Karnataka Budget 2023: ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರು. ವಿಶೇಷ ಪ್ಯಾಕೇಜ್‌!

By Kannadaprabha NewsFirst Published Feb 18, 2023, 12:53 PM IST
Highlights

ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಶುಕ್ರವಾರ ರಾಜ್ಯ ಬಜೆಟ್‌ ಮಂಡನೆ ಮಾಡಿದ್ದು, ಕೊಡಗಿನ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರುಪಾಯಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ (ಫೆ.18) : ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಶುಕ್ರವಾರ ರಾಜ್ಯ ಬಜೆಟ್‌ ಮಂಡನೆ ಮಾಡಿದ್ದು, ಕೊಡಗಿನ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರುಪಾಯಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ.

Latest Videos

ಅತಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಕೊಡಗಿ(Kodagu)ನ ಬಹುತೇಕ ರಸ್ತೆಗಳು ಹಾಳಾಗಿವೆ. ಇದೀಗ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ(Kodagu road development)ಗೆ ವಿಶೇಷ ಪ್ಯಾಕೇಜ್‌(Special package ) ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ರಸ್ತೆಗಳ ಗುಣಮಟ್ಟಸುಧಾರಿಸುವ ನಿರೀಕ್ಷೆಯಿದೆ.

ಬಜೆಟ್‌ನಲ್ಲಿ ಕೊಡಗಿಗೆ ಸಿಕ್ಕ ಕೊಡುಗೆಗಳು:

ಮಾನವ - ವನ್ಯಪ್ರಾಣಿ ಸಂಘರ್ಷದಿಂದ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮೃತಪಡುತ್ತಾರೆ. ಹುಲಿ ದಾಳಿಯಿಂದ ಇತ್ತೀಚಿಗಷ್ಟೇ ಇಬ್ಬರು ಬಲಿಯಾಗಿದ್ದರು. ಇದೀಗ ಸರ್ಕಾರ ಮಾನವ-ವನ್ಯಪ್ರಾಣಿಯಿಂದ ಸಂಭವಿಸುವ ಮಾನವ ಹಾನಿಗೆ ನೀಡುವ ಪರಿಹಾರವನ್ನು 7.50 ಲಕ್ಷದಿಂದ 15 ಲಕ್ಷ ರುಪಾಯಿಗೆ ಏರಿಕೆ ಮಾಡಲಾಗಿದೆ. ಬೆಳೆಹಾನಿ ಪ್ರಕರಣಗಳಲ್ಲಿ ನೀಡುತ್ತಿರುವ ಪರಿಹಾರವನ್ನು ದ್ವಿಗುಣಗೊಳಿಸಿರುವುದಾಗಿ ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ಮಡಿಕೇರಿಯಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಭರವಸೆ ನೀಡಿದ್ದಾರೆ.

ಪಶ್ಚಿಮಘಟ್ಟಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ರಭಸದಿಂದ ಹರಿಯುವ ಹಳ್ಳ ತೊರೆಗಳನ್ನು ಸುರಕ್ಷಿತವಾಗಿ ದಾಟಲು ಹಾಗೂ ಸಂಪರ್ಕ ರಹಿತ ಜನ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು 500 ಕಾಲು ಸಂಕಗಳ ನಿರ್ಮಾಣ ಕಾಮಗಾರಿಯನ್ನು 250 ಕೋಟಿ ವೆಚ್ಚದಲ್ಲಿ ಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ.

ಒಂದೂವರೆ ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ: ಚಿನ್ನದ ವ್ಯಾಪಾರಿಯ ಸಾಮಾಜಿಕ ಕಳಕಳಿ

ಒಲಿಂಪಿP್ಸ… ಮತ್ತು ಇತರೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆಯುವ ಉದ್ದೇಶಕ್ಕೆ ಅತ್ಯುನ್ನತ ತರಬೇತಿ ಹಾಗೂ ಸಲಕರಣೆಯನ್ನು ಪಡೆಯಲು ಅನುಕೂಲವಾಗುವಂತೆ 50 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಒಲಿಂಪಿಕ್‌ ಕನಸಿನ ಯೋಜನಾ ನಿಧಿ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಈ ಯೋಜನೆಯಡಿ 12ರಿಂದ 19 ವರ್ಷ ವಯೋಮಾನದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಯುವ ಪ್ರತಿಭಾವಂತ ಕ್ರೀಡಾಪಟುಗಳ ಪ್ರಾಯೋಜನೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಜಿಲ್ಲೆಯ ಕ್ರೀಡಾಪಟುಗಳು ಇದರ ಸದುಪಯೋಗ ಪಡೆಯಲಿದ್ದಾರೆ.

