ದಾವಣಗೆರೆ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ವಿಚ್ಛೇದನ ಪಡೆದಿದ್ದ ಜೋಡಿಯೊಂದು ಒಂದಾದ ಘಟನೆ ನಡೆದಿದೆ.
ದಾವಣಗೆರೆ (ಜೂನ್ 29): ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನ ಪಡೆದಿದ್ದ ಜೋಡಿಯೊಂದು ದಾವಣಗೆರೆ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಒಂದಾದ ಘಟನೆ ನಡೆದಿದೆ. ದಾವಣಗೆರೆಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಮತ್ತೆ ಒಂದಾಗಿ ಬದುಕು ನಡೆಸುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಸಂಧಾನ ಪ್ರಕ್ರಿಯೆ ನಡೆಸಿ ಜೋಡಿ ಮತ್ತೆ ಒಂದಾಗಿ ದಾಂಪತ್ಯ ಜೀವನ ನಡೆಸುವ ಭಾಗ್ಯ ಕಲ್ಪಿಸಿದ್ದಾರೆ.
ದಾವಣಗೆರೆ ವಾಸಿಗಳಾದ ದಂಪತಿಗೆ 2007ರಲ್ಲಿ ವಿವಾಹ ನಡೆದಿತ್ತು. 2007 ರಿಂದ 2014 ರವರೆಗೆ ಸಣ್ಣಪುಟ್ಟ ಕೌಟುಂಬಿಕ ಕಲಹ ನಡೆದಿತ್ತು. ಇದರಿಂದ ಬೇಸತ್ತ ಪತ್ನಿಯು 2014 ರಲ್ಲಿ ಪತಿ ಸೇರಿದಂತೆ ಕುಟುಂಬದ ಕೆಲ ಸದಸ್ಯರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು ಪ್ರಕರಣದ ವಿಚಾರಣೆ ಮುಂದುವರಿದಿತ್ತು. ಈ ಸಂದರ್ಭದಲ್ಲಿ ಪತಿ ವಿಚ್ಛೇದನಕ್ಕೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
DAVANAGERE; ನಾಲ್ಕು ಬಾಲ್ಯವಿವಾಹಕ್ಕೆ ಬ್ರೇಕ್, ಕಣ್ತಪ್ಪಿಸಿ ಮದುವೆಯಾದವ ಅರೆಸ್ಟ್
ನ್ಯಾಯಾಲಯ ವಿಚಾರಣೆ ನಡೆಸಿ 2022 ರಲ್ಲಿ ಈ ಇಬ್ಬರಿಗೆ ವಿಚ್ಛೇದನಕ್ಕೆ ಅವಕಾಶ ಕೊಟ್ಟಿತ್ತು. ಜೊತೆಗೆ ಜೀವನಾಂಶವಾಗಿ ಪತಿಗೆ ಸೇರಿದ ಅರ್ಧ ಎಕರೆ ನೀರಾವರಿ ಜಮೀನು ನೀಡುವಂತೆ ಸೂಚಿಸಿತ್ತು. ಆದರೆ ಮಗಳು ತಂದೆ ಮೇಲಿನ ಪ್ರೀತಿ, ತಾಯಿಯನ್ನು ಮತ್ತೆ ಒಂದಾಗುವ ಹಾಗೇ ಪ್ರೇರಿಪಿಸಿತು. ಆಗ ಪತ್ನಿ ವಿಚೇದನದ ಬಳಿಕವೂ ಪತಿಯೊಂದಿಗೆ ಒಂದಾಗಿ ಜೀವನ ನಡೆಸಲು ಇಚ್ಛಿಸಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಳು. ಈ ಪ್ರಕರಣವನ್ನು ಜನತಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಅವರು, ಇಬ್ಬರ ಮನವೊಲಿಸಿ ವಿಚ್ಛೇದನ ಪಡೆದ ದಂಪತಿಗೆ ಮತ್ತೆ ಒಂದಾಗಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಾವಣಗೆರೆ ನಿವಾಸಿ ದಂಪತಿಗೆ ಜನತಾ ನ್ಯಾಯಾಲಯ ಇಬ್ಬರು ಒಟ್ಟುಗೂಡಿ ಜೀವನ ಸಾಗಿಸುವ ಅವಕಾಶ ಕಲ್ಪಿಸಿದೆ. 2011ರಲ್ಲಿ ವಿವಾಹದ ದಂಪತಿ 2020ರಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿ ವಿಚಾರಣೆ ಮುಂದುವರಿದಿತ್ತು. ಈ ಇಬ್ಬರ ದಂಪತಿಯ ಮನವೊಲಿಸಿದ ನ್ಯಾಯಾಧೀಶರು ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾಗಿಸುವ ಭಾಗ್ಯ ಕಲ್ಪಿಸಿದೆ. ಈ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ಇಬ್ಬರು ಒಂದಾಗಿದ್ದಾರೆ.
ದಲಿತ ಕಾಲನಿಗೆ ಉಡುಪಿಯ ಮಾಜಿ ಡಿಸಿ ಹೆಸರಿಟ್ಟ ನಿವಾಸಿಗಳು
ವಿಚ್ಛೇದನ ಪಡೆದ ಈ ಎರಡು ಜೋಡಿಗಳು ಮತ್ತೆ ಒಂದಾಗಿ ಜೀವನ ನಡೆಸಲು ಮುಂದಾಗಿರುವುದು ಇತಿಹಾಸದಲ್ಲೇ ಒಂದು ಮೈಲು ಗಲ್ಲಾಗಿದೆ. ಪತಿ ಮತ್ತು ಪತ್ನಿ ನಡುವೆ ಏನೇ ವೈಮನಸ್ಸು ಉಂಟಾದರೆ ಅದನ್ನು ಸರಿದೂಗಿಸಿಕೊಂಡು ಹೋಗುವ ಜಾಣ್ಮೆಯನ್ನು ಪ್ರತಿಯೊಂದು ದಂಪತಿ ಅಳವಡಿಸಿಕೊಂಡು ಹೋದರೆ ವೈವಾಹಿಕ ಜೀವನದಲ್ಲಿ ಯಾವುದೇ ವಿರಹ ಅಥವಾ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಕಿವಿಮಾತು ಹೇಳಿದ್ದಾರೆ.