ಕೆಲವೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ಬರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕೊನೆಯ ಬಜೆಟ್ ಮೇಲೆ ಜಿಲ್ಲೆಯ ಜನರ ನಿರೀಕ್ಷೆ ಕೂಡ ಸಾಕಷ್ಟಿತ್ತು. ಅದರಲ್ಲೂ ರಾಜ್ಯದಲ್ಲೇ ಎರಡನೇ ದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಈ ಬಜೆಟ್‌ನಲ್ಲಿ ಭರಪೂರ ಯೋಜನೆಗಳು ದೊರೆಯಲಿವೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಜಗದೀಶ ವಿರಕ್ತಮಠ
ಬೆಳಗಾವಿ (ಫೆ.18) : ಕೆಲವೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ಬರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕೊನೆಯ ಬಜೆಟ್ ಮೇಲೆ ಜಿಲ್ಲೆಯ ಜನರ ನಿರೀಕ್ಷೆ ಕೂಡ ಸಾಕಷ್ಟಿತ್ತು. ಅದರಲ್ಲೂ ರಾಜ್ಯದಲ್ಲೇ ಎರಡನೇ ದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಈ ಬಜೆಟ್‌ನಲ್ಲಿ ಭರಪೂರ ಯೋಜನೆಗಳು ದೊರೆಯಲಿವೆ ಎಂಬ ನಿರೀಕ್ಷೆ ಇತ್ತು. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಹಳೇ ಹಳಿಯ ಮೇಲೆ ಹೊಸ ರೈಲು ಓಡಿಸಿದಂತೆ ಹಳೇ ಯೋಜನೆಗಳನ್ನೇ ಪ್ರಸ್ತಾಪಿಸಿ ಹೊಸ ಭರವಸೆ ಮೂಡಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಬಜೆಟ್ ಕುಂದಾನಗರಿಯ ಜನರಿಗೆ ಭಾರೀ ನಿರಾಶೆ ಮೂಡಿಸಿದೆ.
ದೊಡ್ಡ ಜಿಲ್ಲೆಯಾದ ಬೆಳಗಾವಿ(Belagavi)ಗೆ ಹೆಚ್ಚಿನ ಯೋಜನೆಗಳು ಹಾಗೂ ಉತ್ತರ ಕರ್ನಾಟಕ(North Karnataka)ಭಾಗದವರೇ ಮುಖ್ಯಮಂತ್ರಿಯಾಗಿರುವುದರ ಜತೆಗೆ ಬಿಜೆಪಿಯ ಹೆಚ್ಚಿನ ಸಂಖ್ಯೆಯ ಶಾಸಕರಿರುವುದರಿಂದ ಈ ಸರ್ಕಾರದ ಅವಧಿಯ ಕೊನೆಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ವಿಶೇಷ ಪ್ಯಾಕೇಜ್ ಜತೆಗೆ, ಕೈಗಾರಿಕೆಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಹೊಂದಿದ್ದರು. ಆದರೆ ಈ ಭಾಗದ ಜನರು ರಾಜ್ಯ ಸರ್ಕಾರ ಮೇಲಿಟ್ಟಿರುವ ನಿರೀಕ್ಷೆ ಹುಸಿಯಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಬೆರಳೆಣಿಕೆ ಯೋಜನೆಗಳನ್ನು ಹೊರತುಪಡಿಸಿ ಹಳೆಯ ಯೋಜನೆಗಳನ್ನೇ ಪ್ರಸ್ತಾಪಿಸಿರುವುದು ಈ ಭಾಗದ ಜನತೆಯ ಜತೆಗೆ ವಿರೋಧ ಪಕ್ಷದವರ ಟೀಕೆಗೂ ಗುರಿಯಾಗಿದೆ.
Karnataka Budget 2023: ಹಂಪಿ ಪ್ರವಾಸೋದ್ಯಮಕ್ಕೆ ಬಜೆಟ್ ಬಲ!
ಏನೇನು ಸಿಕ್ಕಿದೆ?:
ಚನ್ನಮ್ಮನ ಕಿತ್ತೂರು ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗಳನ್ನು ಈ ಸಾಲಿನಲ್ಲಿ ಪೂರ್ಣಗೊಳಿಸುವುದು, ಬೆಳಗಾವಿ, ಗದಗ, ಧಾರವಾಡ ಜಿಲ್ಲೆಯ ಹಲವು ದಶಕಗಳ ಬೇಡಿಕೆಯಾಗಿರುವ ಕಳಸಾ ಬಂಡೂರಿ ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಲು .1000 ಕೋಟಿ ನೀಡುವುದರ ಜತೆಗೆ ಈ ಯೋಜನೆಗೆ ಅನುಷ್ಠಾನಕ್ಕೆ ತ್ವರಿತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ ಖಾನಾಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನಾಗಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು. ಅಲ್ಲದೇ ಬೈಲಹೊಂಗಲ ತಾಲೂಕಿನಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಕಾಮಗಾರಿಗಳನ್ನು .217 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಿ, ಸೈನಿಕ್ ಸ್ಕೂಲ… ಸೊಸೈಟಿ ಸಹಯೋಗದೊಂದಿಗೆ ಪ್ರಾರಂಭ ಮಾಡಲಾಗಿದ್ದು, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗಾಗಿ ಹಿಂದಿನ ಸರ್ಕಾರಗಳು .54.14 ಕೋಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ .261.53 ಕೋಟಿ ಒದಗಿಸಿ ನೀಲನಕ್ಷೆಯಂತೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ತಾತ್ಕಾಲಿಕ ವಸತಿ ಗೃಹ ಸೇರಿದಂತೆ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುವುದು. ನಿರೀಕ್ಷೆಯಂತೆ ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಬೆಳಗಾವಿಯ ಕಣಗಲಾದಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಬಹು ನಿರೀಕ್ಷಿತ ಧಾರವಾಡ-ಕಿತ್ತೂರು- ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ನಿರ್ಮಾಣ ಮಾಡಲು ಭೂಸ್ವಾಧೀನಕ್ಕಾಗಿ .150 ಕೋಟಿ ಹಣ ಮೀಸಲಿಡುವುದು ಹಾಗೂ ಸ್ಮಾರ್ಚ್ ಸಿಟಿ ಯೋಜನೆ ಅಡಿಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ನೆರವು ಒದಗಿಸಲಾಗುವುದು ಘೋಷಣೆ ಮಾಡಿದ್ದಾರೆ.
Karnataka Budget 2023: ರಾಜ್ಯ ಬಜೆಟ್-ಗದಗ ಜಿಲ್ಲೆಗೆ ಕಬಿ ಖುಷಿ-ಕಬಿ ಗಮ್!
ಒಟ್ಟಿನಲ್ಲಿ ನೂರಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಕುಂದಾನಗರಿಯ ಜನರಿಗೆ ಅಷ್ಟೊಂದು ನಿರೀಕ್ಷೆಗಳು ಸಾಕಾರಗೊಂಡಿಲ್ಲ. ಹೀಗಾಗಿ ಈ ಬಜೆಟ್ ಕೂಡಾ ಜನರ ನಿರೀಕ್ಷೆ ಹುಸಿ ಮಾಡಿದೆ.