ಮಾನವ- ವನ್ಯಪ್ರಾಣಿ ಸಂಘರ್ಷವನ್ನು ನಿಯಂತ್ರಿಸಲು, ಸಂಘರ್ಷ ಕ್ಷೇತ್ರದಿಂದ ಸೆರೆಹಿಡಿಯಲ್ಪಟ್ಟವನ್ಯಪ್ರಾಣಿಗಳನ್ನು ಅವುಗಳ, ನೈಸರ್ಗಿಕ ಆವಾಸ ಸ್ಥಾನ ಪ್ರದೇಶಗಳನ್ನು ಗುರುತಿಸಿ ಬಿಡುಗಡೆ ಮಾಡಲು ಭದ್ರಾ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಕಾಡಾನೆ ಕಾರ್ಯಪಡೆಯನ್ನು ರಚಿಸಲಾಗಿದೆ. ಮಾನವ- ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ 72 ಕಿ.ಮೀ. ರೈಲ್ವೆ ಬ್ಯಾರಿಕೇಡ್‌, 36 ಕಿ.ಮೀ. ಆನೆ ನಿರೋಧಕ ಕಂದಕ, 186 ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 2022- 23ನೇ ಸಾಲಿನಲ್ಲಿ ಈ ಕಾಮಗಾರಿಗಳಿಗೆ 150 ಕೋಟಿ ರುಪಾಯಿ ಅನುದಾನ ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾಮಗಾರಿ ನಡೆಯುವ ನಿರೀಕ್ಷೆಯಿದೆ.

ರಾಜ್ಯದಲ್ಲಿ 7 ನೂತನ ವಿಶ್ವ ವಿದ್ಯಾನಿಲಯಗಳನ್ನು ಆರಂಭಿಸಲಾಗಿದ್ದು, ಕೊಡಗಿನಲ್ಲೂ ಕೂಡ ಅಧಿಕೃತವಾಗಿ ವಿಶ್ವವಿದ್ಯಾನಿಲಯ ಆರಂಭಿಸಿರುವ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ.

ಪ್ರವಾಸೋದ್ಯಮಕ್ಕೆ ಅನುದಾನವಿಲ್ಲ!

ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಸ್ವಿಜರ್‌ಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಚಿಕ್ಕಮಗಳೂರು ಉತ್ಸವ(Chikkamagaluru Utsav)ದಲ್ಲಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ(CM Basavaraj Bommai) ಅವರು, ಬಜೆಟ್‌ನಲ್ಲಿ ಕೊಡಗಿನ ಪ್ರವಾಸೋದ್ಯಮ(Kodagu Tourism)ಕ್ಕೆ ಯಾವುದೇ ವಿಶೇಷ ಯೋಜನೆ ಹಾಗೂ ಅನುದಾನ ಘೋಷಿಸಿಲ್ಲ. ಕೊಡಗು ಜಿಲ್ಲೆ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುತ್ತದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಯಾವುದೇ ವಿಶೇಷ ಯೋಜನೆ ಇಲ್ಲ. ನೂತನವಾಗಿ ಘೋಷಣೆಯಾಗಿರುವ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕಿಗೆ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಜಿಲ್ಲೆಯ ಶಾಸಕರಾದ ಅಪ್ಪಚ್ಚು ರಂಜನ್‌ ಹಾಗೂ ಕೆ.ಜಿ. ಬೋಪಯ್ಯ ಅವರು ಮುಖ್ಯಮಂತ್ರಿಗಳಿಗೆ ಮೂರು ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದ್ದರು. ಅದರಲ್ಲಿ ಮುಖ್ಯಮಂತ್ರಿಗಳು ರಸ್ತೆಗೆ ರು.100 ಕೋಟಿ ವಿಶೇಷ ಪ್ಯಾಕೇಜ್‌ ಮಾತ್ರ ಘೋಷಿಸಿದ್ದಾರೆ.

ಜನಪ್ರಿಯಗಿಂತ ಜನಪರ ಬಜೆಟ್‌ ಮಂಡನೆ: ಮಹೇಶ್‌ ಜೈನಿ

ಮಡಿಕೇರಿ: ಎಲ್ಲ ಕ್ಷೇತ್ರ ಮತ್ತು ಎಲ್ಲ ವರ್ಗದ ಜನರಿಗೂ ತೃಪ್ತಿಯಾಗಬಲ್ಲ ಅದ್ಭುತವಾದ ಬಜೆಟ್‌ನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮಂಡಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್‌ ಜೈನಿ ತಿಳಿಸಿದ್ದಾರೆ.

