ರಾಜ್ಯ ಬಿಜೆಪಿ ಸರ್ಕಾರದ ಕೊನೆ ಬಜೆಟ್ ಜಿಲ್ಲೆ ಪಾಲಿಗೆ ಕಹಿಯಾಗಿ ಮಾರ್ಪಟ್ಟಿದೆ. ಸ್ಥಳೀಯ ಜನರು ಬೇಡಿದ್ದು ಒಂದು, ಸರ್ಕಾರ ನೀಡಿದ್ದು ಮತ್ತೊಂದು. ಇದರಿಂದಾಗಿ ನಾಲ್ಕು ವರ್ಷಗಳಿಂದ ಸರ್ಕಾರ ಜಿಲ್ಲೆಗೆ ಮಾಡುತ್ತಲೆಯೇ ಬಂದಿರುವ ಅನ್ಯಾಯ, ಮೋಸ, ತಾರತಮ್ಯ ಧೋರಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊನೆ ಬಜೆಟ್ನಲ್ಲಿಯೂ ಸಹ ಮುಂದುವರೆಸಿದ್ದಾರೆ ಎಂದು ಸಾರ್ವಜನಿಕರಿಂದ ತೀವ್ರ ಅಸಮಧಾನ ವ್ಯಕ್ತವಾಗುತ್ತಿದೆ.
ರಾಮಕೃಷ್ಣ ದಾಸರಿ
ರಾಯಚೂರು (ಫೆ.18) :\ ರಾಜ್ಯ ಬಿಜೆಪಿ ಸರ್ಕಾರದ ಕೊನೆ ಬಜೆಟ್ ಜಿಲ್ಲೆ ಪಾಲಿಗೆ ಕಹಿಯಾಗಿ ಮಾರ್ಪಟ್ಟಿದೆ. ಸ್ಥಳೀಯ ಜನರು ಬೇಡಿದ್ದು ಒಂದು, ಸರ್ಕಾರ ನೀಡಿದ್ದು ಮತ್ತೊಂದು. ಇದರಿಂದಾಗಿ ನಾಲ್ಕು ವರ್ಷಗಳಿಂದ ಸರ್ಕಾರ ಜಿಲ್ಲೆಗೆ ಮಾಡುತ್ತಲೆಯೇ ಬಂದಿರುವ ಅನ್ಯಾಯ, ಮೋಸ, ತಾರತಮ್ಯ ಧೋರಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊನೆ ಬಜೆಟ್ನಲ್ಲಿಯೂ ಸಹ ಮುಂದುವರೆಸಿದ್ದಾರೆ ಎಂದು ಸಾರ್ವಜನಿಕರಿಂದ ತೀವ್ರ ಅಸಮಧಾನ ವ್ಯಕ್ತವಾಗುತ್ತಿದೆ.
ಕೇಳಿದ್ದೊಂದು ನೀಡಿದ್ದೊಂದು:
ಜಿಲ್ಲೆಗೆ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIMS) ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕಳೆದ 281 ದಿನಗಳಿಂದ ನಿರಂತರ ಧರಣಿ ನಡೆಸಲಾಗುತ್ತಿದೆ. ಇದರ ಜೊತೆಗೆ 31 ದಿನಗಳಿಂದ ಸರದಿ ಉಪವಾಸವನ್ನು ಸಹ ಕೈಗೊಳ್ಳುತ್ತಾ ಬರಲಾಗಿದೆ. ಜಿಲ್ಲೆಗೆ ಎರಡು ಸಲ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai), ಸಚಿವರು, ಶಾಸಕರು ಜಿಲ್ಲೆಗೆ ಏಮ್ಸ್ ಕೊಡುವುದಾಗಿ ಭರವಸೆಯ ಮಾತುಗಳನ್ನಾಡಿ ಹೋಗಿದ್ದರು. ಆದರೆ, ಇದೀಗ ಬಜೆಟ್‌ನಲ್ಲಿ ಏಮ್ಸ್ ಮಾದರಿ ಆಸ್ಪತ್ರೆಯನ್ನು ಘೋಷಣೆ ಮಾಡಿದ್ದಾರೆ. ಇದಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರವು ಜಿಲ್ಲೆಗೆ ಮತ್ತೊಮ್ಮೆ ಬಹುದೊಡ್ಡ ಮೋಸ ಮಾಡಲು ಹೊರಟಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಯಚೂರು: ವಿದ್ಯಾರ್ಥಿಗಳ ಪ್ರತಿಭಟನೆಗೆ ಬ್ರೇಕ್ ಹಾಕಲು ಕೃಷಿ ವಿವಿ ಹೊಸ ಪ್ಲಾನ್..!
