿಮ್ಮ ಮನಸ್ಥಿತಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ನಾಳೆ ನೋಡೋಣ ಎಂಬ ಆಲಸ್ಯದಿಂದ ಬದುಕು ದುಸ್ತರವಾಗಲಿದೆ. ವಿ ಡೂ ಇಟ್ ಎಂಬ ದೃಢ ಸಂಕಲ್ಪವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ. ಮನೆಯವರ ಜೊತೆ, ಸಮಾಜವನ್ನು ಸಂಬಾಳಿಸುವ ಧೈರ್ಯವನ್ನು ಕಲಿತುಕೊಳ್ಳಿ, ನನ್ನ ಪ್ಲಸ್, ಮೈನಸ್ ಅರಿತುಕೊಳ್ಳುವ ಸ್ವಯಂ ಅವಲೋಕನದಿಂದ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯ.
ಶುಭ ಕಲ್ಯಾಣ್ ಜಿಲ್ಲಾಧಿಕಾರಿ
ಪಠ್ಯ ನಿಮಗೆ ಜ್ಞಾನ ನೀಡಿದರೆ, ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಯ ವಿಚಾರಗಳು ನಿಮ್ಮಲ್ಲಿ ಹೃದಯವಂತಿಕೆ, ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಹಾಗಾಗಿ ಇಂದಿನ ಶಿಕ್ಷಣದಲ್ಲಿ ಪಠ್ಯೇತರ ಚಟುವಟಿಕೆಗಳು ಕಲಿಕೆಯ ಅವಿಭಾಜ್ಯ ಅಂಗಗಳಾಗಿವೆ. ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಸಹಕಾರಿಯಾಗಿವೆ.
ಸಿದ್ದಲಿಂಗ ಸ್ವಾಮೀಜಿ ಸಿದ್ದಗಂಗಾ ಮಠಾಧ್ಯಕ್ಷ