ಕೊಡಗಿನ ಶಾಸಕರ ಮನವಿಗೆ ಸ್ಪಂದಿಸಿ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 100 ಕೋಟಿ ರು. ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು, ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಹಾಗೂ ಕಾರ್ಮಿಕ ವರ್ಗಕ್ಕೆ ಬರಪೂರ ಕೊಡುಗೆಗಳನ್ನು ನೀಡಿದ್ದಾರೆ. ಕಿಸಾನ್‌ ಕಾರ್ಡ್‌ ಹೊಂದಿರುವ ರೈತರಿಗೆ ಭೂಸಿರಿ ಯೋಜನೆಯಡಿ ವಾರ್ಷಿಕ 10 ಸಾವಿರ ರು., ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದಿಂದ 5 ಲಕ್ಷ ರು.ವರೆಗೆ ರೈತರಿಗೆ ಸಾಲ, ಆಕಸ್ಮಿಕವಾಗಿ ಮೃತಪಡುವ ರೈತರಿಗೆ ಜೀವನ ಜ್ಯೋತಿ ವಿಮೆಯಡಿ 2 ಲಕ್ಷ ರು. ನೆರವು, ಕೃಷಿ ಯಂತ್ರೋಕರಣಗಳಿಗೆ ಆರ್ಥಿಕ ನೆರವು, ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌, ಅಂಗನವಾಡಿ ಕಾರ್ಯಕರ್ತರಿಗೆ 50 ಸಾವಿರ ರು. ಸಹಾಯಧನ, ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಸೇರಿದಂತೆ ಅನೇಕ ಕೊಡುಗೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಪರಿಶಿಷ್ಟಜಾತಿ, ಪಂಗಡ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ 10 ಸಾವಿರ ಮಂದಿಗೆ ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ನೇಮಕಾತಿ ಹೊಂದಲು ಉಚಿತ ತರಬೇತಿ ನೀಡಲು ಮುಂದಾಗಿರುವುದು ಸರ್ಕಾರದ ಹೆಗ್ಗಳಿಕೆಯಾಗಿದೆ. ಯುವ ಸಮೂಹ ಸೇರಿದಂತೆ ಎಲ್ಲ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಿರುವ ಜನಪ್ರಿಯ ಬಜೆಟ್‌ ಇದಾಗಿದೆ ಎಂದು ಮಹೇಶ್‌ ಜೈನಿ(Mahesh jaini) ತಿಳಿಸಿದ್ದಾರೆ.

ಅಭಿವೃದ್ಧಿ ಪಥದ ನವ ಕರ್ನಾಟಕ ನಿರ್ಮಾಣದ ಬಜೆಟ್‌: ತೇಲಪಂಡ ಶಿವಕುಮಾರ್‌ ನಾಣಯ್ಯ

ಮಡಿಕೇರಿ: ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್‌ನ್ನು ಮಂಡಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ನವ ಕರ್ನಾಟಕ ನಿರ್ಮಾಣದ ಬಜೆಟ್‌ ನೀಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ತೇಲಪಂಡ ಶಿವಕುಮಾರ್‌ ನಾಣಯ್ಯ ತಿಳಿಸಿದ್ದಾರೆ.

 

Kodagu: ಜಮ್ಮಾಬಾಣೆ ಲೀಜ್ ಗೆ ಕೊಡುತ್ತೇವೆಂದ ಆರ್‌.ಅಶೋಕ್ ವಿರುದ್ದ ಜಮ್ಮಾ ಹಿಡುವಳಿದಾರರ ಆಕ್ರೋಶ

ಕೊಡಗು ಜಿಲ್ಲೆಗೆ 100 ಕೋಟಿ ರು.ಗಳ ವಿಶೇಷ ಪ್ಯಾಕೇಜ್‌ ನೀಡಿರುವುದು ಸ್ವಾಗತಾರ್ಹ. ಶಿಕ್ಷಣಕ್ಕೆ ಒತ್ತು ನೀಡಿರುವ ಬಜೆಟ್‌ ರಾಜ್ಯದ ಗ್ರಾಮೀಣ ಪ್ರತಿಭೆಗಳಿಗೆ ಪೋ›ತ್ಸಾಹ ನೀಡಿದೆ. ‘ಹಳ್ಳಿ ಮುತ್ತು’ ಯೋಜನೆಯಡಿ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ಮುಂದಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಆರೋಗ್ಯ ಕೇಂದ್ರಗಳಿಗೆ ವಿನೂತನ ಉಪಕರಣಗಳನ್ನು ನೀಡಲು ನಿರ್ಧರಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗೆ ಸರ್ವ ಜನರ ವಿಕಾಸ ಮತ್ತು ಅಭ್ಯುದಯಕ್ಕೆ ನೆರವಾಗಬಲ್ಲ ಬಜೆಟ್‌ ಎನ್ನುವುದು ಸಾಬೀತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

click me!