ಜಿಲ್ಲೆ ಹೊಸ ರಾಯಚೂರು ವಿಶ್ವವಿದ್ಯಾಲಯ(Raichur University)ಕ್ಕೆ 135 ಕೋಟಿ ರು. ನೀಡಬೇಕು ಎನ್ನುವ ಪ್ರಸ್ತಾವನೆಗೆ ಬಜೆಟ್‌ನಲ್ಲಿ ಯಾವುದೇ ಮನ್ನಣೆ ಸಿಕ್ಕಿಲ್ಲ. ಮೆಗಾ ಜವಳಿ ಪಾರ್ಕ್(Mega Textile Park) ಘೋಷಿಸಿರುವುದು ಜಿಲ್ಲೆ ಜನರಿಗೆ ಕೊಂಚ ಸಮಾಧಾನ ನೀಡಿದೆ. ಇದರ ಜೊತೆಗೆ ರಾಯಚೂರು ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಮಹಾನಗರ ಪಾಲಿಕೆಯನ್ನಾಗಿ ಮಾಡುವುದಕ್ಕಾಗಿ ಇರುವಂತಹ ಮಾನದಂಡಗಳನ್ನು ಪರಿಶೀಲಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.
ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸೀಗಡಿ ಕೃಷಿ ಕ್ಲಸ್ಟರ್ಗಳನ್ನು ಸ್ಥಾಪಿಸುವುದು, ಮುನಿರಾಬಾದ್-ಗಿಣಿಗೇರಾ ರಾಯಚೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ರು. ಮೀಸಲು ನೀಡಿರುವುದು, ಪ್ರಸಕ್ತ ಸಾಲಿನಲ್ಲಿ ರಾಯಚೂರಿನ ವಿವಿಧ ಕರೆಗಳನ್ನು ಭರ್ತಿ ಮಾಡುವ ಯೋಜನೆಯನ್ನು ಪೂರ್ಣಗೊಳಿಸುವುದು ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸುವುದು ಅಷ್ಟೇ ಅಲ್ಲದೇ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿರುವ ಶಾಲೆಯಿಂದ ಹೊರಗುಳಿದ 14-18 ವರ್ಷದ ಪ್ರಾಯ ಪೂರ್ವ ಬಾಲಕಿಯರಿಗೆ, ಪೂರಕ ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು ಎಲ್ಲ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ವಿಸ್ತರಿಸಿರುವುದರ ಕುರಿತು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ವಿಶೇಷವಾದ ಕೊಡುಗೆ ಏನು ಸಿಕ್ಕಿಲ್ಲ. ಜಿಲ್ಲೆ ಜನರ ಬೇಡಿಕೆಗಳಿಗೆ ಸ್ಪಂದಿಸದೇ ಅನಗತ್ಯವಾದ ಕಾಮಗಾರಿ, ಯೋಜನೆಗಳನ್ನು ಬಲವಂತವಾಗಿ ಹೇರಿದಂತಿದೆ.
ಬಜೆಟ್ ಯಾರು ಏನು ಹೇಳಿದ್ರು?:
ಅತ್ಯುತ್ತಮ ಮಾದರಿ ಬಜೆಟ್
ಬಜೆಟ್ ಒಂದು ಅತ್ಯುತ್ತಮ ಬಜೆಟ್ಟಾಗಿದ್ದು, ಮುಖ್ಯವಾಗಿ ರೈತರು, ಮಹಿಳೆಯರು ವಿದ್ಯಾರ್ಥಿಗಳು ಹಾಗೂ ಬಡ ಕೂಲಿ ಕಾರ್ಮಿಕರ, ಹಿಂದುಳಿದ ವರ್ಗಗಳ ಮತ್ತು ದಲಿತರ ಏಳಿಗೆ ಗಮನದಲ್ಲಿಟ್ಟುಕೊಂಡು ಹಾಗೂ ನೀರಾವರಿ ಆರೋಗ್ಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಮಂಡಿಸಿದ ಈ ಬಜೆಟ್ ತುಂಬಾ ಉಪಯುಕ್ತವಾಗಿರುತ್ತದೆ. ರಾಯಚೂರು ಜಿಲ್ಲೆಗೆ, ಮೆಗಾ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ, ಮುನಿರಾಬಾದ್ ಗಿಣಿಗೆರ ರೈಲ್ವೆಗಾಗಿ 150 ಕೋಟಿ ರು. ಮೀಸಲು ಸ್ವಾಗತಾರ್ಹ. ಒಟ್ಟಾರೆ ಇದೊಂದು ಮಾದರಿಯ ಅತ್ಯುತ್ತಮ ಬಜೆಟ್ ಆಗಿರುತ್ತದೆ.
ರಾಜಾ ಅಮರೇಶ್ವರ ನಾಯಕ್, ಲೋಕಸಭಾ ಸದಸ್ಯರು, ರಾಯಚೂರು
ಏಮ್ಸ್ ಮಾದರಿ ಘೋಷಣೆ ನಿರಾಶದಾಯಕ
ನಿರಾಶದಾಯಕ ಬಜೆಟ್, ಜಿಲ್ಲೆಗೆ ಏಮ್ಸ್ ಕೊಡುವುದಾಗಿ ಅಥವಾ ನೀಡುವುದಿಲ್ಲ ಎಂದು ಹೇಳಬೇಕು. ಅದÜನ್ನು ಬಿಟ್ಟು ಎಲ್ಲಿಯೂ ಇಲ್ಲದ ಏಮ್ಸ್ ಮಾದರಿಯನ್ನು ಘೋಷಣೆ ಮಾಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಉತ್ತಮ ಬಜೆಟ್ ಮಂಡನೆ ಮಾಡುವ ಅವಕಾಶವಿದ್ದರು ಸಹ ಬಿಜೆಪಿ ಸರ್ಕಾರ ಅದನ್ನು ಮಾಡಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಅದರಲ್ಲಿಯೂ ರಾಯಚೂರು ಜಿಲ್ಲೆಗೆ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ, ಅನ್ಯಾಯದ ವರ್ತನೆಯು ಈ ಬಜೆಟ್ನಲ್ಲಿಯೂ ಸಹ ಮುಂದುವರೆದಿದೆ.
ಬಸನಗೌಡ ದದ್ದಲ್, ಗ್ರಾಮೀಣ ಶಾಸಕ ರಾಯಚೂರು
ಜಿಲ್ಲೆಗೆ ಏಮ್ಸ್ ಸ್ಥಾಪನೆ, ವಚನ ಭ್ರಷ್ಟ
ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುತ್ತಾರೆ ಎಂಬ ನಿರೀಕ್ಷೆಯನ್ನು ಜಿಲ್ಲೆಯ ಜನರ ಹೊಂದಿರುವ ವಿಶ್ವಾಸವನ್ನು ಹುಸಿಯಾಗಿದೆ. ರಾಜ್ಯ ಸರ್ಕಾರ 281 ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಹೋರಾಟ ಹಾಗೂ 31 ದಿನಗಳಿಂದ ಮಾಡುತ್ತಿರುವ ಉಪವಾಸ ಸತ್ಯಾಗ್ರಹ ಸೇರಿ ವಿವಿಧ ಶಿಕ್ಷಣ ಸಂಸ್ಥೆಗಳು ಮಾಡಿದ್ದ ಹೋರಾಟವನ್ನು ನಿರ್ಲಕ್ಷ್ಯ ವಹಿಸಿ, ಏಮ್ಸ್ ಮಾದರಿಯ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿ ಸರ್ಕಾರ ವಚನ ಭ್ರಷ್ಟವಾಗಿದೆ.
ಎನ್.ಎಸ್ ಬೋಸರಾಜು, ಎಐಸಿಸಿ ಕಾರ್ಯದರ್ಶಿ
ಜನಸಾಮಾನ್ಯರಿಗೆ ಮೋಸದ ಬಜೆಟ್
ರೈತರು ಹಾಗೂ ಜನಸಾಮಾನ್ಯರ ಕಣ್ಣಿಗೆ ಮಣ್ಣೆರಿಚುವ ಬಜೆಟ್ನ್ನು ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದಾರೆ. ರೈತರಿಗೆ ಸಾಲ ಪ್ರಮಾಣವನ್ನು ಹೆಚ್ಚಿಸಿದ್ದು ಯಾವ ಬೆಳೆಗೆ ಎಷ್ಟುಎನ್ನುವ ಸ್ಪಷ್ಟತೆಯಿಲ್ಲ. ಕಳೆದ ಮೂರು ವರ್ಷಗಳಿಂದ ನವಲಿ ಸಮಾಂತರ ಜಲಾಶಯದ ಬಗ್ಗೆ ಬಜೆಟ್‌ನಲ್ಲಿ ಹೆಸರನ್ನು ಪ್ರಸ್ತಾಪಿಸುತ್ತಾ ಬಂದಿದ್ದಾರೆಯೇ ಹೊರತು ಅದನ್ನು ಅನುಷ್ಠಾನಕ್ಕೆ ತರುವ ಪ್ರಮಾಣಿಕ ಪ್ರಯತ್ನವನ್ನು ಯಾರು ಮಾಡಿಲ್ಲ. ಒಟ್ಟಿನಲ್ಲಿ ಇದು ಜನರ-ರೈತರಲ್ಲಿ ಅವಿಶ್ವಾಸವನ್ನು ಮೂಡಿಸುವ ಬಜೆಟ್ಟಾಗಿದೆ.
ಚಾಮರಸ ಮಾಲಿಪಾಟೀಲ್, ರಾಜ್ಯ ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘದ
ಬಜೆಟ್ ಗಾತ್ರಕ್ಕೆ ತಾಳ-ಮೇಳವಿಲ್ಲ
ಬಿಜೆಪಿಯ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಸ್ಪಷ್ಟಬಜೆಟ್ನ್ನು ಮಂಡಿಸಿದ್ದಾರೆ. ಜಿಎಸ್ಟಿ ಸಂಗ್ರಹ, ಕೇಂದ್ರದಿಂದ ಬರವೇಕಾದ ಜಿಎಸ್ಟಿ, ಒಟ್ಟಾರೆ ಬಜೆಟ್ ಗಾತ್ರಕ್ಕೆ ತಾಳ-ಮೇಳವಿಲ್ಲದಂತಾಗಿದೆ. ಸರಿಯಾದ ಅಂಕಿ-ಸಂಖ್ಯೆಯನ್ನು ನೀಡದೇ ಮಂಡಿಸಿರುವ ಬಜೆಟ್ ಶೇ.25ರಷ್ಟುಸಾಲದಿಂದಲೆಯೇ ಕೂಡಿದೆ. ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅದರಲ್ಲಿಯೂ ರಾಯಚೂರು ಜಿಲ್ಲೆಗೆ ಹೇಳಿಕೊಳ್ಳುವ ಯೋಜನೆಯನ್ನು ಘೋಷಿಸದೇ ವಂಚಿಸಲಾಗಿದೆ.
ಎ.ವಸಂತ ಕುಮಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ರಾಜ್ಯ ಬಜೆಟ್ ಕೇವಲ ಪೇಪರ್ ಬಜೆಟ್
ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಕೇವಲ ಪೇಪರ್ ಬಜೆಟ್. ಏಕೆಂದರೆ ಚುನಾವಣೆ ಶೀಘ್ರದಲ್ಲಿ ನಡೆಯುವುದರಿಂದ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿ ಮಾಡುವುದು ಸಹಜ. ಇದರಿಂದಾಗಿ ಬಜೆಟ್ ಅಂಶಗಳು ಕಾರ್ಯರೂಪಕ್ಕೆ ಬರುವುದಿಲ್ಲ. ರಾಯಚೂರು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಮಂಜೂರಿಗೆ ಒತ್ತಾಯಿಸಿ ನಿರಂತರವಾಗಿ ಚಳವಳಿ ನಡೆದಿದೆ. ಆದರೆ ಸರ್ಕಾರ ಏಮ್ಸ್ ಮಾದರಿ ಆಸ್ಪತ್ರೆ ಮಾಡಲು ಹೊರಟಿರುವುದು ಕಣ್ಣೊರೆಸುವ ತಂತ್ರವಾಗಿದೆ. ಕಳೆದ ವರ್ಷ ನವಲಿ ಸಮಾನಾಂತರ ಜಲಾಶಯಕ್ಕೆ ಒಂದು ಸಾವಿರ ಕೋಟಿ ನಿಗದಿ ಪಡಿಸಿದ್ದರು. ಆದರೆ ಇದುವರೆಗೂ ಒಂದು ರೂಪಾಯಿ ಖರ್ಚಾಗಿಲ್ಲ.
ವೆಂಕಟರಾವ್ ನಾಡಗೌಡ ಶಾಸಕರು ಸಿಂಧನೂರು
ಆರ್ಥಿಕ ತಜ್ಞರಂತೆ ರೂಪಿಸಿರುವ ಬಜೆಟ್
ಇದೊಂದು ಅತ್ಯುತ್ತಮ ಜನಪರ ಬಜೆಟ್. ಚುನಾವಣೆ ಬಜೆಟ್ ಇದಲ್ಲ. ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಜನರು, ಮಹಿಳೆಯರು, ಎಲ್ಲ ವರ್ಗದ ಆಶೋತ್ತರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ತಜ್ಞರಂತೆ ಬಜೆಟ್ ರೂಪಿಸಿದ್ದಾರೆ. ಏಮ್ಸ್ ಮಾದರಿ ಆಸ್ಪತ್ರೆ ಇದೊಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಾದರಿಯಲ್ಲಿ ನಿರ್ಮಿಸಲು ಹೊರಟಿರುವ ಆಸ್ಪತ್ರೆಯಾಗಿದೆ. ಒಟ್ಟಾರೆ ಬಜೆಟ್ ಅಭಿವೃದ್ಧಿಯ ಪರವಾಗಿದೆ.
02 ಕೆ.ವಿರೂಪಾಕ್ಷಪ್ಪ ಕೆಫೆಕ್ ಅಧ್ಯಕ್ಷರು, ಸಿಂಧನೂರು
ಇದೊಂದು ಪ್ರಗತಿ ವಿರೋಧಿ ಬಜೆಟ್
ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ನಯ ವಂಚನೆಯಿಂದ ಕೂಡಿದೆ. ರಾಜ್ಯದ ಬಡವರ, ರೈತರ, ಕಾರ್ಮಿಕರ, ಸಣ್ಣ, ಮಧ್ಯಮ ವ್ಯಾಪಾರಿಗಳನ್ನು ಕುಕ್ಕಿ ಕುಕ್ಕಿ ತಿನ್ನುವ ಪ್ರಗತಿ ವಿರೋಧಿ ಬಜೆಟ್ ಇದಾಗಿದೆ. ಬಜೆಟ್‌ನ ಕೊರತೆ ತುಂಬಿಸಿಕೊಳ್ಳಲು ಪುನಃ ರು.75 ಸಾವಿರ ಕೋಟಿ ಸಾಲ ಮಾಡಲಾಗಿದೆ. 39182 ಲಕ್ಷ ಬಜೆಟ್‌ನಲ್ಲಿ ಬಡವರು, ರೈತರು, ಕಾರ್ಮಿಕರಿಗೆ ಯಾವುದೇ ಅನುಕೂಲ ಇಲ್ಲ. ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿಗೆ ಹಣ ಕಡಿತಗೊಳಿಸಿ ಮಠಮಾನ್ಯಗಳಿಗೆ ನೂರಾರು ಕೋಟಿ ಕೊಡಲಾಗಿದೆ. ಅಜ್ಞಾನ, ಮೂಢನಂಬಿಕೆ ಹೆಚ್ಚು ಮಾಡಲು ಜನರ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವುದು ಖಂಡನೀಯ.
ಡಿ.ಎಚ್.ಪೂಜಾರ್ ರಾಜ್ಯ ಕಾರ್ಯದರ್ಶಿ ಸಿಪಿಐಎಂಎಲ್ (ಆರ್‌ಐ)
ರಾಯಚೂರು ನಗರ: ಮೂರು ಪಕ್ಷಗಳಿಂದಲೂ ನಡೆದಿದೆ ಭರ್ಜರಿ ಟಿಕೆಟ್ ಲೆಕ್ಕಾಚಾರ